Chhaava Box Office Day 8 ; ಬಾಕ್ಸಾಫೀಸ್‌ನಲ್ಲಿ ಛಾವಾ ಚಮತ್ಕಾರ, 5 ವರ್ಷದ ನಂತರ ದಾಖಲೆ ಬರೆದ ವಿಕ್ಕಿ ಕೌಶಲ್..!
ಇನ್ನೇನು ಬಾಲಿವುಡ್ ಕಥೆ ಮುಗೀತು. ದಕ್ಷಿಣದ ಚಿತ್ರರಂಗದ ಮುಂದೆ ಹಿಂದಿ ಉದ್ಯಮ ಮಕಾಡೆ ಮಲಗಿತು ಎಂದೇ ಅನೇಕರು ಅಂದುಕೊಂಡಿದ್ದರು. ಹಿಂದಿ ಚಿತ್ರರಂಗಕ್ಕೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಾಗುತ್ತಿಲ್ಲ ಹೀಗಾಗಿ ಚಿತ್ರಗಳು ನೆಲಕಚ್ಚುತ್ತಿವೆ ಎಂದು ಮಾತನಾಡಿದ್ದರು. ಕರಣ್ ಜೋಹರ್ ಸೇರಿ ಅನೇಕರು ಏನು ಮಾಡೋದು ಎಂದು ಗೊತ್ತಾಗದೇ ಕೈಚೆಲ್ಲಿ ಕುಂತಿದ್ದರು. ಹೀಗಿರುವಾಗ ಬಂದ ಛಾವಾ ಬಾಲಿವುಡ್‌ಗೆ ಬಲ ತಂದು ಕೊಟ್ಟಿದೆ. ಹಿಂದಿ ಚಿತ್ರರಂಗವನ್ನು ಬಡಿದೆಬ್ಬಿಸಿದೆ.
ಹೌದು, ಬಾಲಿವುಡ್‌ನಲ್ಲಿ ಛಾವಾ ಚಮತ್ಕಾರ ಮುಂದುವರೆದಿದೆ. ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಬೀಳುತ್ತಿದೆ. ನೂರು ಕೋಟಿಯನ್ನು ಸಂಪಾದನೆ ಮಾಡಲು ಸೂಪರ್ ಸ್ಟಾರ್‌ಗಳೇ ತಿಣುಕಾಡುತ್ತಿರುವಾಗ ವಿಕ್ಕಿ ಕೌಶಲ್ ಅಭಿನಯದ ಛಾವಾ ಕೇವಲ ಒಂದೇ ವಾರದಲ್ಲಿ ನೂರಲ್ಲ ಬದಲಿಗೆ ಇನ್ನೂರು ಕೋಟಿಯನ್ನು ಕಮಾಯಿ ಮಾಡಿದೆ.

ಇನ್ನು ಛಾವಾ ತೆರೆಗೆ ಬಂದು ನಿನ್ನೆಗೆ ಒಂದು ವಾರವಾಗಿದೆ. ಆದರೂ ಕೂಡ ಸಂಭಾಜಿ ಮಹಾರಾಜರ ಸಾಹಸಗಾಥೆಯನ್ನು ನೋಡಲು ಪ್ರೇಕ್ಷಕರು ಬರುತ್ತಿದ್ದಾರೆ. ಕೊನೆಯಲ್ಲಿ ಗಳಗಳನೆ ಕಣ್ಣೀರು ಹಾಕುತ್ತಾ ಚಿತ್ರಮಂದಿರದಿಂದ ಆಚೆ ಬರುತ್ತಿದ್ದಾರೆ.ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ 08ನೇ ದಿನದಂದು ಛಾವಾ 23 ಕೋಟಿಯನ್ನು ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ.
