ದೃಶ್ಯಂ 3 ; ಮಲಯಾಳಂಗೆ ಸೆಡ್ಡು ಹೊಡೆಯುತ್ತಾ ಬಾಲಿವುಡ್ ? ಮೋಹನ್ ಲಾಲ್ ಮುಂಚೆ ರಿಲೀಸ್ ಡೇಟ್ ಘೋಷಿಸಿದ ಅಜಯ್ ದೇವಗನ್
ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಚಿತ್ರ ''ದೃಶ್ಯಂ''. ಕ್ರೈಂ ಥ್ರಿಲ್ಲರ್ ಜಾನರಿನ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಭಾರೀ ಹಣವನ್ನು ಗಳಿಸುವುದಲ್ಲದೇ ಮೋಹನ್ ಲಾಲ್ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸಿತ್ತು. ಮಲಯಾಳಂನಲ್ಲಿ ತೆರೆಗೆ ಬಂದು ಆ ನಂತರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಕೂಡ ರಿಮೇಕ್ ಆದ ಈ ಚಿತ್ರದ...
ಕನ್ನಡದ ಅವತರಣಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸುಗಾರ ಡಾ.ವಿ.ರವಿಚಂದ್ರನ್ ಅತ್ಯದ್ಭುತವಾಗಿ ಅಭಿನಯಿಸಿದ್ದರು. ಹಿಂದಿಯಲ್ಲಿ ಅಜಯ್ ದೇವಗನ್ ಪಾತ್ರಕ್ಕೆ ಜೀವ ತುಂಬಿದ್ದರು. ಇನ್ನು ಎಲ್ಲರಿಗೆ ಗೊತ್ತಿರುವಂತೆ ಈಗ ಪ್ಯಾನ್ ಇಂಡಿಯಾ ಕಾಲ. ಈ ಕಾಲದಲ್ಲಿ ರಿಮೇಕ್ ಚಿತ್ರಕ್ಕೆ ಉಳಿಗಾಲ ಇಲ್ಲ ಎನ್ನುವ ಮಾತು ಇದೆ.

ಆದರೆ.. ''ದೃಶ್ಯಂ 3'' ವಿಚಾರದಲ್ಲಿ ಈ ಮಾತು ಅನ್ವಯವಾಗಲ್ಲ. ಯಾಕೆಂದರೆ.. ಈ ಚಿತ್ರಕ್ಕೆ ಎಲ್ಲಾ ಭಾಷೆಯಲ್ಲಿ ಅದ್ರದ್ದೇ ಆದ ಅಭಿಮಾನಿ ಬಳಗ ಇದೆ. ಅದರಲ್ಲಿಯೂ ಮಲಯಾಳಂ ಮತ್ತು ಕನ್ನಡ ಹೊರತು ಪಡಿಸಿದರೆ ಹಿಂದಿಯಲ್ಲಿ ಈ ಸರಣಿಗೆ ಭಾರೀ ಬೇಡಿಕೆ ಇದೆ.
''ದೃಶ್ಯಂ'' ಬ್ರ್ಯಾಂಡ್‌ಗೆ ಉತ್ತರ ಭಾರತದ ಚಿತ್ರ ರಸಿಕರು ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿದ್ದಾರೆ ಅಂದರೆ ವಿಜಯ್ ಸಲಗಾಂವಕರ್ ತನ್ನ ಕುಟುಂಬದ ಜೊತೆ ಅಕ್ಟೋಬರ್ 2ರಂದು ಪಣಜಿಗೆ ಮಾಡಿದ್ದ ಪ್ರವಾಸ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಜನ ಇನ್ನೂ ಮರೆತಿಲ್ಲ. ಇವತ್ತು ಕೂಡ ಮೀಮ್‌ಗಳ ರೂಪದಲ್ಲಿ ಈ ಪ್ರವಾಸ ಕಥನ ಜೀವಂತವಾಗಿದೆ.
