ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ದಂಪತಿ ಮೇಲೆ ವಂಚನೆ ಪ್ರಕರಣದ ದಾಖಲು
ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗಳ ಸಂಕಷ್ಟದ ಸರಮಾಲೆ ಕೊನೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಸಾಲು ಸಾಲು ಪ್ರಕರಣಗಳು ಈ ದಂಪತಿಯ ಮೇಲೆ ದಾಖಲಾಗುತ್ತಿವೆ. ಇದೀಗ ಹೊಸದಾಗಿ ಈ ದಂಪತಿ 1.51 ಕೋಟಿ ಹಣ ವಂಚನೆ ಮಾಡಿದ್ದಾರೆಂದು ದೂರು ದಾಖಲಿಸಲಾಗಿದೆ.
ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಜೊತೆಯಾಗಿ ಫಿಟ್‌ನೆಸ್ ಸೆಂಟರ್ ತೆರೆದಿದ್ದರು, ಇದಕ್ಕಾಗಿ ವಿವಿಧ ಜನರಿಂದ ಬಂಡವಾಳ ಒಟ್ಟುಮಾಡಿಕೊಂಡಿದ್ದರು. ಇದೀಗ ಮುಂಬೈ ಮೂಲದ ಉದ್ಯಮಿ ನಿತಿನ್ ಬರಾರಿ, ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿರುದ್ಧ ದೂರು ಸಲ್ಲಿಸಿದ್ದು ನನ್ನಿಂದ ಪಡೆದ 1.51 ಕೋಟಿ ರುಪಾಯಿ ಹಣ ಹಿಂತಿರುಗಿಸಿಲ್ಲ. ಹಣ ಕೇಳಿದರೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರು ಸಂಬಂಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜುಲೈ 2014 ರಲ್ಲಿ ಎಸ್‌ಎಫ್‌ಎಲ್ ಫಿಟ್‌ನೆಸ್‌ನ ನಿರ್ದೇಶಕ ಖಾಸಿಫ್ ಖಾನ್ ಹಾಗೂ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರುಗಳು ತಮ್ಮ ಫಿಟ್‌ನೆಸ್ ಸಂಸ್ಥೆಯಲ್ಲಿ ಹಣ ಹೂಡುವಂತೆ ಹೇಳಿದರು. ಅಂತೆಯೇ ತಾವು 1.51 ಕೋಟಿ ರುಪಾಯಿ ಹಣ ಹೂಡಿದ್ದೆ. ತಮಗೆ ಹಡಸ್‌ಪುರ ಹಾಗೂ ಕೊರೆಗಾಂವ್‌ನಲ್ಲಿ ಸ್ಪಾ ಹಾಗೂ ಫಿಟ್‌ನೆಸ್ ಸೆಂಟರ್ ಅನ್ನು ಪ್ರಾರಂಭ ಮಾಡಿಕೊಡುವುದಾಗಿ ಅವರು ಭರವಸೆ ನೀಡಿದ್ದರು, ಆದರೆ ಯಾವುದೇ ಸ್ಪಾ ಅಥವಾ ಫಿಟ್‌ನೆಸ್ ಸೆಂಟರ್ ಅನ್ನು ಅವರು ನಿರ್ಮಾಣ ಮಾಡಿಕೊಡಲಿಲ್ಲ ಎಂದು ಉದ್ಯಮಿ ನಿತಿನ್ ದೂರಿನಲ್ಲಿ ತಿಳಿಸಿದ್ದಾರೆ. ಹಣ ಹಿಂತಿರುಗಿಸುವಂತೆ ಕೇಳಿದಾಗ ತಮ್ಮ ಮೇಲೆ ಬೆದರಿಕೆ ಹಾಕಿದರು ಎಂದು ಸಹ ನಿತಿನ್ ಹೇಳಿದ್ದಾರೆ.

ದೆಹಲಿ ಮೂಲದ ಉದ್ಯಮಿಯೊಬ್ಬ ಸಹ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ದಂಪತಿ ತಮಗೆ 41 ಲಕ್ಷ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ತಮ್ಮನ್ನು ಬಲವಂತ ಪಡಿಸಿ 41.30 ಲಕ್ಷ ಹಣವನ್ನು ತಮ್ಮ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಮಾಡಿದರು. ಮತ್ತು ಆ ಹಣವನ್ನು ತಮ್ಮ ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡರು. ಅದೇ ಹಣವನ್ನು ಕೆಟ್ಟ ಕಾರ್ಯಗಳಿಗೂ ಬಳಸಿಕೊಂಡಿದ್ದಾರೆ ಎಂದಿದ್ದರು. ರಾಜ್ ಕುಂದ್ರಾ ಆಪ್ತ ಉಮೇಶ್ ಗೋಯೆಂಕಾ ಒಮ್ಮೆ ಜೈಪುರದಲ್ಲಿ ನಡೆಯುತ್ತಿದ್ದ ರಾಜಸ್ಥಾನ ರಾಯಲ್ಸ್ ಪಂದ್ಯ ನೋಡಲು ಆಹ್ವಾನ ನೀಡಿದ್ದರು. ಪಂದ್ಯದ ವೇಳೆ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಒಡೆತನದ ವಿಯಾನ್ ಸಂಸ್ಥೆಯು ಭವಿಷ್ಯದಲ್ಲಿ ಸೌಂದರ್ಯ ವರ್ಧಕಗಳು, ಗೇಮಿಂಗ್, ಅನಿಮೇಷನ್ಸ್ ಇನ್ನೂ ಹಲವು ವಿಭಾಗಗಳಲ್ಲಿ ವಿಸ್ತರಣೆ ಮಾಡುವ ಯೋಜನೆಯಲ್ಲಿದ್ದು ಉತ್ತಮ ಲಾಭ ಪಡೆಯಲಿದೆ. ಹಾಗಾಗಿ ಸಂಸ್ಥೆಯಲ್ಲಿ ಹಣ ತೊಡಗಿಸುವಂತೆ ಒತ್ತಾಯಿಸಿದರು ಎಂದಿದ್ದಾರೆ ಉದ್ಯಮಿ.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಜುಲೈ 19ರಂದು ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಮುಂಬೈನಲ್ಲಿ ಸ್ಥಳೀಯ ನಟಿಯರಿಂದ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡು ಅದನ್ನು ಲಂಡನ್‌ನಲ್ಲಿರುವ ತಮ್ಮ ಸಂಬಂಧಿಯೊಬ್ಬರ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್ ಹೆಸರಿನ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿಸುತ್ತಿದ್ದರು, ಆ ಮೂಲಕ ದಿನಕ್ಕೆ ಲಕ್ಷಾಂತರ ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಮಾಡಿದ್ದರು. ಪ್ರಕರಣದಲ್ಲಿ ರಾಜ್ ಕುಂದ್ರಾಗೆ ಜಾಮೀನು ದೊರೆತಿದೆ.


Click it and Unblock the Notifications











