ಕ್ರೇಜಿ ನ್ಯೂಸ್; ದೊಡ್ಡ ಸಕ್ಸಸ್‌ಗಾಗಿ ಸೌತ್ ನಿರ್ದೇಶಕನ ಜೊತೆ ಕೈ ಜೋಡಿಸಿದ ಸಲ್ಮಾನ್ ಖಾನ್!
ಬಾಲಿವುಡ್ ನಟ ಸಲ್ಮಾನ್ ಖಾನ್ ಸೋಲಿನ ಸುಳಿಗೆ ಸಿಲುಕಿದಾಗ ಸೌತ್ ಫಿಲ್ಮ್ ಮೇಕರ್ಸ್ ಕಡೆ ತಿರುಗಿ ನೋಡುತ್ತಾರೆ. ಸೌತ್ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಿ ಸಲ್ಲು ಗೆದ್ದ ಸಾಕಷ್ಟು ಉದಾಹರಣೆಗಳಿವೆ. ಇತ್ತೀಚೆಗೆ ಮತ್ತೆ ಬಾಲಿವುಡ್ ಬ್ಯಾಡ್‌ಬಾಯ್ ಹವಾ ಕಮ್ಮಿ ಆಗಿದೆ. ಇದೀಗ ಮತ್ತೊಬ್ಬ ತಮಿಳು ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ.
ಕಳೆದ ವರ್ಷ ದೀಪಾವಳಿ ಸಂಭ್ರಮದಲ್ಲಿ ಸಲ್ಮಾನ್ ಖಾನ್ ನಟನೆಯ 'ಟೈಗರ್-3' ಸಿನಿಮಾ ತೆರೆಕಂಡಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂತೂ ಇಂತೂ ಸಿನಿಮಾ ಒಂದುಮಟ್ಟಕ್ಕೆ ಗೆದ್ದಿತ್ತು. ಆದರೂ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ 3 ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟಿದ್ದಾರೆ. ಹಾಗಾಗಿ ಸಲ್ಲು ಅಭಿಮಾನಿಗಳು ಒಂದು ಸೂಪರ್ ಹಿಟ್ ಸಿನಿಮಾಗಾಗಿ ಕಾಯುತ್ತಿದ್ದಾರೆ.

