ಉತ್ತರ ಧ್ರುವದಿಂದ ದಕ್ಷಿಣಕ್ಕೆ ಚುಂಬಕ ಗಾಳಿ
ಹೈವೇ ಬೊಂಬೆ ಆಲಿಯಾ ಭಟ್ ಗೆ ಮತ್ತೊಂದು ಭರ್ಜರಿ ಆಫರ್ ಸಿಕ್ಕಿದೆ, ಹೈವೇ ಚಿತ್ರ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವುದೋ ಇಲ್ಲವೋ ಗೊತ್ತಿಲ್ಲ. ಆದರೆ, ಮಹೇಶ್ ಭಟ್ ರ ಹುಡುಗಿಗೆ ಎಲ್ಲೆಡೆಯಿಂದ ಪ್ರಶಂಸೆ ಸುರಿಮಳೆ ಸಿಕ್ಕಿದೆ. ಇಮ್ತಿಯಾಜ್ ಅಲಿ ಅವರ ಹೈವೇ ಚಿತ್ರದ ನಂತರ ಆಲಿಯಾ ಈಗ ಹೊಸ ಚಿತ್ರವೊಂದರ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾಳೆ.
ಖ್ಯಾತ ಲೇಖಕ ಚೇತನ್ ಭಗತ್ ಅವರ 2 ಸ್ಟೇಟ್ಸ್ ಕಾದಂಬರಿ ಬೆಳ್ಳಿತೆರೆಗೆ ಬರಲಿದ್ದು, ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಅನಾವರಣಗೊಂಡಿದೆ. ಆಲಿಯಾ ಭಟ್ ಅವರು ಈ ಬಾರಿ ಅರ್ಜುನ್ ಕಪೂರ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 2 ಸ್ಟೇಟ್ಸ್ ಕಾದಂಬರಿ ಚೇತನ್ ಅವರ ಜನಪ್ರಿಯ ಕಾದಂಬರಿಗಳಲ್ಲಿ ಒಂದಾಗಿದೆ.
ಅಭಿಷೇಕ್ ವರ್ಮನ್ ಅವರು ಮೊದಲ ಬಾರಿಗೆ ಅರ್ಜುನ್ ಹಾಗೂ ಆಲಿಯಾ ಜೋಡಿಯನ್ನು ನಿರ್ದೇಶಿಸುತ್ತಿದ್ದು, ಪ್ರಣಯ ಕಥೆಯುಳ್ಳ ಈ ಚಿತ್ರ ಜನಮೆಚ್ಚುಗೆ ಗಳಿಸುವಂತೆ ನಿರೂಪಿಸುವ ಹೊಣೆ ಹೊತ್ತಿದ್ದಾರೆ. ಚೇತನ್ ಅವರ ಕಥೆಯಲ್ಲಿ ಪ್ರೇಮಿಗಳಿಬ್ಬರು ಅಮ್ಮ ಪೋಷಕರನ್ನು ಹಾಗೂ ಆಪ್ತರನ್ನು ಮೆಚ್ಚಿಸಿ ಮದುವೆ ಹಂತ ತಲುಪುವ ಸುಂದರ ಸಾಮಾಜಿಕ ಕಥಾನಕವಿದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಸಾಂಸ್ಕೃತಿಕ ಹಾಗೂ ಮದುವೆ ಪದ್ಧತಿಗಳ ಮೇಲೆ ಕಥೆ ಬೆಳಕು ಚೆಲ್ಲಲಿದೆ.

ಚಿತ್ರದ ಮೊದಲ ಲುಕ್ ನಲ್ಲೂ ಇದನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ದಕ್ಷಿಣ ಭಾರತ ಹುಡುಗಿ ಭಾರತದ ಭೂಪಟದ ಕೆಳಭಾಗದಲ್ಲಿ ಮಲಗಿರುವಂತೆ ಉತ್ತರ ಭಾರತದ ಯುವಕ ಮೇಲ್ಭಾಗದಲ್ಲಿ ಮಲಗಿ ಕೈ ಚಾಚುತ್ತಿದ್ದಾನೆ.
ತಮಿಳು ಬ್ರಾಹ್ಮಣ ಕನ್ಯೆಯಾಗಿ ಆಲಿಯಾ ನಟಿಸುತ್ತಿದ್ದು, ಆಕೆ ಪಾತ್ರ ಜನ ಮೆಚ್ಚುಗೆ ಪಡೆಯಲಿದೆ ಎಂಬ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ 18 ರ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಕರಣ್ ಜೋಹರ್, ಸಾಜಿದ್ ನಾಡಿಯಾಡ್ ವಾಲ ಅವರು ಈ ಚಿತ್ರದ ನಿರ್ಮಾಣ ಮಾಡಿದ್ದಾರೆ.
ಚೇತನ್ ಭಗತ್ ಕಾದಂಬರಿಗೂ ಸಿನಿಮಾಕ್ಕೂ ಅದೇನೋ ಸಿಕ್ಕಾಪಟ್ಟೆ ನಂಟು. ಅವರ ಫೈವ್ ಪಾಯಿಂಟ್ ಸಮ್ ಒನ್-2004, ಒನ್ ನೈಟ್ ಅಟ್ ದಿ ಕಾಲ್ ಸೆಂಟರ್-2005, ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್-2008 ಹಾಗೂ ಟೂ ಸ್ಟೇಟ್ಸ್-2009 ರಲ್ಲಿ ಪ್ರಕಟವಾದ ಕಾದಂಬರಿಗಳಾಗಿವೆ. ಅವುಗಳಲ್ಲಿ ಮೊದಲ ಮತ್ತು ಎರಡನೆ ಕೃತಿ ಸಿನಿಮಾಗಳಾಗಿವೆ. ಫೈವ್ ಪಾಯಿಂಟ್ ಸಮ್ ಒನ್ ತ್ರಿ ಈಡಿಯಟ್ಸ್ ಹೆಸರಿನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಒನ್ ನೈಟ್ ಅಟ್ ದಿ ಕಾಲ್ ಸೆಂಟರ್ -ಹಲೋ, ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್-ಕಾಯ್ ಪೋ ಚೇ ಹೆಸರಿನಲ್ಲಿ ಚಿತ್ರವಾಗಿದೆ.
ಅವರ ನಾಲ್ಕನೆಯ ಕೃತಿ, ಟೂ ಸ್ಟೇಟ್ಸ್ ಸಿನಿಮಾ ರೂಪ ಪಡೆದುಕೊಂಡಿದೆ. ಚೇತನ್ ಭಗತ್ ರ 5ನೇ ಕಾದಂಬರಿ ರೆವೊಲ್ಯೂಷನ್ 2020' ಕೂಡ ಸಿನಿಮಾ ಆಗಲಿದೆ ಎಂಬ ಸುದ್ದಿಯಿದೆ.


Click it and Unblock the Notifications











