Cannes 2023: ಪಿಂಕ್ ಗೌನ್, ಮೊಸಳೆ ನೆಕ್ಲೆಸ್ ತೊಟ್ಟ ಊರ್ವಶಿ: ರೆಡ್ ಕಾರ್ಪೆಟ್ ಮೇಲೆ ಅಪ್ಸರೆ ಮಾನುಷಿ
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕೇನ್ಸ್ ಚಿತ್ರೋತ್ಸವ ಬಾಲಿವುಡ್ ಬೆಡಗಿಯರ ಎಂಟ್ರಿಯಿಂದ ರಂಗೇರಿದೆ. ಅನುಷ್ಕಾ ಶರ್ಮಾಗೂ ಮುನ್ನ ಇಶಾ ಗುಪ್ತಾ, ಮಾನುಷಿ ಚಿಲ್ಲಾರ್, ಸಾರಾ ಅಲಿಖಾನ್ ಹಾಗೂ ಊರ್ವಶಿ ರೌಟೇಲಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ವೈರಲ್ ಆಗ್ತಿದೆ. ಒಬ್ಬರಿಗಿಂತ ಒಬ್ಬರು ಬಹಳ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಎಲ್ಲರಿಗಿಂತ ಮುನ್ ಇಶಾ ಗುಪ್ತಾ ಬಿಳಿ ಬಣ್ಣದ ಸ್ಟೈಲಿಶ್ ಗೌನ್‌ನಲ್ಲಿ ಕೇನ್ಸ್ ಚಿತ್ರೋತ್ಸವದಲ್ಲಿ ಮಿಂಚಿದ್ದರು. ನಂತರ ಎಲ್ಲರ ಗಮನ ಸೆಳೆದಿದ್ದು ಸಾರಾ ಅಲಿಖಾನ್ ದೇಸಿ ಲುಕ್. ಲೆಹೆಂಗಾದಲ್ಲಿ ನವಾಬ್ ಖಾಂದಾನ್ ಚೆಲುವೆ ಮೋಡಿ ಮಾಡಿದ್ದು ಗೊತ್ತೇಯಿದೆ. ಇದೀಗ ಊರ್ವಶಿ ರೌಟೇಲಾ ಹಾಗೂ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲಾರ್ ರೆಕ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಕಮಾಲ್ ಮಾಡಿದ್ದಾರೆ. ಪಿಂಕ್ ಕಲರ್ ಗೌನ್‌ನಲ್ಲಿ 'ಐರಾವತ' ಸಿನಿಮಾ ಬೆಡಗಿ ಕಂಗೊಳಿಸಿದ್ದಾರೆ.

ಊರ್ವಶಿ ತೊಟ್ಟಿದ್ದ ಟ್ಯೂಲ್ ಗೌನ್‌ಗಿಂತ ಗಮನ ಸೆಳೆದಿದ್ದು ಆಕೆಯ ನೆಕ್ಲೆಸ್. ಮೊಸಳೆ ಮರಿಗಳ ರೀತಿ ಕಾಣುವ ಚಿನ್ನದ ಬಣ್ಣದ ವಿಭಿನ್ನ ನೆಕ್ಲೆಸ್ ಆಕೆಯ ಕುತ್ತಿಗೆಯಲ್ಲಿತ್ತು. 3 ಮೊಸಳೆ ಮರಿಗಳು ಆಕೆಯ ಕುತ್ತಿಗೆಯನ್ನು ಸುತ್ತುವರೆದಂತೆ ಇದ್ದ ಆಭರಣ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ. ಇನ್ನು ಕಿವಿಯಲ್ಲಿ ಅದೇ ತರಹದ ಮೊಸಳೆ ಡಿಸೈನಿನ ಓಲೆ ನೇತಾಡುತ್ತಿತ್ತು.
'ಐರಾವತ' ಚಿತ್ರದಲ್ಲಿ ನಟಿಸಿದ್ದ ಊರ್ವಶಿ
ಬಾಲಿವುಡ್ ಬೆಡಗಿ ಊವರ್ಶಿ ರೌಟೇಲಾ ಕನ್ನಡದ 'ಐರಾವತ' ಸಿನಿಮಾದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದರು. ಎ. ಪಿ ಅರ್ಜುನ್ ನಿರ್ದೇಶನದ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಇನ್ನು ಊರ್ವಶಿ ನಟಿಸಿದ್ದಕ್ಕಿಂತ ಐಟಂ ಸಾಂಗ್‌ಗಳಲ್ಲಿ ಕುಣಿದಿರೋದೇ ಹೆಚ್ಚು. ಇನ್ನು ಜನಪ್ರಿಯ ವೇದಿಕೆಗಳಲ್ಲಿ ರ್ಯಾಂಪ್ ವಾಕ್ ಮಾಡಿ ಸುದ್ದಿ ಮಾಡಿದ್ದಾರೆ. ಇತ್ತೀಚೆಗೆ ತೆಲುಗಿನ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ಬಿಂದಾಸ್ ಸಾಂಗ್‌ಗೆ ಕುಣಿದಿದ್ದರು.

