15 ವರ್ಷದ ಸಂಸಾರ, ಮಾನಸಿಕ ಹಿಂಸೆ, ವಿಚ್ಛೇದನದ ನರಕಯಾತನೆ ; ಮಗನ ಸಮಾಧಿ ಎದುರು ಬಿಕ್ಕಿ ಬಿಕ್ಕಿ ಅತ್ತ 'ಉಪೇಂದ್ರ' ನಟಿ
ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಮನೆ-ಗಂಡ-ಸಂಸಾರ ಎಂದು ಬ್ಯುಸಿಯಾಗುತ್ತಾರೆ. ಮಕ್ಕಳ ಲಾಲನೆ ಪಾಲನೆಯಲ್ಲಿಯೇ ತಮ್ಮ ಖುಷಿ ಕಾಣುತ್ತಾರೆ. ತಮ್ಮ ವೃತ್ತಿ ಬದುಕು, ಕನಸು ಮತ್ತು ತಮ್ಮ ಅಸ್ತಿತ್ವವನ್ನೇ ಬಲಿ ಕೊಡ್ತಾರೆ.
ಆದರೆ.. ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ಕೆಲ ಸೆಲೆಬ್ರೆಟಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರನ್ನು ಇವರು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ ? ಅವರೇ ಕಾಡಿಸಿ ಪೀಡಿಸಿ ನಿರಾಸೆ ಮಾಡುತ್ತಾರೆ.
ಪರಸ್ಪರ ಪ್ರೀತಿ ವಿಶ್ವಾಸ.. ಗೌರವ.. ನಂಬಿಕೆ..ಬದ್ಧತೆಯ ಬದಲು ಸಾಂಸಾರಿಕ ಜೀವನದಲ್ಲಿ ಅನೈತಿಕ ಸಂಬಂಧ .. ಕೌಂಟಬಿಕ ಕಲಹ .. ವೈಮನಸ್ಸು .. ಸಂಶಯ .. ಮಾನಸಿಕ-ದೈಹಿಕ ಕಿರುಕುಳ.. ಇತ್ಯಾದಿ ವಿಚಾರಗಳು ಮನೆ ಮಾಡಿ ಹೃದಯ ಛಿದ್ರ ಛಿದ್ರವಾಗುತ್ತೆ.

ಆಗ ವಿಚ್ಚೇದನ ಪಡೆಯದೇ ಬೇರೆ ದಾರಿ ಇರುವುದಿಲ್ಲ. ಈ ನೋವಿನ ನಡುವೆ ಹೆತ್ತ ಮಗ ಕಣ್ಣೆದುರೆ ಕೊನೆಯುಸಿರೆಳೆದು ಮಣ್ಣಲ್ಲಿ ಮಣ್ಣಾದರೆ ಆ ವ್ಯಕ್ತಿಯ ಮಾನಸಿಕ ಸ್ಥಿತಿ ಹೇಗಿರಬೇಡ..? ಇಂತಹದ್ದೇ ಒಂದು ಮಾನಸಿಕ ಆಘಾತ, ತ್ಯಾಗ ಮತ್ತು ಹೋರಾಟದ ಕವಲು ದಾರಿಯಲ್ಲಿ ನಿಂತಿದ್ದಾರೆ ಬಾಲಿವುಡ್‌ನ ಖ್ಯಾತ ನಟಿ ಸೆಲಿನಾ ಜೇಟ್ಲಿ.
ಹೌದು, ಸೆಲಿನಾ ಜೇಟ್ಲಿ.. 2001ರ ಮಿಸ್ ಇಂಡಿಯಾ. ಅದೇ ವರ್ಷ ನಡೆದ ಮಿಸ್ ಯುನಿವರ್ಸ್‌ನ 4ನೇ ರನ್ನರ್ ಅಪ್. 2003ರಲ್ಲಿ ''ಜಾನಶೀನ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ಈ ಚಿತ್ರದಲ್ಲಿ ಇವರ ದೇಹಸಿರಿಯನ್ನು ಬಿಕಿನಿಯಲ್ಲಿ ಕಂಡು ಹಲವಾರು ಪಡ್ಡೆಹುಡುಗರು ಆ ಕಾಲದಲ್ಲಿ ಎದೆ ಹಿಡಿದುಕೊಂಡಿದ್ದರು.
