ಈ ನಿರ್ದೇಶಕನ ಮುಖಕ್ಕೆ ಮಸಿ ಬಳಿದರೆ ಸಿಗಲಿದೆ ₹1 ಲಕ್ಷ ರೂಪಾಯಿ ಬಹುಮಾನ..!
ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.
ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ದ್ವೇಷವನ್ನು ಬಿತ್ತುವಲ್ಲಿ ಕೂಡ ಮಾತು ಪ್ರಮುಖ ಪಾತ್ರ ವಹಿಸುತ್ತಿದೆ. ಇದಕ್ಕೆ ಅನುರಾಗ್ ಕಶ್ಯಪ್ ಸುತ್ತ ಮುತ್ತ ಎದ್ದ ವಿವಾದ ಸದ್ಯದ ಉದಾಹರಣೆ.

ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು.. ಎಂಬ ಮಾತನ್ನ ಹಿರಿಯರು, ಅನುರಾಗ್ ಕಶ್ಯಪ್ ಅವರಂತಹವರನ್ನೇ ಗಮನದಲ್ಲಿಟ್ಟುಕೊಂಡೇ ಅವತ್ತು ಹಿರಿಯರು ಹೇಳಿದ್ದರು ಅನ್ನುವ ಅಭಿಪ್ರಾಯ ಸದ್ಯಕ್ಕೆ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ.. ಮೊನ್ನೆ ಅನುರಾಗ್ ಕಶ್ಯಪ್ ಮಾತನಾಡಿದ್ದ ಮಾತು.
ಹೌದು ಮೊನ್ನೆಯಷ್ಟೇ'ಫುಲೆ' ಚಿತ್ರದ ಬಿಡುಗಡೆಯ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕುರಿತು ತಾವು ಬರೆದುಕೊಂಡಿದ್ದ ಬರಹಕ್ಕೆ ಬಂದ ಕಮೆಂಟ್‌ಗೆ ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೇನೆ ಎಂದು ಹೇಳಿದ್ದರು. ಈ ಮೂಲಕ ಬ್ರಾಹ್ಮಣರ ಆಕ್ರೋಶಕ್ಕೆ ಅನುರಾಗ್ ಕಶ್ಯಪ್ ಗುರಿಯಾಗಿದ್ದರು.
ಆ ನಂತರ ಅನುರಾಗ್ ಕಶ್ಯಪ್ ತಾವಾಡಿದ ಮಾತುಗಳಿಗೆ ಕ್ಷಮೆಯನ್ನು ಕೇಳಿದ್ದರು. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಅನುರಾಗ್ ಕಶ್ಯಪ್ ಇದು ನನ್ನ ಕ್ಷಮಾಪಣೆ, ನಾನು ಹೇಳಿದ ಮಾತುಗಳಿಗೆ ಅಲ್ಲ, ಬದಲಿಗೆ ನನ್ನ ಪೋಸ್ಟ್‌ನಲ್ಲಿರುವ ಒಂದು ಸಾಲನ್ನು ಮಾತ್ರ ಎತ್ತಿಕೊಂಡು ಅದನ್ನು ದ್ವೇಷ ಹರಡಲು ಬಳಸಿಕೊಳ್ಳುತ್ತಿರುವುದಕ್ಕಾಗಿ. ಭಾರೀ ಸಂಸ್ಕಾರವಂತರು ಎಂದು ಕರೆಸಿಕೊಳ್ಳುವ ಸಮುದಾಯದವರು ಹೆಂಡತಿ, ಮಗಳು, ಗೆಳೆಯರ ಅತ್ಯಾಚಾರ, ಕೊಲೆಯ ಬೆದರಿಕೆಯನ್ನು ಹಾಕುತ್ತಿದ್ದಾರೆ. ಆದರೆ ಹೇಳಿಕೆಗಳು, ಮಾತುಗಳು, ಈ ರೀತಿಯ ಬೆದರಿಕೆಗೆ ಅರ್ಹವಲ್ಲ, ಹೇಳಿರುವ ಮಾತುಗಳನ್ನು ವಾಪಸ್ ಪಡೆಯಲು ಆಗುವುದಿಲ್ಲ, ನಾನು ಅದನ್ನು ವಾಪಸ್ ಪಡೆಯುವುದೂ ಇಲ್ಲ ಎಂದು ಅನುರಾಗ್ ಕಶ್ಯಪ್ ಹೇಳಿದ್ದರು.
