ರಾಮಾಯಣದ ಹೆಸರು ಕೆಡಿಸುತ್ತಿರುವ ಆದಿಪುರುಷ್ ಬ್ಯಾನ್ ಮಾಡಿ; ಅಮಿತ್ ಶಾಗೆ ಮುಖ್ಯಮಂತ್ರಿಗಳ ಮನವಿ!
ಕಳೆದ ಶುಕ್ರವಾರ ( ಜೂನ್ 16 ) ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿತು. ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ಹಾಗೂ ಕೃತಿ ಸೆನನ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ.
ಮೂಲ ಹಿಂದಿ ಚಿತ್ರವಾಗಿರುವ ಈ ಚಿತ್ರ ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಸಿನಿಮಾವಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಸಹ ಈ ಚಿತ್ರ ಡಬ್ ಆಗಿದ್ದು ಪ್ಯಾನ್ ಇಂಡಿಯಾ ಬಿಡುಗಡೆಯಾಗಿದೆ. ಇನ್ನು ಚಿತ್ರ ಬಿಡುಗಡೆಗೊಂಡು ಮೊದಲ ಪ್ರದರ್ಶನ ಮುಗಿದ ಬೆನ್ನಲ್ಲೇ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ನೆಗೆಟಿವ್ ವಿಮರ್ಶೆಗಳನ್ನು ಪಡೆದುಕೊಂಡಿತು.

ಹೀಗೆ ಕೆಟ್ಟ ವಿಮರ್ಶೆಗಳ ನಡುವೆ ಚಿತ್ರದಲ್ಲಿನ ಸಂಭಾಷಣೆ ಸರಿ ಇಲ್ಲ, ಚಿತ್ರ ಮಹಾಕಾವ್ಯ ರಾಮಾಯಣಕ್ಕೆ ಕಳಂಕ ತರುವ ಹಾಗಿದೆ ಎಂಬ ಗಂಭೀರ ಆರೋಪಗಳೂ ಸಹ ಕಂಡುಬರುತ್ತಿವೆ. ಈ ರೀತಿ ಇಷ್ಟು ದಿನಗಳ ಕಾಲ ಕೇವಲ ಸಿನಿ ರಸಿಕರು ವ್ಯಕ್ತಪಡಿಸುತ್ತಿದ್ದರೆ, ಇಂದು ಛತ್ತೀಸ್‌ಗಡದ ಮುಖ್ಯಮಂತ್ರಿಗಳೇ ಆದಿಪುರುಷ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಛತ್ತೀಸ್‌ಗಡದ ರಾಜಧಾನಿ ರಾಯ್‌ಪುರ್ ಸಮೀಪವಿರುವ ದುರ್ಗ್ ನಗರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಆಗಮಿಸಿದ್ದರು. ಈ ವೇಳೆ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಭಾಗೆಲ್ ಟ್ವಿಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಆದಿಪುರುಷ್ ಬ್ಯಾನ್ ಮಾಡಲು ಒತ್ತಾಯಿಸಿದ್ದಾರೆ.
ಹೌದು, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಜಿ ಅವರನ್ನು ಛತ್ತೀಸ್‌ಗಢಕ್ಕೆ ಸ್ವಾಗತಿಸುತ್ತಿದ್ದೇವೆ. ಅದೇ ಸಮಯದಲ್ಲಿ ರಾಮಾಯಣ ಮತ್ತು ರಾಮನ ಇಮೇಜ್ ಕೆಡಿಸುವ ಆದಿಪುರುಷ್ ಚಿತ್ರದ ನಿಷೇಧವನ್ನು ಇಂದೇ ಘೋಷಿಸಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆ. ಜೈ ಸಿಯಾ ರಾಮ್" ಎಂದು ಬರೆಕೊಂಡಿದ್ದರು.
