'83' ಸಿನಿಮಾ ವಿರುದ್ಧ ವಂಚನೆ ಪ್ರಕರಣ: ದೀಪಿಕಾ ವಿರುದ್ಧವೂ ದೂರು
ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ನಟಿಸಿರುವ ಹೊಸ ಸಿನಿಮಾ '83' ವಿರುದ್ಧ ಹಣಕಾಸು ಸಂಸ್ಥೆಯೊಂದು ವಂಚನೆ ಪ್ರಕರಣ ದಾಖಲಿಸಿದೆ.
ಅರಬ್ ದೇಶದ ಹಣಕಾಸು ಸಂಸ್ಥೆ ವಿಬ್ರಿ ಮೀಡಿಯಾ, ಮುಂಬೈನ ಅಂಧೇರಿ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ '83' ಸಿನಿಮಾದ ನಿರ್ಮಾಪಕಿ ದೀಪಿಕಾ ಪಡುಕೋಣೆ, ಸಾಜಿದ್ ನಾಡಿಯಾವಾಲಾ, ಇನ್ನೂ ಕೆಲವು ಸಹ ನಿರ್ಮಾಪಕರ ಮೇಲೆ ಹಾಗೂ ನಿರ್ದೇಶಕ ಕಬೀರ್ ಖಾನ್ ಮೇಲೆ ವಂಚನೆ ದೂರು ದಾಖಲಿಸಿದೆ.
ವಿಬ್ರಿ ಮೀಡಿಯಾ ಸಹ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, '83' ಸಿನಿಮಾದ ನಿರ್ಮಾಪಕರು ನಮಗೆ ವಂಚನೆ ಮಾಡಲು ಉದ್ದೇಶಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ವಿಬ್ರಿ ಮೀಡಿಯಾ 15.80 ಕೋಟಿ ಹಣ ಹೂಡಿಕೆ ಮಾಡಿದ್ದು, ಸಿನಿಮಾದಲ್ಲಿ ಬರುವ ಲಾಭವನ್ನು ತಮ್ಮೊಂದಿಗೆ ಹಂಚಿಕೊಳ್ಳದಿರಲು ಸಿನಿಮಾದ ನಿರ್ಮಾಪಕರು ನಿಶ್ಚಯಿಸಿದ್ದಾರೆ ಹಾಗಾಗಿ ತಾವು ನ್ಯಾಯ ಒದಗಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ ಎಂದು ದೂರಿನಲ್ಲಿ ವಿಬ್ರಿ ಮೀಡಿಯಾ ಹೇಳಿದೆ.

ಸಿನಿಮಾ ಆರಂಭವಾದಾಗ ರಿಲಯನ್ಸ್ ಸಂಸ್ಥೆಯ ಜೊತೆಗೆ ವಿಬ್ರಿ ಮೀಡಿಯಾ ಸಹಭಾಗಿತ್ವದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿತ್ತು. ಆ ನಂತರ ದೀಪಿಕಾ ಪಡುಕೋಣೆ, ಸಾಜಿದ್ ನಾಡಿಯಾವಾಲ, ಕಬೀರ್ ಖಾನ್, ವಿಷ್ಣುವರ್ಧನ್ ಇಂದೂರಿ, ಫ್ಯಾಂಟೊಮ್ ಫಿಲಮ್ಸ್, 83 ಫಿಲಮ್ ಲಿಮಿಟೆಡ್ ಅವರುಗಳು ಸಿನಿಮಾಕ್ಕೆ ಸಹ ನಿರ್ಮಾಪಕರಾದರು.
ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಈಗ ಲಾಭ ಹಂಚಿಕೆ ವಿಚಾರದಲ್ಲಿ ವಿಬ್ರಿ ಮೀಡಿಯಾ ಹಾಗೂ ಇತರ ನಿರ್ಮಾಪಕರ ನಡುವೆ ತಿಕ್ಕಾಟ ಶುರುವಾಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಬ್ರಿ ಮೀಡಿಯಾದ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಅರ್ಜಿ ವಿಚಾರಣೆಗೆ ಬಂದು ಸಿನಿಮಾದ ಬಿಡುಗಡೆಗೆ ತಡೆ ನೀಡಿದರೆ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
'83' ಸಿನಿಮಾವು ಭಾರತ ವಿಶ್ವಕಪ್ ಗೆದ್ದ ಕತೆಯನ್ನು ಆಧರಿಸಿದೆ. ಸಿನಿಮಾದಲ್ಲಿ ರಣ್ವೀರ್ ಸಿಂಗ್, 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ, ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪಂಕಜ್ ತ್ವಿಪಾಠಿ, ತಮಿಳಿನ ನಟ ಜೀವ ಇನ್ನೂ ಹಲವು ನಟರಿದ್ದಾರೆ. ಸಿನಿಮಾವು ಡಿಸೆಂಬರ್ 24 ರಂದು ಬಿಡುಗಡೆ ಆಗಲಿದೆ.


Click it and Unblock the Notifications











