ಬೋಲ್ಡ್ ದೃಶ್ಯಕ್ಕೆ ಕತ್ತರಿ, ಅಸಭ್ಯ ಪದಗಳಿಗೆ ಬ್ರೇಕ್; ಎ. ಹರ್ಷ 'ಬಾಘಿ- 4' ಸೆನ್ಸಾರ್ ಪಜೀತಿ
ಟೈಗರ್ ಶ್ರಾಫ್ ಹಾಗೂ ಸಂಜಯ್ ದತ್ ನಟನೆಯ 'ಬಾಘಿ- 4' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಕನ್ನಡ ನಿರ್ದೇಶಕ ಎ. ಹರ್ಷ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಒಟ್ಟು 23 ಕಟ್‌ಗಳು ಮತ್ತು ಒಂದಷ್ಟು ಆಡಿಯೋ ಬದಲಾವಣೆಗೆ ಸೂಚಿಸಿ ಅಂತಿಮವಾಗಿ 'ಎ' ಸರ್ಟಿಫಿಕೇಟ್ ಕೊಟ್ಟಿದೆ.
ಅತಿಯಾದ ಕ್ರೌರ್ಯ ಹಾಗೂ ರಕ್ತಪಾತದ ಸನ್ನಿವೇಶಗಳು ಚಿತ್ರದಲ್ಲಿದೆ. ಬೋಲ್ಡ್ ಸನ್ನಿವೇಶಗಳು ಇರುವುದಕ್ಕೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಈಗಾಗಲೇ 'ಬಾಘಿ- 4' ಚಿತ್ರದ ಟೀಸರ್, ಸಾಂಗ್ಸ್ ಹಾಗೂ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದು ಬಾಲಿವುಡ್ ಅಂಗಳದಲ್ಲಿ ನಿರ್ದೇಶಕ ಹರ್ಷ ಚೊಚ್ಚಲ ಸಿನಿಮಾ. ಕಳೆದೊಂದು ವರ್ಷದಿಂದ ಮುಂಬೈನಲ್ಲೇ ಅವರು ಬೀಡುಬಿಟ್ಟಿದ್ದಾರೆ.

ಬೆತ್ತಲಾಗುವ ಸನ್ನಿವೇಶಕ್ಕೆ ಕತ್ತರಿ ಬಿದ್ದಿದೆ. ಇನ್ನು ಶವಪೆಟ್ಟಿಗೆಯ ಮೇಲೆ ಪಾತ್ರವೊಂದು ನಿಂತಿರುವ ದೃಶ್ಯವನ್ನು ತೆಗೆದು ಹಾಕಲಾಗಿದೆ. ದೀಪ ಜ್ಯೋತಿಯಲ್ಲಿ ಸಿಗರೇಟ್ ಹಚ್ಚುವ ಒಂದು ಸೆಕೆಂಡ್‌ನ ಶಾಟ್ ತೆಗೆದು ಹಾಕಿದ್ದಾರೆ.
ಯೇಸುಕ್ರಿಸ್ತನ ಪ್ರತಿಮೆಗೆ ಚಾಕುವನ್ನು ಎಸೆಯುವುದು 'ಯೇ ಮೇರಾ ಹುಸ್ನ್' ಹಾಡಿನಲ್ಲಿ, ಸಂಜಯ್ ದತ್ ಅವರ ಪಾತ್ರವು ಕತ್ತರಿಸಿದ ಕೈಯಿಂದ ಸಿಗರೇಟ್ ಹಚ್ಚುವ ದೃಶ್ಯಕ್ಕೂ ಕತ್ತರಿ ಹಾಕಲಾಗಿದೆ. ಇದೆಷ್ಟೇ ಅಲ್ಲ ಹಲವು ಹಿಂಸಾತ್ಮಕ ದೃಶ್ಯಗನ್ನು ಟ್ರಿಮ್ ಮಾಡಲಾಗಿದೆ. ಸಂಭಾಷಣೆ ವಿಚಾರಕ್ಕೆ ಬಂದ್ರೆ "ಭಾಯಿ ತುಝೆ ಕಾಂಡೋಮ್ ಮೇ ಹಿ ರೆಹನಾ ಚಾಹಿಯೇ ಥಾ" ಎಂಬ ಸಂಭಾಷಣೆಯಲ್ಲಿ "ಕಾಂಡೋಮ್" ಪದವನ್ನು ಮ್ಯೂಟ್ ಮಾಡಲಾಗಿದೆ. "ಫಿಂಗರಿಂಗ್" ಎಂಬ ಪದಕ್ಕೆ ಬದಲಾಗಿ ಬೇರೆ ಪದ ಹಾಕಿದ್ದಾರೆ.
ಈಗಾಗಲೇ 'ಬಾಘಿ- 4' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಇದು ಸೂಪರ್ ಹಿಟ್ 'ಬಾಘಿ' ಸರಣಿಯ ಹೊಸ ಸಿನಿಮಾ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಸಿನಿಮಾ 5 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಲು ಟಿಕೆಟ್ ದರ ಕಮ್ಮಿ ಮಾಡಿದ್ದಾರೆ. ಮೊದಲ ದಿನ ಪ್ರತಿ ಟಿಕೆಟ್ ಮೇಲೆ 50% ರಿಯಾಯಿತಿ ಕೊಟ್ಟಿದ್ದಾರೆ. ಈ ಹಿಂದೆ ಕೂಡ ಕೆಲ ಚಿತ್ರಗಳ ಟಿಕೆಡ್ ದರ ಇದೇ ರೀತಿ ಕಮ್ಮಿ ಮಾಡಿದ್ದರು.

ಹರ್ನಾಜ್ ಸಂಧು ಹಾಗೂ ಸೋನಂ ಬಜ್ವಾ ಚಿತ್ರದಲ್ಲಿ ನಾಯಕಿಯರಾಗಿ ಅಬ್ಬರಿಸಿದ್ದಾರೆ. ಅವರಿಗೆ ಒಳ್ಳೆ ಪಾತ್ರಗಳೇ ಸಿಕ್ಕಿದೆ. ಬೆಂಗಾಲ್ ಫೈಲ್ಸ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 'ಬಾಘಿ- 4' ಚಿತ್ರಕ್ಕೆ ಪೈಪೋಟಿ ಕೊಡಲಿದೆ. ಕನ್ನಡದಲ್ಲಿ 'ಭಜರಂಗಿ', 'ಭಜರಂಗಿ-2', 'ವೇದ' ರೀತಿಯ ಚಿತ್ರಗಳನ್ನು ಕಟ್ಟಿಕೊಟ್ಟಿದ್ದ ಹರ್ಷ ತೆಲುಗಿನಲ್ಲಿ 'ಭೀಮ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಆ ಚಿತ್ರದಲ್ಲಿ ಅವರ ಕೆಲಸ ನೋಡಿ ಸಾಜಿದ್ ನಾಡಿಯಾವಾಲ 'ಬಾಘಿ- 4' ಸಿನಿಮಾ ಅವಕಾಶ ಕೊಟ್ಟಿದ್ದಾರೆ. ಈ ವೀಕೆಂಡ್ ಸಿನಿಮಾ ಭವಿಷ್ಯ ನಿರ್ಧಾರವಾಗಲಿದೆ.


Click it and Unblock the Notifications