ಸದ್ಯ 'ದಿ ಬುಲ್' ಎನ್ನುವ ಚಿತ್ರದಲ್ಲಿ ಸಲ್ಲು ನಟಿಸುವುದಾಗಿ ಹೇಳಲಾಗುತ್ತಿದೆ. ವಿಷ್ಣುವರ್ಧನ್ ನಿರ್ದೇಶನದ ಈ ಚಿತ್ರಕ್ಕೆ ಧರ್ಮ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ. ಈ ಸಿನಿಮಾ ಶುರುವಾಗುವ ಮುನ್ನ ಎ. ಆರ್ ಮುರುಗದಾಸ್ ನಿರ್ದೇಶನದಲ್ಲಿ ಸಲ್ಮಾನ್ ಖಾನ್ ನಟಿಸೋ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಪಿಂಕ್‌ವಿಲ್ಲಾ ವರದಿ ಮಾಡಿದೆ. ಮುಂದಿನ ವರ್ಷ ಈದ್ ಸಂಭ್ರಮದಲ್ಲಿ ಈ ಕ್ರೇಜಿ ಪ್ರಾಜೆಕ್ಟ್ ತೆರೆಗೆ ಬರುತ್ತದೆ ಎನ್ನಲಾಗುತ್ತಿದೆ.
ಎ. ಆರ್ ಮುರುಗದಾಸ್ ತಮಿಳಿನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈಗಾಗಲೇ ತಮ್ಮದೇ ಹಿಟ್ ಕಥೆಗಳನ್ನು ಬಾಲಿವುಡ್‌ನಲ್ಲಿ ರೀಮೆಕ್ ಮಾಡಿ ಗೆದ್ದಿದ್ದಾರೆ. ಇದೀಗ ಮತ್ತೆ ಹಿಂದಿ ಚಿತ್ರರಂಗಕ್ಕೆ ಹೋಗುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನಲಾಗ್ತಿದೆ. ಸಾಜಿದ್ ನಾಡಿಯವಾಲ ಈ ಚಿತ್ರಕ್ಕೆ ಬಂಡವಾಳ ಹೂಡುವುದಾಗಿ ಚರ್ಚೆ ನಡೀತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್‌ಗೆ ಮುರುಗದಾಸ್ ಮತ್ತೆ ಹಿಟ್ ಕೊಡ್ತಾರಾ? ಎನ್ನುವ ನಿರೀಕ್ಷೆ ಶುರುವಾಗಿದೆ.
2008ರಲ್ಲಿ 'ಗಜಿನಿ' ಸಿನಿಮಾ ಮೂಲಕ ಮುರುಗದಾಸ್ ಬಾಲಿವುಡ್ ಪ್ರವೇಶಿಸಿದ್ದರು. ತಮಿಳಿನಲ್ಲಿ ತಮ್ಮದೇ ನಿರ್ದೇಶನದಲ್ಲಿ ಸೂರ್ಯ ನಟಿಸಿ ಗೆದ್ದಿದ್ದ 'ಗಜಿನಿ' ಚಿತ್ರವನ್ನು ಅದೇ ಹೆಸರಿನಲ್ಲಿ ಹಿಂದಿಯಲ್ಲಿ ತೆರೆಗೆ ತಂದಿದ್ದರು. ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ಗಜಿನಿ' ಮೂಲಕ ಬಾಲಿವುಡ್‌ನಲ್ಲಿ ಮುರುಗದಾಸ್ ಸಂಚಲನ ಸೃಷ್ಟಿಸಿದ್ದರು.
ತಮಿಳಿನಲ್ಲಿ ಹಿಟ್ ಆಗಿದ್ದ ತಮ್ಮದೇ 'ತುಫಾಕಿ' ಚಿತ್ರವನ್ನು 10 ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ನಿರ್ಮಿಸಿದರು. 'ಹಾಲಿಡೇ' ಹೆಸರಿನಲ್ಲಿ ಬಂದಿದ್ದ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅಬ್ಬರಿಸಿದ್ದರು. 'ಅಕಿರಾ' ಮತ್ತೊಂದು ಹಿಂದಿ ಚಿತ್ರಕ್ಕೂ ಮುರುಗದಾಸ್ ಆಕ್ಷನ್ ಕಟ್ ಹೇಳಿದ್ದರು. ರಜನಿಕಾಂತ್ ನಟನೆಯ 'ದರ್ಬಾರ್' ಮುರುಗದಾಸ್ ನಿರ್ದೇಶಿಸಿದ ಕೊನೆಯ ಸಿನಿಮಾ.

4 ವರ್ಷಗಳಿಂದ ಯಾವುದೇ ಚಿತ್ರಕ್ಕೂ ಮುರುಗದಾಸ್ ಆಕ್ಷನ್ ಕಟ್ ಹೇಳಲಿಲ್ಲ. ಇದೀಗ ಸಲ್ಮಾನ್ ಖಾನ್ ಚಿತ್ರವನ್ನು ನಿರ್ದೇಶಿಸುವ ಬಗ್ಗೆ ಚರ್ಚೆ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ಈದ್ ಸಂಭ್ರಮದಲ್ಲಿ ಸಲ್ಲು ಸಿನಿಮಾಗಳನ್ನು ರಿಲೀಸ್ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಮುರುಗದಾಸ್ ಕಾಂಬಿನೇಷನ್ ಚಿತ್ರವನ್ನು ಸಹ ಈದ್ ರಿಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ.
ಇತ್ತೀಚೆಗೆ ಬಿಗ್‌ಬಾಸ್ 17 ಶೋ ನಿರೂಪಣೆ ಮಾಡಿ ಸಲ್ಮಾನ್ ಖಾನ್ ಗೆದ್ದಿದ್ದಾರೆ. 'ದಿ ಬುಲ್' ಸಿನಿಮಾ ಮೂಲಕ ವರ್ಷಾಂತ್ಯಕ್ಕೆ ತೆರೆ ಮೇಲೆ ಬರುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಸಿನಿಮಾ ಚಿತ್ರೀಕರಣ ಆರಂಭವಾಗಿಲ್ಲ. ಈ ವರ್ಷ ಸಲ್ಲು ಸಿನಿಮಾ ತೆರೆಗೆ ಬರೋದು ಅನುಮಾನ ಎನ್ನಲಾಗುತ್ತಿದೆ.


Click it and Unblock the Notifications