ಉಪೇಂದ್ರಗೆ ನಾಯಕಿಯಾಗಿದ್ದ ಸೆಲಿನಾ
''ಸಿಲ್‌ಸಿಲೇ''.. ''ನೋ ಎಂಟ್ರಿ''.. ''ಜವಾನಿ ದಿವಾನಿ''.. ''ಅಪ್ನಾ ಸಪ್ನಾ ಮನಿ ಮನಿ''.. ''ಮನಿ ಹೈ ತೋ ಹನಿ ಹೈ''.. ''ಗೋಲ್‌ಮಾಲ್ ರಿಟರ್ನ್ಸ್''.. ''ಹಲೋ ಡಾರ್ಲಿಂಗ್''.. ಹೀಗೆ ಒಂದಾದ ಮೇಲೊಂದು ಸಿನಿಮಾ ಮಾಡಿದ ಸೆಲಿನಾ 2011ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಅಭಿನಯದ ''ಶ್ರೀಮತಿ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇಂಥಾ ಸೆಲಿನಾ 2011ರಲ್ಲಿ ಆಸ್ಟ್ರಿಯಾ ಮೂಲದ ಉದ್ಯಮಿ ಪೀಟರ್ ಹಾಗ್ ಅವರನ್ನು ಮದುವೆ ಆಗಿದ್ದರು. 2012ರಲ್ಲಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದರು. ಆ ನಂತರ 2017ರಲ್ಲಿ ಇನ್ನೊಮ್ಮೆ ಸೆಲಿನಾ ಗರ್ಭಿಣಿಯಾದರು. ಮತ್ತೊಮ್ಮೆ ಅವಳಿ ಮಕ್ಕಳಿಗೆ ಜನ್ಮ ನೀಡಿದರು.

ಆದರೆ.. ಈ ವೇಳೆ ಒಬ್ಬ ಮಗ ಶಂಶೇರ್ ಹೃದಯದ ಖಾಯಿಲೆಯಿಂದ ಕೆಲ ದಿನಗಳಲ್ಲಿ ಸಾವನ್ನಪ್ಪಿದ್ದ. ಇಲ್ಲಿಯವರೆಗೆ ಸುಖವಾಗಿದ್ದ ಇವರ ದಾಂಪತ್ಯ ಕೂಡ ಇದೇ ಸಮಯದಲ್ಲಿ ಹಳಿ ತಪ್ಪಿತ್ತು. ಸದ್ಯ ಸೆಲಿನಾ ಜೆಟ್ಲಿ ತಮ್ಮ ಗಂಡ ಪೀಟರ್ ಹಾಗ್ ಅವರಿಂದ ದೂರವಾಗುವ ಪ್ರಯತ್ನ ಮಾಡುತ್ತಿದ್ದಾರೆ. ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಸಪ್ತಸಾಗರದಾಚೆ ಆಸ್ಟ್ರೀಯಾದಲ್ಲಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಪರದೇಶಿ ನೆಲದಲ್ಲಿ, ಗುರುತು ಪರಿಚಯ ಇಲ್ಲದವರ ಮಣ್ಣಿನಲ್ಲಿ, ಏಕಾಂಗಿಯಾಗಿ ಹೋರಾಡುತ್ತಿದ್ಧಾರೆ.
ಆದರೆ.. ಇವರ ಈ ಹೋರಾಟ ಸದ್ಯ ಸುಲಭವಾದದ್ದಲ್ಲ. ಹೀಗಾಗಿಯೇ ಆಘಾತಕ್ಕೀಡಾಗಿರುವ ಸೆಲಿನಾ ಜೇಟ್ಲಿ ತಮ್ಮ ಮಗ ಶಂಶೇರ್ ಸಮಾಧಿಯ ಎದುರು ಬಿಕ್ಕಿದ್ದಾರೆ. ಸಮಾಧಿ ಸ್ವಚ್ಚಗೊಳಿಸುತ್ತಾ ಕಣ್ಣೀರು ಹಾಕಿದ್ದಾರೆ. ತಮ್ಮ ಮನದ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ. ಹಾಗಿದ್ದರೆ ಸೆಲಿನಾ ಜೇಟ್ಲಿ ಅನುಭವಿಸುತ್ತಿರುವ ಸಂಕಷ್ಟವೇನು..? ಎಂದು ತಿಳಿಯಲು ಮುಂದೆ ಓದಿ.
