ಛಾವಾ ಚಿತ್ರದಲ್ಲಿ ಇರುವುದೆಲ್ಲವೂ ಸತ್ಯವಲ್ಲ, ಕ್ಷಮೆ ಕೇಳಿದ್ದೇಕೆ ಚಿತ್ರದ ನಿರ್ದೇಶಕ...?
ಇತಿಹಾಸ ಅರಿತವರು ಮಾತ್ರ ಇತಿಹಾಸ ಸೃಷ್ಟಿಸಬಲ್ಲರು ಎಂಬ ಮಾತಿದೆ. ಆದರೆ ಇತಿಹಾಸದ ಕುರಿತು ಅನುಮಾನಗಳೇ ಹೆಚ್ಚಾದಾಗ ಇತಿಹಾಸವನ್ನು ನಂಬಲು ಹೇಗೆ ಸಾಧ್ಯ ? ಈಗಾಗಲೇ ಭಾರತೀಯ ಇತಿಹಾಸವನ್ನು ತಿರುಚಿದ ಇತಿಹಾಸ ಎಂಬ ವಾದಗಳಿವೆ. ಈ ಅಂತೆ-ಕಂತೆಗಳ ನಡುವೆ ಸಂತೆಗೆ ಬಂದ ಛಾವಾ ಚಿತ್ರದ ಕುರಿತು ಈಗ ಅಪಸ್ವರಗಳು ಕೇಳಿ ಬರುತ್ತಿವೆ. ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎನ್ನುವ ಆರೋಪವನ್ನು ಮಾಡಲಾಗಿದೆ.
ಹೌದು, ಅಸಲಿಗೆ ಛಾವಾ ಚಿತ್ರದಲ್ಲಿ ಛತ್ರಪತಿ ಸಂಭಾಜಿಯ ಅತ್ಯಾಪ್ತರಾದ ಗನೋಜಿ ಮತ್ತು ಕನ್ಹೋಜಿ ಶಿರ್ಕೆ, ಔರಂಗಜೇಬ್‌ನ ಜೊತೆ ಕೈ ಜೋಡಿಸುತ್ತಾರೆ ಈ ಮೂಲಕ ಸಂಭಾಜಿಗೆ ನಂಬಿಕೆ ದ್ರೋಹವನ್ನು ಬಗೆಯುತ್ತಾರೆ ಎಂಬಂತೆ ತೋರಿಸಲಾಗಿದೆ. ಸಂಭಾಜಿ ಕೊನೆಯುಸಿರೆಳೆಯಲು ಗನೋಜಿ ಮತ್ತು ಕನ್ಹೋಜಿಯೇ ಕಾರಣವೆಂಬಂತೆ ಚಿತ್ರೀಸಲಾಗಿದೆ. ಇದು ಈಗ ಗನೋಜಿ, ಕನ್ಹೋಜಿ ಶಿರ್ಕೆಯ 13ನೇ ವಂಶಸ್ಥರನ್ನು ಕೆರಳಿಸಿದೆ.

ಹೀಗಾಗಿಯೇ ಲಕ್ಷ್ಮೀಕಾಂತ್ ಶಿರ್ಕೆ ಛಾವಾ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ, ನಮ್ಮ ವಂಶದ ತೇಜೋವಧೆಯನ್ನು ಮಾಡಲಾಗಿದೆ ಎಂದು ಗುಡುಗಿದ್ದಾರೆ. ಛಾವಾ ಚಿತ್ರವನ್ನು ಠೀಕಿಸಿ 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಕೂಡ ಹೂಡುವುದಾಗಿ ಹೇಳಿದ್ದಾರೆ. ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರಿಗೆ ನೋಟಿಸ್ ಕೂಡ ನೀಡಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈಗ ಶಿರ್ಕೆ ವಂಶಸ್ಥರಲ್ಲಿ ಕ್ಷಮೆಯನ್ನು ಕೂಡ ಹೇಳಿದ್ದಾರೆ.
ಹೌದು, ವರದಿಗಳ ಪ್ರಕಾರ ಮೊಕದ್ದಮೆಯನ್ನು ಹೂಡಿರುವ ಲಕ್ಷ್ಮೀಕಾಂತ್ ಶಿರ್ಕೆ ಅವರ ವಂಶಸ್ಥರಲ್ಲಿ ಒಬ್ಬರಾದ ಭೂಷಣ್ ಶಿರ್ಕೆ ಅವರನ್ನು ಛಾವಾ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಸಂಪರ್ಕಿಸಿದ್ದಾರೆ. ಶಿರ್ಕೆ ಕುಟುಂಬಕ್ಕೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಯನ್ನು ಕೇಳಿದ್ದಾರೆ.
