ಆ ಪ್ರಾಣಿಗಳ ಮಾಂಸ ತಿಂದಿದ್ದೀನಿ ಎಂದ ನಟಿ; ದೂರು ದಾಖಲು
'ಲಾಪಾಟಾ ಲೇಡೀಸ್' ಚಿತ್ರದಲ್ಲಿ ನಟಿಸಿದ್ದ ಛಾಯಾ ಕದಮ್ ಅವರಿಗೆ ಸಂಕಷ್ಟ ಎದುರಾಗಿದೆ. ಸಂದರ್ಶನವೊಂದರಲ್ಲಿ ಬಾಯ್ತಪ್ಪಿ ಆಡಿದ ಮಾತಿನಿಂದ ಇದೀಗ ದೂರು ದಾಖಲಾಗುವಂತಾಗಿದೆ. ಕೆಲ ವನ್ಯಜೀವಿಗಳ ಮಾಂಸವನ್ನು ತಾವು ತಿಂದಿರುವುದಾಗಿ ಹೇಳಿರುವುದೇ ಇಷ್ಟಕ್ಕೆಲ್ಲಾ ಕಾರಣವಾಗಿದೆ.
ಮುಂಬೈ ಮೂಲದ ನಟಿ ಛಾಯಾ ಕದಮ್ ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬಂದವರು. ಮರಾಠಿ ರಂಗಭೂಮಿಯಲ್ಲಿ ತಮ್ಮ ಅದ್ಭುತ ನಟನೆಯಿಂದ ಆಕೆ ಗಮನ ಸೆಳೆದಿದ್ದರು. ಬಳಿಕ ಮರಾಠಿ ಚಿತ್ರರಂಗ ಕೈಬೀಸಿ ಕರೆದಿತ್ತು. ಮುಂದೆ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಅವಕಾಶ ಸಿಕ್ಕಿತ್ತು. 'ಸಿಂಗಂ ರಿಟರ್ಟ್ಸ್', 'ಅಂಧಾದೂನ್', 'ಅಂತಿಮ್', 'ಗಂಗೂಬಾಯಿ ಕಥಿಯಾವಾಡ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.

ತಮ್ಮ ಪವರ್‌ಫುಲ್ ಪರ್ಫಾರ್ಮನ್ಸ್ ಮೂಲಕ ಖಡಕ್ ಪಾತ್ರಗಳಿಗೆ ಛಾಯಾ ಕದಮ್ ಜೀವ ತುಂಬಿದ್ದಾರೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಕೆಲ ಕಾಡು ಪ್ರಾಣಿಗಳ ಮಾಂಸವನ್ನು ತಾನು ಸೇವಿಸಿರುವುದುದಾಗಿ ಆಕೆ ಹೇಳಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಅರಣ್ಯ ಇಲಾಖೆ ಸಿಬ್ಬಂದಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಸಂರಕ್ಷಿತ ವನ್ಯಜೀವಿಗಳ ಮಾಂಸದಿಂದ ಮಾಡಿದ ಖಾದ್ಯಗಳನ್ನು ಸೇವಿಸಿರುವುದಾಗಿ ಆಕೆ ಒಪ್ಪಿಕೊಂಡಿರುವುದರಿಂದ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.