ಅಪ್ಸರೆಯಂತೆ ಮಿಂಚಿದ ಮಾನುಷಿ
ಇನ್ನು ಮಾಜಿ ವಿಶ್ವ ಸುಂದರಿ ಇದೇ ಮೊದಲ ಬಾರಿಗೆ ಕೇನ್ಸ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಬಿಳಿ ಬಣ್ಣದ ಡಿಸೈನರ್ ಗೌನ್‌ನಲ್ಲಿ ಆಕೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡು ಪಾಪರಾಜಿಗಳ ಕಡೆ ಕೈ ಬೀಸಿದ್ದಾರೆ. ತೋಳುಗಳಿಲ್ಲ ಡೀಪ್ ನೆಕ್ ಗೌನ್‌ನಲ್ಲಿ ಚೆಲುವೆ ಮಿಂಚಿದ್ದಾರೆ. ಮಿನಿಮಲ್ ಮೇಕಪ್‌ನಲ್ಲಿ ಅಪ್ಸರೆಯ ರೀತಿ ಮಿಂಚಿದ್ದಾರೆ.
ಫ್ರಾನ್ಸ್ ತಲುಪಿದ ಅನುರಾಗ್ ಕಶ್ಯಪ್
ಕೇನ್ಸ್ ಚಿತ್ರೋತ್ಸವಕ್ಕೆ ಅನುರಾಜ್ ಕಶ್ಯಪ್ ನಿರ್ದೇಶನದ 'ಕೆನೆಡಿ' ಸಿನಿಮಾ ಆಯ್ಕೆ ಆಗಿದೆ. ಹಾಗಾಗಿ ಅನುರಾಜ್ ಕಶ್ಯಪ್ ಕೂಡ ಈಗಾಗಲೇ ಫ್ರಾನ್ಸ್ ತಲುಪಿದ್ದು ಚಿತ್ರೋತ್ಸವದಲ್ಲಿ ಭಾಗಿ ಆಗಲಿದ್ದಾರೆ. ಸನ್ನಿ ಲಿಯೋನ್, ಮೇಘ ಬರ್ಮನ್, ಅಭಿಲಾಷ್ ತಪ್ಲಿಯಲ್ ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಇದ್ದಾರೆ. 'ಕೆನೆಡಿ' ಜೊತೆಗೆ 'ಅಗ್ರಾ' ಮತ್ತು 'ಇಶಾನು' ಸಿನಿಮಾಗಳು ಈಗಾಗಲೇ ಅಲ್ಲಿ ಪ್ರೀಮಿಯರ್ ಆಗಿದೆ.

ಮಗಳೊಟ್ಟಿಗೆ ಐಶ್ವರ್ಯ ರೈ ಎಂಟ್ರಿ
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕೂಡ ಮಗಳ ಸಮೇತ ಈಗಾಗಲೇ ಫ್ರಾನ್ಸ್ ತಲುಪಿದ್ದಾರೆ. ಹಲವು ಬಾರಿ ಐಶ್ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ ಕೂಡ ಚಿತ್ರೋತ್ಸವಕ್ಕೆ ಮಗಳನ್ನು ಕರೆದುಕೊಂಡು ಹೋಗಿದ್ದರು. ಐಶ್ ರೆಡ್ ಕಾರ್ಪೆಟ್ ಲುಕ್ ಹೇಗಿರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಮುಂಬೈನಿಂದ ಫ್ರಾನ್ಸ್‌ಗೆ ಹೊರಟ ಐಶ್ವರ್ಯ ರೈ ಕ್ಯಾಮರಾಗಳ ಕಣ್ಣಿಗೆ ಬಿದ್ದಿದ್ದರು.


Click it and Unblock the Notifications