ಇನ್ನು ಗನೋಜಿ ಮತ್ತು ಕನ್ಹೋಜಿಯ ಅಡ್ಡಹೆಸರನ್ನು ಅಥವಾ ಗ್ರಾಮದ ಹೆಸರನ್ನು ನಾವು ಎಲ್ಲಿಯೂ ಉಲ್ಲೇಖಿಸಿಲ್ಲ ಅವರು ಗ್ರಾಮಕ್ಕೆ ಸೇರಿದವರು ಎನ್ನುವುದನ್ನು ಕೂಡ ನಾವು ಹೇಳಿಲ್ಲ ಎಂದಿರುವ ಲಕ್ಷ್ಮಣ್ ಉಟೇಕರ್ ಶಿರ್ಕೆ ಕುಟುಂಬದ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಹೇಳಿದ್ದಾರೆ. ಛಾವಾ ಚಿತ್ರದಿಂದ ನಿಮಗೆ ನೋವಾಗಿದ್ದರೆ, ತೊಂದರೆಯಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯನ್ನು ಕೋರುತ್ತೇನೆ ಎಂದು ಭೂಷಣ್ ಶಿರ್ಕೆ ಅವರಿಗೆ ಲಕ್ಷ್ಮಣ್ ಉಟೇಕರ್ ಹೇಳಿದ್ದಾರೆ.
ಅಂದ್ಹಾಗೇ ಸಂಗಮೇಶ್ವರದಿಂದ ಸಂಭಾಜಿ ಮಹಾರಾಜ್, ರಾಯಗಢಕ್ಕೆ ಯಾವ ಮಾರ್ಗದ ಮೂಲಕ ತೆರಳಲಿದ್ದಾರೆ ಎಂಬ ವಿಚಾರವನ್ನು ಗನೋಜಿ ಮತ್ತು ಕನ್ಹೋಜಿ ಶಿರ್ಕೆ ಮೊಘಲರ ಸರ್ದಾರ ಮುಖರಬ್ ಖಾನ್‌ಗೆ ತಿಳಿಸಿದ್ದರು. ಈ ಕಾರಣಕ್ಕೆ ಮರಾಠಿ ಸೈನಿಕರನ್ನು ಹೊರತು ಪಡಿಸಿ ಯಾರಿಗೂ ಗೊತ್ತಿರದ ಮಾರ್ಗದ ಮೂಲಕ ಬಂದು ಮೊಘಲ ಸೈನಿಕರು ಸಂಭಾಜಿ ಮಹಾರಾಜನ ಮೇಲೆ ದಾಳಿ ಮಾಡಿದರು. ಔರಂಗಜೇಬ್‌ನ ಅಣತಿಯಂತೆ ಸಂಭಾಜಿ ಮಹಾರಾಜ್‌ರನ್ನು ಸೆರೆ ಹಿಡಿದು ಕರೆತಂದು ಚಿತ್ರಹಿಂಸೆಯನ್ನು ನೀಡಿದರು. ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಿದರು. ಇದಕ್ಕೆ ಒಪ್ಪದ ಸಂಭಾಜಿ ಮಹಾರಾಜ್‌ರನ್ನು ಆ ನಂತರ ಕೊಂದು ಹಾಕಲಾಯಿತು ಎಂಬಂತೆ ಚಿತ್ರದಲ್ಲಿ ತೋರಿಸಲಾಗಿದೆ.
ಇನ್ನುಳಿದಂತೆ ಬಾಕ್ಸಾಫೀಸ್‌ನಲ್ಲಿ ಛಾವಾ ಚಮತ್ಕಾರ ಮುಂದುವರೆದಿದೆ. ಚಿತ್ರ ಹನ್ನೊಂದು ದಿನದಲ್ಲಿ 350 ಕೋಟಿಯನ್ನು ಗಳಿಸಿದೆ. ಇನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಛಾವ ಚಿತ್ರವನ್ನು ಬಾಯ್ತುಂಬ ಹೊಗಳಿದ್ದಾರೆ. ಇದರಿಂದ ಖುಷಿಯಾಗಿರುವ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ಹೇಳಿದ್ದಾರೆ. ಒಟ್ನಲ್ಲಿ ಶಿರ್ಕೆ ವಂಶಸ್ಥರಲ್ಲಿ ಚಿತ್ರದ ನಿರ್ದೇಶಕ ಲಕ್ಷ್ಮಣ್ ಕ್ಷಮೆ ಕೇಳಿದ್ಧಾರೆ. ಲಕ್ಷ್ಮಣ್ ಉಟೇಕರ್ ಅವರ ಈ ಕ್ಷಮಾಪಣೆ ನಂತರ ಶಿರ್ಕೆ ವಂಶಸ್ಥರು ಮೊದಲೇ ಹೇಳಿದಂತೆ ಛಾವಾ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತಾರಾ ಇಲ್ಲವಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