ಇವತ್ತು ಕೂಡ ಚಿತ್ರ ನೋಡಲು ನೂಕು ನುಗ್ಗಲಿನ ವಾತಾವರಣ ಇದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿಯೇ ಇಂದಿನ ಪ್ರದರ್ಶನದ 1.21 ಲಕ್ಷ ಟಿಕೆಟ್‌ಗಳು ಬಿಕರಿಯಾಗಿವೆ. ನಿನ್ನೆಗೆ ಹೋಲಿಸಿದರೆ ಇಂದಿನ ಗಳಿಕೆ ಹೆಚ್ಚಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಂದ್ಹಾಗೇ ವಿಕ್ಕಿ ಕೌಶಲ್ ಅಭಿನಯದ 'ಉರಿ' ಚಿತ್ರ ಐದು ವರ್ಷದ ಹಿಂದೆ ತೆರೆಗೆ ಬಂದಿತ್ತು. ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿತ್ತು. ₹244.06 ಕೋಟಿಯನ್ನು ಗಳಿಸಿತ್ತು. ಈ ಮೂಲಕ ವಿಕ್ಕಿ ಕೌಶಲ್ ಅಭಿನಯದ ಅತ್ಯಧಿಕ ಗಳಿಕೆಯನ್ನು ಕಂಡ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿತ್ತು. ಛಾವಾ ಈ ದಾಖಲೆಯನ್ನು ಮುರಿದಿದೆ. ವಿಕ್ಕಿ ಕೌಶಲ್ ಮುಕುಟಕ್ಕೆ ಚಿನ್ನದ ಗರಿಯಾಗಿದೆ.08 ದಿನದಲ್ಲಿ ಚಿತ್ರ ₹248 ಕೋಟಿಯನ್ನು ಗಳಿಸಿದೆ ಎಂದು ಕೋಯಿ ಮೋಯಿ ವರದಿ ಮಾಡಿದೆ.
ಅತೀ ಹೆಚ್ಚು ಗಳಿಕೆ ಮಾಡಿದ ವಿಕ್ಕಿ ಕೌಶಲ್ 5 ಚಿತ್ರಗಳು..!
ಛಾವಾ - ₹248.28 ಕೋಟಿ
ಉರಿ- ₹244.06 ಕೋಟಿ
ರಾಝಿ - ₹123.17 ಕೋಟಿ
ಸ್ಯಾಮ್ ಬಹದ್ದೂರ್ - ₹90.75 ಕೋಟಿ
ಜರಾ ಹಟ್ಕೇ ಜರಾ ಬಚ್ಕೇ - ₹88 ಕೋಟಿ
ಇನ್ನು ಚಿತ್ರದ ಗಳಿಕೆಯ ಮೇಲೆ ಹದ್ದಿನ ಕಣ್ಣಿಡುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಛಾವಾ ಚಿತ್ರದ ಮೊದಲ ವಾರದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ - ₹ 31 ಕೋಟಿ
ಎರಡನೇ ದಿನ - ₹ 37 ಕೋಟಿ
ಮೂರನೇ ದಿನ - ₹ 48.5 ಕೋಟಿ
ನಾಲ್ಕನೇ ದಿನ - ₹ 24 ಕೋಟಿ
ಐದನೇ ದಿನ - ₹ 25.25 ಕೋಟಿ
ಆರನೇ ದಿನ - ₹ 32 ಕೋಟಿ
ಏಳನೇ ದಿನ - ₹ 21.5 ಕೋಟಿ
ಎಂಟನೇ ದಿನ - ₹ 23 ಕೋಟಿ
ಒಟ್ನಲ್ಲಿ ಸದ್ಯ ಬಾಕ್ಸಾಫೀಸ್‌ನಲ್ಲಿ ಛಾವಾ ಚಿತ್ರದ ಅಬ್ಬರ ಜೋರಾಗಿದೆ. ಇಂದು ಚಿತ್ರದ ಗಳಿಕೆ ₹250 ಕೋಟಿಯ ಗಡಿಯನ್ನು ದಾಟಲಿದೆ. ಇನ್ನು ನಾಳೆ ಭಾನುವಾರವಾದ ಹಿನ್ನೆಲೆ ಚಿತ್ರ ಮತ್ತೊಮ್ಮೆ ಹೌಸ್‌ಫುಲ್ ಪ್ರದರ್ಶನ ಕಾಣುವ ಸಾಧ್ಯತೆ ಇದೆ. ಚಿತ್ರದ ಗಳಿಕೆ ಮತ್ತೊಮ್ಮೆ ಎರಡಂಕಿ ದಾಟುವ ಸಾಧ್ಯತೆ ಕೂಡ ಇದೆ. ಅಂತಿಮವಾಗಿ ಛಾವಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಹಣ ಗಳಿಸಲಿದೆ ಎನ್ನುವುದು ಸದ್ಯದ ಕುತೂಹಲ.
Disclaimer: ಈ ಸಿನಿಮಾದ ಕಲೆಕ್ಷನ್ ಮತ್ತು ಇನ್ನುಳಿದ ಅಂಕಿ ಸಂಖ್ಯೆಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ.


Click it and Unblock the Notifications











