ಪ.ಬಂಗಾಳ ಸಿಎಂ ಎಡವಟ್ಟು.. 'ರಾಕೇಶ್ ಶರ್ಮಾ' ಬದಲು 'ರಾಕೇಶ್ ರೋಷನ್' ಎಂದು ಟ್ರೋಲ್ ಆದ ಮಮತಾ ಬ್ಯಾನರ್ಜಿ!
ಭಾರತದ 'ಚಂದ್ರಯಾನ 3' ಯಶಸ್ವಿಯಾಗಿದೆ. ಬಾಹ್ಯಕಾಶದಲ್ಲಿ ಇಸ್ರೋ ಮತ್ತೊಂದು ಇತಿಹಾಸವನ್ನು ಸೃಷ್ಟಿಸಿದೆ. ಈ ಬಗ್ಗೆ ದೇಶ ಅಷ್ಟೇ ಅಲ್ಲ. ಇಡೀ ವಿಶ್ವವೇ ಮಾತಾಡುತ್ತಿದೆ. ಇಸ್ರೋದ ವಿಜ್ಞಾನಿಗಳಿಗೆ ಶುಭ ಕೋರುತ್ತಿದ್ದಾರೆ. ರಾಜಕೀಯ ಮುಖಂಡರು, ಸಿನಿಮಾ ಕ್ಷೇತ್ರದ ಗಣ್ಯರು ಸೇರಿದಂತೆ ಎಲ್ಲಾ ಕ್ಷೇತ್ರದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಈ ವೇಳೆ 'ಚಂದ್ರಯಾನ 3' ಯಶಸ್ಸಿನ ಬಗ್ಗೆ ಮಾತಾಡುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಡವಟ್ಟು ಮಾಡಿಕೊಂಡಿದ್ದಾರೆ. ಭಾರತದ ಗಗನಯಾತ್ರಿ ರಾಕೇಶ್ ಶರ್ಮಾ ಹೆಸರು ಹೇಳುವ ಬದಲು ಗೊಂದಲಕ್ಕೆ ಒಳಗಾಗಿ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಎಂದಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ಟ್ರೋಲ್ ಆಗುತ್ತಿದೆ.

ರಾಕೇಶ್ ರೋಷನ್ ಎಂದಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿರೋಧ ಪಕ್ಷದವರು ಇದೇ ವಿಡಿಯೋ ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ.
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬಿಸ್ವಾ ಬಾಂಗ್ಲಾ ಮೇಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ 'ಚಂದ್ರಯಾನ 3' ಬಗ್ಗೆ ಮಾತು ಆರಂಭಿಸಿದ್ದರು. ಈ ವೇಳೆ ಗಗನಯಾತ್ರಿ ರಾಕೇಶ್ ಶರ್ಮಾ ಎನ್ನುವ ಬದಲು ರಾಕೇಶ್ ರೋಷನ್ ಎಂದಿದ್ದರು. ರಾಕೇಶ್ ರೋಷನ್ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಹಾಗೂ ಹೃತಿಕ್ ರೋಷನ್ ತಂದೆ.
" ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಚಂದ್ರನೆಡೆಗೆ ಜನರನ್ನು ಕಳುಹಿಸಿದ್ದರು. ರಾಕೇಶ್ ರೋಷನ್ ಚಂದ್ರ ಮೇಲೆ ಇಳಿದಿದ್ದರು. ಆಗ ಇಂದಿರಾ ಗಾಂಧಿ ಚಂದ್ರನಿಂದ ಭಾರತ ಹೇಗೆ ಕಾಣಿಸುತ್ತೆ ಎಂದು ಕೇಳಿದ್ದರು. ಆಗ ರಾಕೇಶ್ ರೋಷನ್ ಸಾರೇ ಜಹಾಂಸೆ ಅಚ್ಚಾ ಎಂದು ಹೇಳಿದ್ದರು." ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ, ಇಲ್ಲಿ ರಾಕೇಶ್ ರೋಷನ್ ಹೆಸರಿನ ಬದಲು ರಾಕೇಶ್ ಶರ್ಮಾ ಎನ್ನಬೇಕಿತ್ತು.
ಇದೇ ಹೇಳಿಕೆ ಈಗ ನೆಟ್ಟಿಗರು ಆಹಾರವಾಗಿಬಿಟ್ಟಿದೆ. ಮಮತಾ ಬ್ಯಾನರ್ಜಿಯನ್ನು ಟ್ರೋಲ್ ಮೇಲೆ ಟ್ರೋಲ್ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ಇದೇ ವಿಷಯವನ್ನು ಇಟ್ಟುಕೊಂಡು ಮಮತಾ ಬ್ಯಾನರ್ಜಿಯ ಕಾಲೆಳೆಯುತ್ತಿದ್ದಾರೆ.
"ಮಮತಾ ಬ್ಯಾನರ್ಜಿಯವರ ಸಮರ್ಥ ನಾಯಕತ್ವದಲ್ಲಿ ರಾಕೇಶ್ ರೋಷನ್ ಗಗನಯಾತ್ರಿಯಾಗಿದ್ದಕ್ಕೆ ಅಭಿನಂದನೆಗಳು" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. "ಭಾರತದ ಮೊದಲ ಗಗನಯಾತ್ರಿ ರಾಕೇಶ್ ರೋಷನ್ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇಂದು ಹೇಳಿದ್ದಾರೆ" ನೆಟ್ಟಿಗರೊಬ್ಬರು ಹೇಳಿದ್ದಾರೆ.
" ನಮಗೆಲ್ಲರಿಗೂ ರಾಕೇಶ್ ರೋಷನ್ ಒಬ್ಬರು ನಿರ್ದೇಶಕ ಅನ್ನೋದು ಗೊತ್ತಿದೆ. ಆದರೆ, ಮಮತಾ ಬ್ಯಾನರ್ಜಿ ಅವರನ್ನು ಬಾಹ್ಯಾಕಾಶಕ್ಕೆ ಜಿಗಿದ ಭಾರತದ ಮೊದಲ ಗಗನಯಾತ್ರಿ ಎಂದು ರಿವೀಲ್ ಮಾಡಿದ್ದಾರೆ. ಹೃತಿಕ್ ರೋಷನ್ ಹಾಗೂ ಅವರ ಕುಟುಂಬಕ್ಕೆ ಇದು ಹೆಮ್ಮೆಯ ವಿಷಯ." ಎಂದು ಇನ್ನೊಬ್ಬ ನೆಟ್ಟಿಗರು ಕಾಲೆಳೆದಿದ್ದಾರೆ.


Click it and Unblock the Notifications











