ವಿವಾದದಲ್ಲಿ ದೀಪಿಕಾ ಅಭಿನಯದ ಚಪಾಕ್: ಕೋರ್ಟ್ ಮೆಟ್ಟಿಲೇರಿದ ಬರಹಗಾರ.!
ಆಸಿಡ್ ಸಂತ್ರಸ್ತೆಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. 'ಚಪಾಕ್' ರಿಲೀಸ್ ಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ, ಬರಹಗಾರ ರಾಕೇಶ್ ಭಾರತಿ ಕೋರ್ಟ್ ಮೆಟ್ಟಿಲೇರಿದ್ದಾರೆ.
'ಬ್ಲಾಕ್ ಡೇ' ಶೀರ್ಷಿಕೆ ಅಡಿ ತಾವು ಬರೆದ ಕಥೆಯನ್ನು 'ಚಪಾಕ್' ಚಿತ್ರತಂಡ ನಕಲು ಮಾಡಿದೆ. 'ಚಪಾಕ್' ಸಿನಿಮಾದಲ್ಲಿ ತಮಗೆ ಸೂಕ್ತ ಕ್ರೆಡಿಟ್ ಸಿಗಬೇಕು. ಇಲ್ಲಾಂದ್ರೆ, ಚಿತ್ರ ಬಿಡುಗಡೆ ಆಗಲು ಬಿಡಬಾರದು ಎಂದು ಕೋರಿ ಬರಹಗಾರ ರಾಕೇಶ್ ಭಾರತಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರೊಡ್ಯೂಸರ್ಸ್ ಅಸೋಸಿಯೇಷನ್ ನಲ್ಲಿ 'ಬ್ಲಾಕ್ ಡೇ' ಅಂತ ತಾತ್ಕಾಲಿಕ ಟೈಟಲ್ ರಿಜಿಸ್ಟರ್ ಮಾಡಿಸಿ, ಆಸಿಡ್ ಸಂತ್ರಸ್ತೆ ಕುರಿತಾದ ಚಿತ್ರಕಥೆಯನ್ನ ಹಲವು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ರಾಕೇಶ್ ಭಾರತಿ ವಿವರಿಸಿದ್ದರಂತೆ. ಆದರೆ ಕೆಲವು ಕಾರಣಗಳಿಂದ ತಮ್ಮ ಚಿತ್ರ ಸೆಟ್ಟೇರಲು ತಡವಾಯಿತು. 'ಚಪಾಕ್' ಚಿತ್ರತಂಡ ತಮ್ಮ ಕಥೆಯನ್ನೇ ಬಳಸಿಕೊಂಡಿದೆ ಎಂದು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಕೇಶ್ ಭಾರತಿ ದೂರಿದ್ದಾರೆ.

'ಚಪಾಕ್' ನಿರ್ದೇಶಕಿ ಮೇಘನಾ ಗುಲ್ಜರ್ ಜೊತೆಗೂ ಮಾತುಕತೆ ನಡೆಸಲು ರಾಕೇಶ್ ಭಾರತಿ ಪ್ರಯತ್ನಿಸಿದ್ದರು. ಆದ್ರೆ, ಯಾವುದೇ ಪ್ರಯೋಜನ ಆಗದ ಕಾರಣ ಈಗ ಕೋರ್ಟ್ ಮೊರೆ ಹೋಗಿದ್ದಾರೆ.
2005ರಲ್ಲಿ ಆಸಿಡ್ ಅಟ್ಯಾಕ್ ಗೆ ಒಳಗಾಗಿದ್ದ 15 ವರ್ಷದ ಯುವತಿ ಲಕ್ಷ್ಮಿ ಕುರಿತಾದ ಚಿತ್ರ 'ಚಪಾಕ್'. ನೈಜ ಘಟನೆ ಆಧಾರಿತ 'ಚಪಾಕ್' ಸಿನಿಮಾದ ಬಿಡುಗಡೆ ದಿನಾಂಕ ಜನವರಿ 10, 2020ಕ್ಕೆ ನಿಗದಿಯಾಗಿದೆ.


Click it and Unblock the Notifications











