ಸೀತಾ ಸ್ವಯಂವರ: ಯಶ್ ಹಾಗೂ ಸಾಯಿ ಪಲ್ಲವಿ ತೆರೆಹಂಚಿಕೊಳ್ಳುತ್ತಿರುವುದು ನಿಜವೇ?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಪದೇ ಪದೆ ಮುಂದಕ್ಕೆ ಹೋಗ್ತಿದೆ. ಜೂನ್ 4ಕ್ಕೆ ಬರಬೇಕಿದ್ದ ಸಿನಿಮಾ ಮುಂದೆ ಯಾವಾಗ ತೆರೆಗಪ್ಪಳಿಸುತ್ತೆ ಗೊತ್ತಿಲ್ಲ. 'ಟಾಕ್ಸಿಕ್' ಬಳಿಕ 'ರಾಮಾಯಣ' ಭಾಗ-1 ಸಿನಿಮಾ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಯಾಕೋ ಉಲ್ಟಾ ಆಗುವ ಸಾಧ್ಯತೆಗಳಿವೆ. ಡಿಸೆಂಬರ್ ಕೊನೆ ವಾರದಲ್ಲಿ ರಾಯನ ಎಂಟ್ರಿ ಆಗಬಹುದು ಎನ್ನುವ ಗುಸುಗುಸು ಶುರುವಾಗಿದೆ.
ಸದ್ಯ 'ರಾಮಾಯಣ' ಚಿತ್ರದ ಬಗ್ಗೆ ಹೊಸ ಸುದ್ದಿ ಹರಿದಾಡ್ತಿದೆ. ಸೀತಾ ಸ್ವಯಂವರದ ಸನ್ನಿವೇಶವನ್ನು ಚಿತ್ರೀಕರಣ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿರುವುದು ಗೊತ್ತೇಯಿದೆ. ಹಾಗಾಗಿ ಇಬ್ಬರೂ ಸ್ವಯಂವರ ಸನ್ನಿವೇಶದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಬಾಲಿವುಡ್ ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ವರದಿ ಆಗುತ್ತಿದೆ.

ವಾಲ್ಮೀಕಿ ರಾಮಾಯಣದ ಪ್ರಕಾರ ಸೀತಾ ಸ್ವಯಂವರದಲ್ಲಿ ರಾವಣ ಭಾಗಿ ಆಗಿರಲಿಲ್ಲ. ಹಾಗಾಗಿ ಯಶ್ ಹಾಗೂ ಸಾಯಿ ಪಲ್ಲವಿ ಸ್ವಯಂವರ ಸನ್ನಿವೇಶದಲ್ಲಿ ನಟಿಸೋಕೆ ಹೇಗೆ ಸಾಧ್ಯ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಅರಣ್ಯವಾಸದ ಸಂದರ್ಭದಲ್ಲಿ ರಾವಣನು ಸೀತೆಯನ್ನು ಅಪಹರಿಸುತ್ತಾನೆ, ಅದೇ ಸಮಯದಲ್ಲಿ ಮೊದಲ ಬಾರಿ ಇಬ್ಬರೂ ಮುಖಾಮುಖಿ ಆಗಿದ್ದರು ಎನ್ನುವ ವಾದವೂ ಇದೆ. ಹಾಗಾಗಿ ಯಶ್ ಹಾಗೂ ಸಾಯಿ ಪಲ್ಲವಿ ಬೇರೆ ಸನ್ನಿವೇಶದಲ್ಲಿ ನಟಿಸುತ್ತಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಮಿಥಿಲೆ ರಾಜ್ಯದ ಭಾರೀ ಸೆಟ್ ಹಾಕಿ ಚಿತ್ರೀಕರಣ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. 'ರಾಮಾಯಣ' ಮೊದಲ ಭಾಗದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದ್ದು 2ನೇ ಭಾಗದ ಚಿತ್ರೀಕರಣ ಕೂಡ ಆರಂಭಿಸಿರುವುದಾಗಿ ಹೇಳುತ್ತಿದ್ದಾರೆ. ಹಾಗಾಗಿ ಇದು 2ನೇ ಭಾಗದ ದೃಶ್ಯಗಳ ಚಿತ್ರೀಕರಣ ಆಗಿರಬಹುದು ಎನ್ನುವ ವಾದವೂ ಇದೆ. ಈಗಾಗಲೇ 'ರಾಮಾಯಣ' ಟೀಸರ್ ಬಿಡುಗಡೆ ಆಗಿ ಗಮನ ಸೆಳೆದಿದೆ. ಕೆಲವರು ಟೀಕಿಸಿದ್ದಾರೆ. ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಂಡು ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

