ನವ ಜೋಡಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ವಿರುದ್ಧ ದೂರು ದಾಖಲು!
ಬಾಲಿವುಡ್‌ನಲ್ಲಿ 'ಬಿಗ್ ಫ್ಯಾಟ್ ವೆಡ್ಡಿಂಗ್' ಕಾಲ ಮತ್ತೆ ಆರಂಭವಾಗಿದೆ. ಕೊರೊನಾ ಕಾರಣದಿಂದ ಅದ್ದೂರಿ ಮದುವೆಗಳಿಗೆ ಬ್ರೇಕ್ ಬಿದ್ದಿತ್ತು, ಇದೀಗ ಮತ್ತೆ ಆರಂಭವಾಗಿದೆ.
ಆಲಿಯಾ-ರಣ್ಬೀರ್ ಕಪೂರ್ ವಿವಾಹಕ್ಕೆ ಎದುರು ನೋಡುತ್ತಿರುವಾಗಲೇ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ವಿವಾಹ ಸುದ್ದಿ ಹೊರಬಿದ್ದು ಬಾಲಿವುಡ್ ಪಾಪಾರಾಜಿಗಳನ್ನು ಗೊಂದಲಕ್ಕೆ ನೂಕಿತ್ತು.
ಹಲವು ಗಾಳಿ ಸುದ್ದಿಗಳು ಹರಿದಾಡಿದ ಬಳಿಕ ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಮದುವೆಯಾಗುವ ಸುದ್ದಿ ಖಾತ್ರಿಯಾಗಿದ್ದು, ರಾಜಸ್ಥಾನದಲ್ಲಿ ಅದ್ದೂರಿಯಾಗಿ ಈ ಜೋಡಿ ವಿವಾಹವಾಗಲಿದ್ದಾರೆ. ಆದರೆ ವಿವಾಹ ಈ ಜೋಡಿಯ ವಿವಾಹ ಸಮಾರಂಭ ಆರಂಭವಾದ ದಿನವೇ ಸಂಕಷ್ಟವೊಂದು ಎದುರಾಗಿದೆ.

ನೇತ್ರಬಿಂದ್ ಸಿಂಗ್ ಜಾದೋನ್ ಹೆಸರಿನ ವಕೀಲರೊಬ್ಬರು ವಿಕ್ಕಿ ಕೌಶಲ್ ಹಾಗೂ ಕತ್ರಿಕಾ ಕೈಫ್ ವಿರುದ್ಧ ದೂರು ದಾಖಲಿಸಿದ್ದಾರೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಮದುವೆಯು ರಾಜಸ್ಥಾನದ ಸವಾಯಿ ಮಾಧೋಪುರ್‌ನ ಭರ್ವರಾ ಅರಮನೆಯಲ್ಲಿ ನಡೆಯಲಿದೆ. ಡಿಸೆಂಬರ್ 06 ರಿಂದ 9 ರವರೆಗೆ ವಿವಾಹ ಸಮಾರಂಭ ನಡೆಯಲಿದ್ದು, ಇದಕ್ಕಾಗಿ ಭಾರಿ ತಯಾರಿಗಳನ್ನು ಮಾಡಲಾಗಿದೆ.
ಆದರೆ ವಿಕ್ಕಿ ಕೌಶಲ್-ಕತ್ರಿನಾ ಕೈಫ್ ವಿವಾಹದಿಂದಾಗಿ ಭರ್ವರಾ ಅರಮನೆಯ ಸಮೀಪದ ನಿವಾಸಿಗಳಿಗೆ ಸಮಸ್ಯೆ ತಲೆದೋರಿದೆ. ವಿವಿಐಪಿಗಳು ವಿವಾಹಕ್ಕೆ ಆಗಮಿಸುವ ಕಾರಣದಿಂದಾಗಿ ಕೆಲವು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹಾಗಾಗಿ ಸ್ಥಳೀಯರಿಗೆ ಓಡಾಡಲು ಅನಾನುಕೂಲವಾಗಿದೆ.
ಇದೇ ವಿಷಯವಾಗಿ ವಕೀಲ ನೇತ್ರಬಿಂದ್ ಸಿಂಗ್ ಜಾದೋನ್ ನ್ಯಾಯಾಲಯದಲ್ಲಿ ಅರ್ಜಿ ಹೂಡಿದ್ದು, ''ವಿಕ್ಕಿ ಕೌಶಲ್-ಕತ್ರಿನಾ ಕೈಫ್ ವಿವಾಹದಿಂದಾಗಿ ಚೌಹಾಟ್ ಮಠ ದೇವಾಲಯದ ರಸ್ತೆಯನ್ನು ಮುಚ್ಚಲಾಗಿದ್ದು, ಇದರಿಂದ ಭಕ್ತಾದಿಗಳು ತೊಂದರೆ ಪಡುತ್ತಿದ್ದಾರೆ. ನನಗೆ ತಾರಾ ಜೋಡಿಯ ವಿವಾಹದ ಬಗ್ಗೆ ಬೇಸರವಿಲ್ಲ ಆದರೆ ದೇವಾಲಯದ ರಸ್ತೆಯನ್ನು ಬಂದ್ ಮಾಡಿರುವುದು ಭಕ್ತಾದಿಗಳಿಗೆ ಸಮಸ್ಯೆ ಆಗಿದೆ'' ಎಂದು ಆರೋಪಿಸಿದ್ದಾರೆ.
ಚೌಹಾತ್ ಮಠ ದೇವಾಲಯಕ್ಕೆ ಶ್ರೀಮಂತ ಇತಿಹಾಸವಿದೆ. ಈ ದೇವಾಲಯವು ಶತಮಾನದಷ್ಟು ಹಳೆಯದ್ದು ಎನ್ನಲಾಗುತ್ತದೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ವಿವಾಹ ನಡೆಯುತ್ತಿರುವ 'ಸಿಕ್ಸ್ ಸೆನ್ಸ್ ಹೋಟೆಲ್' ಇದೇ ದೇವಾಲಯದ ರಸ್ತೆಯಲ್ಲಿದೆ. ಹಾಗಾಗಿ ಈ ರಸ್ತೆಯನ್ನು ಬಂದ್ ಮಾಡಲಾಗಿದೆ. ಪ್ರತಿದಿನ ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಬಂದು ಹೋಗುತ್ತಾರೆ. ರಸ್ತೆ ಬಂದ್ ಮಾಡಿರುವುದರಿಂದ ಭಕ್ತರಿಗೆ ಸಮಸ್ಯೆ ಆಗಿದೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಅವರು ವಿವಾಹವಾಗುತ್ತಿದ್ದಾರೆ. ವಿವಾಹ ಸಮಾರಂಭವು ಡಿಸೆಂಬರ್ 06 ರಿಂದ ಡಿಸೆಂಬರ್ 09ರ ವರೆಗೆ ನಡೆಯಲಿದೆ. ಬಾಲಿವುಡ್‌ನ ಗಣ್ಯಾತಿಗಣ್ಯರು ಇವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.


Click it and Unblock the Notifications