ಸೆಲಿನಾ ಜೇಟ್ಲಿ ಭಾವುಕ ಬರಹ
''ಒಬ್ಬ ತಾಯಿಯಾಗಿ ನಾನು ಅನುಭವಿಸುತ್ತಿರುವ ನರಕಯಾತನೆಯನ್ನು ಪ್ರಪಂಚಕ್ಕೆ ತೋರಿಸಲು ಈ ವಿಡಿಯೋ ಹಂಚಿಕೊಳ್ಳುವುದು ಬಿಟ್ಟರೆ ನನಗೆ ಬೇರೆ ದಾರಿಯೇ ಇರಲಿಲ್ಲ. ಕಳೆದ ಕೆಲವು ವಾರಗಳು ನನ್ನ ಪಾಲಿಗೆ ಅತ್ಯಂತ ಭೀಕರವಾಗಿದ್ದವು. ವಿಚ್ಛೇದನದ ವಿಚಾರಣೆಗಾಗಿ ನಾನು ಆಸ್ಟ್ರಿಯಾಕ್ಕೆ ಹೋಗಿದ್ದೆ. ಅಲ್ಲಿನ ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದರೂ ಸಹ, ನನ್ನಿಂದ ದೂರ ಇರಿಸಲಾಗಿದ್ದ ಮಕ್ಕಳನ್ನು ಪತಿ ಮನೆಗೆ ಕರೆತರಲಿಲ್ಲ. ಕೊನೆಗೆ ನಾನು ಭೇಟಿ ಮಾಡಿದ್ದು ಮಣ್ಣಲ್ಲಿ ಮಣ್ಣಾಗಿರುವ ನನ್ನ ಮಗ ಶಂಶೇರ್‌ನನ್ನು ಮಾತ್ರ. ಇದನ್ನು ನೆನೆದರೆ ನನ್ನ ಎದೆ ಒಡೆದಂತಾಗುತ್ತದೆ''.
ಗಂಡನಿಗಾಗಿ ಅಲ್ಲಿ ಇಲ್ಲಿ ಅಲೆದಾಡಿದೆ
''ಮಕ್ಕಳು ಹುಟ್ಟಿದ ದಿನದಿಂದ ಅವರಿಗಾಗಿ ನಾನು ಮಾಡದ ತ್ಯಾಗವಿಲ್ಲ. ನನ್ನ ದೇಶ, ತಂದೆ-ತಾಯಿ, ಅಷ್ಟೇ ಯಾಕೆ ನನ್ನ ವೃತ್ತಿಜೀವನವನ್ನೇ ಬಿಟ್ಟೆ. ಪತಿಯ ವೃತ್ತಿ ಜೀವನಕ್ಕಾಗಿ ನಾನು ಭಾರತದಿಂದ ದುಬೈ, ಸಿಂಗಾಪುರ, ಆಸ್ಟ್ರಿಯಾ ಅಂತ ಅಲೆದೆ. ಆತನ ಕನಸುಗಳಿಗೆ ಬೆನ್ನೆಲುಬಾಗಿ ನಿಂತು ಮಕ್ಕಳನ್ನು ಒಬ್ಬಳೇ ಸಾಕಿದೆ. ಆದರೆ ನನ್ನ ಈ ಸಂಸಾರ ಪ್ರೇಮಕ್ಕೆ ಸಿಕ್ಕ ಪ್ರತಿಫಲವೇನು? ನನ್ನ ಆಸ್ತಿಗಳನ್ನೆಲ್ಲ ಒಂದೊಂದಾಗಿ ಕಿತ್ತುಕೊಳ್ಳಲಾಯಿತು, ದೈಹಿಕ-ಮಾನಸಿಕ ಹಿಂಸೆ ಅನುಭವಿಸಿದೆ''.