ಸೀತೆ ಸ್ವಯಂವರದಲ್ಲಿ ಶಿವಧನಸ್ಸು ಎತ್ತಲು ಬಂದಿದ್ದ ರಾಜಕುಮಾರರ ಪಟ್ಟಿಯಲ್ಲಿ ಕೂಡ ರಾವಣನ ಹೆಸರು ಇರಲಿಲ್ಲ. ಬಳಿಕ ಕೆಲ ಜಾನಪದ ರಾಮಾಯಣ ಕಾವ್ಯಗಳಲ್ಲಿ ಸ್ವಯಂವರದಲ್ಲಿ ರಾವಣ ಶಿವಧನಸ್ಸು ಎತ್ತಲು ಸಾಧ್ಯವಾಗದೇ ಮುಖಭಂಗ ಅನುಭವಿಸಿದ್ದ. ಅದೇ ಕೋಪಕ್ಕೆ ಸೀತೆಯನ್ನು ಅಪಹರಿಸಿದ ಎನ್ನುವ ಕಥೆಯಿದೆ. ಆದರೆ ವಾಲ್ಮೀಕಿ ರಾಮಾಯಾಣ ಕಾವ್ಯ ಆಧರಿಸಿ ಸಿನಿಮಾ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ.
'ರಾಮಾಯಣ' ಮೊದಲ ಭಾಗದಲ್ಲಿ ರಣ್‌ಬೀರ್ ಕಪೂರ್ ಜೊತೆ ನಾನು ತೆರೆ ಹಂಚಿಕೊಂಡಿಲ್ಲ ಎಂದು ಸ್ವತಃ ಯಶ್ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸ್ವಯಂವರ ಸನ್ನಿವೇಶದಲ್ಲಿ ರಾವಣನಾಗಿ ಯಶ್ ಕಾಣಿಸಿಕೊಳ್ಳುವುದು ಅನುಮಾನ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. 4000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸನ್ನಿ ಡಿಯೋಲ್(ಹನುಮಂತ), ರಕುಲ್ ಪ್ರೀತ್‌ಸಿಂಗ್(ಶೂರ್ಪನಖಿ), ಕಾಜಲ್ ಅಗರ್‌ವಾಲ್(ಮಂಡೋದರಿ), ರವಿ ದುಬೆ(ಲಕ್ಷ್ಮಣ) ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ನಿತೇಶ್ ತಿವಾರಿ 'ರಾಮಾಯಣ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಅಕ್ಟೋಬರ್ ಕೊನೆ ವಾರದಲ್ಲಿ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. 2ನೇ ಭಾಗ ನೋಡಲು ಇನ್ನು ಒಂದು ವರ್ಷ ಕಾಯಬೇಕು. ಪೌರಾಣಿಕ ಪಾತ್ರದಲ್ಲಿ ಅದರಲ್ಲೂ ರಾವಣನಾಗಿ ಯಶ್ ಆರ್ಭಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಶೀಘ್ರದಲ್ಲೇ ಟೀಸರ್ ಕೂಡ ಬಿಡುಗಡೆ ಆಗಲಿದೆ.


Click it and Unblock the Notifications