ಹೀಗಾಗಿಯೇ ಮಲಯಾಳಂನಲ್ಲಿ ಮೋಹನ್ ಲಾಲ್ ಮತ್ತು ಜೀತು ಜೋಸೆಫ್ ಈ ವರ್ಷದ ಆರಂಭದಲ್ಲಿ ''ದೃಶ್ಯಂ 3'' ಘೋಷಣೆ ಮಾಡಿದಾಗ ಹಿಂದಿ ಚಿತ್ರಪ್ರೇಮಿಗಳು ಎಲ್ಲರಿಗಿಂತ ಹೆಚ್ಚು ಎಕ್ಸೈಟ್ ಆಗಿದ್ದರು. ವಿಜಯ್ ಸಲಗಾಂವಕರ್ ಮತ್ತೆ ಮರಳಿ ಬರುತ್ತಾನೆ ಎಂದು ಖುಷಿಯಾಗಿದ್ದರು. ಈಗ ಈ ಖುಷಿ ಇನ್ನೂ ಹೆಚ್ಚಾಗಿದೆ. ಯಾಕೆಂದರೆ ಹಿಂದಿಯಲ್ಲಿ ''ದೃಶ್ಯಂ 3'' ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.
ಹೌದು, ''ದೃಶ್ಯಂ 3'' ಚಿತ್ರದ ಬಿಡುಗಡೆಯ ದಿನಾಂಕವನ್ನು ಇಂದು ( ಡಿಸೆಂಬರ್ 22 ) ಅಜಯ್ ದೇವಗನ್ ಅಧಿಕೃತವಾಗಿ ಘೋಷಿಸಿದ್ದಾರೆ. ಮುಂದಿನ ವರ್ಷದ ಗಾಂಧಿ ಜಯಂತಿಯಂದು ಅಂದರೆ ಅಕ್ಟೋಬರ್ 2ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಕೊನೆಯ ಆಟಕ್ಕೆ ವಿಜಯ್ ಸಲಗಾಂವಕರ್ ಸಿದ್ಧನಾಗಿದ್ದಾನೆ ಎಂದು ಹೇಳಿದ್ದಾರೆ. ಬಿಡುಗಡೆಯ ದಿನಾಂಕದ ಜೊತೆ ಒಂದು ನಿಮಿಷದ ಟೀಸರ್ ಕೂಡ ಬಿಡುಗಡೆ ಮಾಡಿದ್ಧಾರೆ.

ಅಂದ್ಹಾಗೇ ಮಲಯಾಳಂನಲ್ಲಿ ''ದೃಶ್ಯಂ 3'' ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಮಾಹಿತಿ ಇಲ್ಲ. ಮೋಹನ್ ಲಾಲ್ ಮತ್ತು ಜೀತು ಜೋಸೆಫ್ ಬಿಡುಗಡೆಯ ದಿನಾಂಕವನ್ನು ಇನ್ನು ರಿವೀಲ್ ಮಾಡಿಲ್ಲ. ಆದರೆ ಆಗಲೇ ಹಿಂದಿಯಲ್ಲಿ ''ದೃಶ್ಯಂ 3'' ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ ಮಾಡಲಾಗಿದೆ.
ಹೀಗಾಗಿ ಮಲಯಾಳಂಗಿಂತ ಮೊದಲೇ ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗುತ್ತಾ ಎನ್ನುವ ಪ್ರಶ್ನೆ ಈಗ ಹಲವರಲ್ಲಿದೆ. ಆದರೆ, ಹೀಗಾಗುವುದು ಅಸಾಧ್ಯ. ಯಾಕೆಂದರೆ.. ಜೀತು ಜೋಸೆಫ್ ತುಂಬಾ ಹಿಂದೆಯೇ ಈ ವಿಚಾರದಲ್ಲಿ ಖಂಡ ತುಂಡ ಉತ್ತರ ನೀಡಿದ್ದಾರೆ. ಜಾರ್ಜ್ ಕುಟ್ಟಿಯ ಕಥೆಯನ್ನು ಜಗತ್ತು ಕಣ್ತುಂಬಿಕೊಂಡ ನಂತರವಷ್ಟೇ ಬೇರೆ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಬೇಕೆಂದು ಷರತ್ತು ಹಾಕಿದ್ದಾರೆ.
ಇನ್ನು ಮೋಹನ್ ಲಾಲ್ ಈಗಾಗಲೇ ''ದೃಶ್ಯಂ 3'' ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಹೀಗಾಗಿ ಹಿಂದಿಯಲ್ಲಿ ''ದೃಶ್ಯಂ 3'' ತೆರೆಗೆ ಬರುವ ಮುನ್ನವೇ ಮಲಯಾಳಂನಲ್ಲಿ ''ದೃಶ್ಯಂ 3'' ಬರಲಿದೆ. ಮುಂದಿನ ವರ್ಷದ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಮಲಯಾಳಂನ ''ದೃಶ್ಯಂ 3'' ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