ಛಾಯಾ ಕದಮ್ ನೀಡಿದ ಸಂದರ್ಶನದ ಬಗ್ಗೆ ಮುಂಬೈನ 'ಪ್ಲಾಂಟ್ ಅಂಡ್ ಅನಿಮಲ್ ವೆಲ್ಫೇರ್ ಸೊಸೈಟಿ (PAWS)' ಎಂಬ ಸಂಸ್ಥೆಯು ಥಾಣೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿತ್ತು. ಆಕೆ ಕಾಡು ಪ್ರಾಣಿಗಳ ಮಾಂಸ ತಿಂದಿದ್ದೇನೆ ಎಂದು ಹೇಳಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎನ್‌ಜಿಒ ಒತ್ತಾಯಿಸಿತ್ತು. ನಟಿ ಛಾಯಾ ಕದಮ್ ಸಂದರ್ಶನದಲ್ಲಿ ಚೆವ್ರೊಟೈನ್(ಇಲಿ ಮೂತಿಯ ಜಿಂಕೆ), ಮೊಲಗಳು, ಕಾಡುಹಂದಿ, ಉಡ ಮತ್ತು ಮುಳ್ಳುಹಂದಿಯ ಮಾಂಸ ಸೇವಿಸಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ಸಂಬಂಧ ತನಿಖಾಧಿಖಾರಿ ರಾಕೇಶ್ ಭೋಯಿರ್ ಪ್ರತಿಕ್ರಿಯಿಸಿದ್ದಾರೆ. "ನಾವು ನಟಿ ಛಾಯಾ ಕದಮ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದೆವು. ಅವರು ವೃತ್ತಿಪರ ಪ್ರವಾಸಕ್ಕಾಗಿ ಆಕೆ ಮುಂಬೈ ಬಿಟ್ಟು ಬೇರೆ ಕಡೆ ಹೋಗಿರುವುದಾಗಿ, 4 ದಿನಗಳ ಬಳಿಕ ವಾಪಸ್ ಮುಂಬೈಗೆ ಬರುವುದಾಗಿ ಹೇಳಿದ್ದಾರೆ. ಕಾನೂನು ಸಲಹೆ ಪಡೆಯುತ್ತಿರುವುದಾಗಿ ಮತ್ತು ತನಿಖೆಗಾಗಿ ನಮ್ಮ ಮುಂದೆ ಹಾಜರಾಗುವುದಾಗಿ ಆಕೆ ತಿಳಿಸಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
"ನಟಿ ಛಾಯಾ ಕದಮ್ ಸಂದರ್ಶನ ನೀಡಿರುವ ವೀಡಿಯೊ ಆಧಾರದ ಮೇಲೆ, ಆಪಾದಿತ ಚಟುವಟಿಕೆ ನಡೆದ ಪ್ರದೇಶದಲ್ಲಿ ಬೇಟೆಗಾರರನ್ನು ಪತ್ತೆಹಚ್ಚುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಹೆಸರು ಬಹಿರಂಗಪಡಿಸಲು ಬಯಸದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಒಟ್ಟಾರೆ ಬಾಲಿವುಡ್ ನಟಿ ಛಾಯಾ ಕದಮ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
'ಪ್ಲಾಂಟ್ ಅಂಡ್ ಅನಿಮಲ್ ವೆಲ್ಫೇರ್ ಸೊಸೈಟಿ' ತನ್ನ ದೂರಿನಲ್ಲಿ "ನಮ್ಮ ತಂಡವು ನಟಿ ಛಾಯಾ ಕದಮ್ ಸಂದರ್ಶನದ ವೀಡಿಯೋ ನೋಡಿದೆ. ಅದರಲ್ಲಿ ಆಕೆ ಮೊಲಗಳು, ಕಾಡುಹಂದಿ, ಉಡ ಸೇರಿ ಕೆಲ ಸಂರಕ್ಷಿತ ವನ್ಯಜೀವಿ ಪ್ರಭೇದಗಳ ಮಾಂಸವನ್ನು ತಿಂದಿರುವುದಾಗಿ ತಿಳಿಸಿದ್ದಾರೆ. ಇದು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಅಷ್ಟೇ ಅಲ್ಲ ವನ್ಯಜೀವಿ (ರಕ್ಷಣೆ) ಕಾಯ್ದೆ, 1972ರ ವಿವಿಧ ವಿಭಾಗಗಳ ಅಡಿಯಲ್ಲಿ ಅಪರಾಧವಾಗಿದೆ. ಜೈವಿಕ ವೈವಿಧ್ಯತೆ ಕಾಯ್ದೆ, 2002ರ ಸಂಬಂಧಿತ ವಿಭಾಗಗಳನ್ನು ಅನ್ವಯಿಸಬೇಕೆಂದು ನಾವು ವಿನಂತಿಸುತ್ತೇವೆ. ಸಂದರ್ಶನವನ್ನು ಆಕೆಯ ತಪ್ಪೊಪ್ಪಿಗೆ ಎಂದು ಪರಿಗಣಿಸಬೇಕು. ಮಾಂಸಕ್ಕಾಗಿ ವನ್ಯಜೀವಿ ಬೇಟೆಯ ಈ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ." ಎಂದು ತಿಳಿಸಿದ್ದಾರೆ.


Click it and Unblock the Notifications