ನನ್ನ ಮಕ್ಕಳ ಬ್ರೈನ್ ವಾಶ್ ಮಾಡುತ್ತಿದ್ಧಾರೆ
''ಸೌಹಾರ್ದಯುತವಾಗಿ ವಿಚ್ಛೇದನ ಪಡೆಯೋಣ ಎಂದು ನಾನು ಎಷ್ಟೇ ಪ್ರಯತ್ನಿಸಿದರೂ, ಆತ ನನ್ನ ಸ್ವಂತ ಆಸ್ತಿಗಳ ಮೇಲೆ ಕಣ್ಣು ಹಾಕುತ್ತಿದ್ದಾನೆಯೇ ಹೊರತು ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿಲ್ಲ. ಜಂಟಿ ಪಾಲನೆಯ ಆದೇಶವನ್ನು ನ್ಯಾಯಾಲಯ ನೀಡಿದ್ದರೂ ಕೂಡ, ನನ್ನ ಮೂವರು ಮಕ್ಕಳ ಜೊತೆ ಮಾತನಾಡಲು ಕೂಡ ನನಗೆ ಈಗ ಬಿಡುತ್ತಿಲ್ಲ. ಮಕ್ಕಳ ತಲೆಯನ್ನು ಪೂರ್ತಿ ಕೆಡಿಸಿ, ನನ್ನ ವಿರುದ್ಧವೇ ಮಾತನಾಡುವಂತೆ ಬ್ರೈನ್‌ವಾಶ್ ಮಾಡಲಾಗುತ್ತಿದೆ''.
ಮದುವೆ ವಾರ್ಷಿಕೋತ್ಸವಕ್ಕೆ ಕೊಟ್ಟ ಗಿಫ್ಟ್ ಎಂತಹದ್ದು ಗೊತ್ತಾ ?
''ಸೆಪ್ಟೆಂಬರ್ ಆರಂಭದಲ್ಲಿ ನಮ್ಮ 15ನೇ ಮದುವೆಯ ವಾರ್ಷಿಕೋತ್ಸವದ ಗಿಫ್ಟ್ ಬಂದಿದೆ ಅಂತ ನನ್ನನ್ನು ನನ್ನ ಗಂಡ ಪೋಸ್ಟ್ ಆಫೀಸ್‌ಗೆ ಕರೆದೊಯ್ದು, ಅಲ್ಲಿ ನನಗೆ ಡಿವೋರ್ಸ್ ನೋಟಿಸ್ ಕೈಗಿಟ್ಟ. ನಾನು ಮಕ್ಕಳ ಹಿತ ದೃಷ್ಟಿಯಿಂದ ಶಾಂತಿಯಿಂದ ದೂರವಾಗಲು ಬಯಸಿದ್ದೆ. ಪದೇ ಪದೇ ಬೇಡಿಕೊಂಡೆ. ಆದರೆ ಆತ ನನ್ನ ಗೌರವ ಮತ್ತು ಸ್ವಾತಂತ್ರ್ಯವನ್ನೆಲ್ಲ ಕಿತ್ತುಕೊಂಡು, ನನ್ನನ್ನು ಬೀದಿಪಾಲು ಮಾಡಲು ಸಂಚು ರೂಪಿಸುತ್ತಿದ್ದಾನೆ. ಆದರೂ ನಾನು ಬಿಡುವುದಿಲ್ಲ, ಹೋರಾಡಿಯೇ ತೀರುತ್ತೇನೆ''
ಮುಂಬೈನಲ್ಲಿಯೂ ದೂರು ದಾಖಲಿಸಿರುವ ಸೆಲಿನಾ
ಸದ್ಯ ಸೆಲಿನಾ ಜೇಟ್ಲಿ ಅವರ ಈ ವಿಡಿಯೋ ವೈರಲ್ ಆಗಿದ್ದು, ಹಲವರು ಸೆಲಿನಾ ಜೇಟ್ಲಿ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಈ ಹಿಂದೆ ಸೆಲಿನಾ ಜೇಟ್ಲಿ ತಮ್ಮ ಪತಿಯ ವಿರುದ್ಧ ಮುಂಬೈನ ಅಂಧೇರಿಯ ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸಾಚಾರ ದೂರು ದಾಖಲಿಸಿದ್ದರು. ₹50 ಕೋಟಿ ಪರಿಹಾರ ಕೋರಿದ್ದರು. ಈ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.


Click it and Unblock the Notifications