ಆದರೂ ಕೂಡ ಈ ವಿವಾದ ತಣ್ಣಗಾಗುತ್ತಿಲ್ಲ. ಅನುರಾಗ್ ಕಶ್ಯಪ್ ವಿರುದ್ಧ ಭುಗಿಲೆದ್ದ ಆಕ್ರೋಶ ಕಡಿಮೆಯಾಗುತ್ತಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಸದ್ಯ ಅನುರಾಗ್ ಕಶ್ಯಪ್ ವಿರುದ್ದ ಕೆರಳಿ ಕೆಂಡವಾಗಿರುವ ಚಾಣಕ್ಯ ಸೇನಾ ಅನುರಾಗ್ ಕಶ್ಯಪ್ ಮುಖಕ್ಕೆ ಕಪ್ಪು ಬಣ್ಣ ಬಳಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಅನುರಾಗ್ ಕಶ್ಯಪ್ ನೀಡಿದ್ದ ಹೇಳಿಕೆಯ ಕುರಿತು ಅಖಿಲ ಬ್ರಾಹ್ಮಣ ಮಹಾಸಭಾ, ಬ್ರಾಹ್ಮಣ ಸೇವಾ ಸಂಘ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ, ವಿಶ್ವ ಬ್ರಾಹ್ಮಣ ಪರಿಷತ್ ಮತ್ತು ಅಖೀರ್ ಭಾರತೀಯ ಬ್ರಾಹ್ಮಣ ಸಂಘ ಜೊತೆ ಸಭೆಯನ್ನು ನಡೆಸಿರುವ ಸರ್ವ ಬ್ರಾಹ್ಮಣ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಚಾಣಕ್ಯ ಸೇನೆಯ ಪ್ರಮುಖರಾದ ಪಂಡಿತ್ ಸುರೇಶ್ ಮಿಶ್ರಾ ಈ ಕುರಿತು ಘೋಷಣೆಯನ್ನು ಮಾಡಿದ್ದಾರೆ.
ಬ್ರಾಹ್ಮಣರ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಅನುರಾಗ್ ಕಶ್ಯಪ್ ಅವರಂತಹ ವ್ಯಕ್ತಿಗಳಿಗೆ ಪಾಠ ಕಲಿಸಬೇಕಾಗಿದೆ ಎಂದು ಹೇಳಿರುವ ಪಂಡಿತ್ ಸುರೇಶ್ ಮಿಶ್ರಾ ಈ ದೇಶಕ್ಕಾಗಿ ಬ್ರಾಹ್ಮಣ ಸಮುದಾಯ ತ್ಯಾಗ ಮಾಡಿಲ್ಲವೇ..? ಎಲ್ಲರ ಕಲ್ಯಾಣಕ್ಕಾಗಿ ಮಾತನಾಡುವ ಮತ್ತು ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಬ್ರಾಹ್ಮಣರ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಟಕರ ಎಂದು ಕಿಡಿ ಕಾರಿದ್ದಾರೆ.
ಮುಂದುವರೆದು ಸಮಾಜದಲ್ಲಿ ಪರಸ್ಪರ ಗೌರವವನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಇಂತಹ ವಿನಾಶಕಾರಿ ಜನರನ್ನು ಬಲವಾಗಿ ವಿರೋಧಿಸಬೇಕು ಎಂದಿರುವ ಸುರೇಶ್ ಮಿಶ್ರಾ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡಿರುವ ಇಂತಹ ಜನರನ್ನು ಅವಮಾನಿಸಬೇಕು ಆಗಲೇ ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುವುದಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