ಹೀಗೆ ಛತ್ತೀಸ್‌ಗಡ ಮುಖ್ಯಮಂತ್ರಿ ಮಾಡಿದ್ದ ಈ ಟ್ವೀಟ್‌ಗೆ ಅಮಿತ್ ಶಾ ಯಾವುದೇ ಪ್ರತಿಕ್ರಿಯೆ ನಡೆಸದೇ ಕಾರ್ಯಕ್ರಮದಿಂದ ಹೊರನಡೆದರು. ಇನ್ನು ಅಮಿತ್ ಶಾ ಯಾವುದೆ ಪ್ರತಿಕ್ರಿಯೆ ನಿಡದೇ ಹೊರಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಭೂಪೇಶ್ ಭಾಗೆಲ್ ಮತ್ತೊಂದು ಟ್ವೀಟ್ ಮಾಡಿದ್ದು, "ಕೇಂದ್ರ ಗೃಹ ಸಚಿವರು ಶ್ರೀರಾಮನ ತಾಯಿಯ ಮನೆಗೆ ಬಂದು ಆದಿಪುರುಷನ ಮೇಲೆ ನಿಷೇಧವನ್ನು ಘೋಷಿಸದೆ ಹೋದದ್ದಕ್ಕೆ ನಾವೆಲ್ಲರೂ ವಿಷಾದಿಸುತ್ತೇವೆ. ಕೆಲವು ವಿಷಯಗಳು ರಾಜಕೀಯಕ್ಕಿಂತ ಮೇಲಿವೆ. ಛತ್ತೀಸ್‌ಗಢ ನಿವಾಸಿಗಳಾದ ನಮ್ಮೆಲ್ಲರ ಈ ಬೇಡಿಕೆ ರಾಜಕೀಯವಲ್ಲ. ಇದು ನಮ್ಮ ಆರಾಧ್ಯದೈವದ ಮೇಲಿನ ದಾಳಿಯ ಪ್ರಶ್ನೆಯಾಗಿದ್ದು, ರಾಮಭಕ್ತರಾದ ನಮಗೆಲ್ಲ ನೋವುಂಟು ಮಾಡಿ" ಎಂದು ಬರೆದುಕೊಂಡಿದ್ದಾರೆ.
ಹೀಗೆ ಒಂದೆಡೆ ಟೀಕೆಗಳು ಹಾಗೂ ಟ್ರೋಲ್‌ಗಳು ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಚಿತ್ರ ಹುಟ್ಟುಹಾಕಿದ್ದ ಹೈಪ್‌ಗೆ ತಕ್ಕಂತಹ ಕಲೆಕ್ಷನ್ ಬಾರದಿದ್ದರೂ ಸಹ ಸಮಾಧಾನಕರ ಕಲೆಕ್ಷನ್ ಅನ್ನು ಸಿನಿಮಾ ಮಾಡಿದೆ.
ಚಿತ್ರತಂಡ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಚಿತ್ರ ವಿಶ್ವದಾದ್ಯಂತ 6 ದಿನಗಳಲ್ಲಿ 410 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಚಿತ್ರ ಮೊದಲ ದಿನ ವಿಶ್ವದಾದ್ಯಂತ 140 ಕೋಟಿ ಗಳಿಸಿದ್ದರೆ, ಎರಡನೇ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಗಳಿಸಿತು, ಮೂರನೇ ದಿನವೂ 100 ಕೋಟಿ ಗಳಿಕೆ ಮಾಡಿತು. ಇನ್ನು ನಾಲ್ಕನೇ ದಿನ ಮೊದಲ ಸೋಮವಾರ 35 ಕೋಟಿ ವಿಶ್ವ ಬಾಕ್ಸ್ ಆಫೀಸ್ ಗ್ರಾಸ್ ಕಲೆಕ್ಷನ್ ಮಾಡಿದ ಆದಿಪುರುಷ್ ಐದನೇ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಕೇವಲ 20 ಕೋಟಿ ಗಳಿಕೆ ಮಾಡಿತು ಹಾಗೂ ಇಂದು ( ಜೂನ್ 22 ) ಆರನೇ ದಿನ 15 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಆದಿಪುರುಷ್ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 6 ದಿನಗಳಿಗೆ 415 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.


Click it and Unblock the Notifications











