ಯಶ್ ನಿರ್ಮಾಣದ 'ರಾಮಾಯಣ'ದಲ್ಲಿ 'ಭರತ'ನ ಪಾತ್ರ ಮಾಡಿದ್ದು ಯಾರು ? ಭಾರತದ ಹೆಮ್ಮೆಯ ಚಿತ್ರ ಎಂದ ನಟ
ರಾಮಾಯಣ, ಮಹಾಭಾರತದಂತಹ ಮಹಾನ್ ದೃಶ್ಯ ಕಾವ್ಯಗಳಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ಅರ್ಜುನ ಮುಂತಾದ ಪಾತ್ರಧಾರಿಗಳು ಹೇಗೆ ಇದ್ದರು ಎನ್ನುವುದು ಒಂದು ಕಾಲ್ಪನಿಕ ಸೃಷ್ಟಿ. ಆದರೂ ಕೂಡ ಇಂತಹ ಪಾತ್ರಗಳನ್ನು ತೆರೆಯ ಮೇಲೆ ತರುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಆ ಪಾತ್ರಗಳನ್ನು ನಿರ್ವಹಿಸುವ ವ್ಯಕ್ತಿ ಕೂಡ ಅಷ್ಟೇ ಸಮರ್ಥವಾಗಿ ಆ ಪಾತ್ರಕ್ಕೆ ಜೀವ ತುಂಬಬೇಕು. ಇಲ್ಲದೇ ಹೋದರೆ ಅಭಾಸ ಆಗಿ ಹೋಗುತ್ತೆ. ಇದಕ್ಕೆ ಆದಿಪುರುಷ್ ಸೇರಿ ಹಲವಾರು ಉದಾಹರಣೆಗಳು ಇವೆ.
ಹೀಗಾಗಿಯೇ ಯಶ್ ಮತ್ತು ನಮಿತ್ ಮಲ್ಹೋತ್ರಾ ತಮ್ಮ ಕನಸಿನ ಕೂಸು ರಾಮಾಯಣ ಚಿತ್ರದ ವಿಚಾರದಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳುತ್ತಿಲ್ಲ. ಬದಲಿಗೆ 4000 ಕೋಟಿ ಬಂಡವಾಳವನ್ನು ಹಾಕಿ ಅದ್ಧೂರಿಯಾಗಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಈಗಾಗಲೇ ಈ ಚಿತ್ರದ ಟೈಟಲ್ ಟೀಸರ್ ನೋಡಿದವರು ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ ಹಾರಿಸುವಂತಹ ಚಿತ್ರ ಇದಾಗಲಿದೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಬೆಳ್ಳಿಪರದೆಯ ಮೇಲೆ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು, ಎಲ್ಲರಿಗೆ ಗೊತ್ತಿರುವಂತೆ ಈ ರಾಮಾಯಣದಲ್ಲಿ ರಾಮನಾಗಿ ರಣ್ಭೀರ್ ಕಪೂರ್.. ಸೀರೆಯಾಗಿ ಸಾಯಿ ಪಲ್ಲವಿ.. ಮತ್ತು ರಾವಣನಾಗಿ ಯಶ್ ಅಭಿನಯಿಸುತ್ತಿದ್ದಾರೆ.
ಹನುಮಂತನ ಪಾತ್ರವನ್ನು ಸನ್ನಿ ಡಿಯೋಲ್ ನಿರ್ವಹಿಸಿದ್ದರೆ.. ರವಿ ದುಬೇ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಕಿರುತೆರೆ ರಾಮಾಯಣದ ರಾಮ ಅರುಣ್ ಗೋವಿಲ್ ದಶರಥನ ಪಾತ್ರಕ್ಕೆ.. ಇಂದಿರಾ ಕೃಷ್ಣನ್ ಕೌಶಲ್ಯ ಪಾತ್ರಕ್ಕೆ ..ಲಾರಾ ದತ್ತಾ ಕೈಕೇಯಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿವೇಕ್ ಓಬೆರಾಯ್..
ಮೊಹೀತ್ ರೈನಾ.. ಹೀಗೆ ಇನ್ನು ಹಲವಾರು ಜನ ಚಿತ್ರದಲ್ಲಿದ್ದು ಸದ್ಯ ಭರತನ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆ ಎನ್ನುವುದು ಬಹಿರಂಗವಾಗಿದೆ.
ಹೌದು, ಮರಾಠಿಯ ನಟ ಮತ್ತು ನಿರ್ದೇಶಕ ಆದಿನಾಥ್ ಕೊಠಾರೆ ರಾಮಾಯಣದಲ್ಲಿ 'ಭರತ'ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ವಿಚಾರವನ್ನು ಖುದ್ದು ಆದಿನಾಥ್ ಹೇಳಿಕೊಂಡಿದ್ಧಾರೆ ಕೂಡ.

ಈ ಕುರಿತು ''ಬಾಲಿವುಡ್ ಹಂಗಾಮಾ'' ಜೊತೆ ಮಾತನಾಡಿರುವ ಆದಿನಾಥ್ ಕೊಠಾರೆ ರಾಮಾಯಣ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ. ವಿಶ್ವವನ್ನು ನಿಬ್ಬೇರಗಾಗಿಸುವಂತೆ ನಿರ್ಮಾಣವಾಗುತ್ತಿರುವ ಭಾರತದ ಮಣ್ಣಿನ ಈ ಹೆಮ್ಮೆಯ ಚಿತ್ರದ ಭಾಗವಾಗಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿರುವ ಆದಿನಾಥ್ ನನಗೆ ಈ ಅವಕಾಶ ನೀಡಿದ ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಾಬ್ರಾ ಅವರಿಗೆ ನಾನು ಋಣಿ ಎಂದು ಹೇಳಿದ್ದಾರೆ. ನನ್ನನ್ನು ನಂಬಿ ಭರತನ ಪಾತ್ರವನ್ನು ನನಗೆ ನೀಡಿದ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಕೂಡ ನಾನು ಆಭಾರಿ ಎಂದು ಹೇಳಿದ್ದಾರೆ.
ಮುಂದುವರೆದು ರಾಮಾಯಣ ಚಿತ್ರ ಭಾರತದಲ್ಲಿಯೇ ನಿರ್ಮಾಣವಾದ ಅತ್ಯಂತ ಯೋಜಿತ ಚಿತ್ರ ಎಂದು ನಾನು ಅಂದುಕೊಳ್ಳುತ್ತೇನೆ ಎಂದಿರುವ ಆದಿನಾಥ್ ಕೊಠಾರೆ ಈ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡುತ್ತಿರುವ, ಈ ಪ್ರಕ್ರಿಯೆಯ ಒಂದು ಭಾಗವಾಗಿರುವ ನಾವು ಅದೃಷ್ಟಶಾಲಿಗಳು ಎಂದು ಹೇಳಿದ್ದಾರೆ. ಇಂತಹ ಬೃಹತ ಪ್ರಮಾಣದ ಚಿತ್ರವನ್ನು ಮಾಡುವುದು ಹೇಗೆ ಎನ್ನುವುದನ್ನು ಯಾವ ಸಿನಿಮಾ ಸ್ಕೂಲ್ ಕೂಡ ಕಲಿಸಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.
ಅಂದ್ಹಾಗೇ ಆದಿನಾಥ್ ಕೊಠಾರೆ ಬಾಲಕಲಾವಿದರಾಗಿ ಚಿತ್ರರಂಗಕ್ಕೆ ಬಂದವರು.1994ರಿಂದ ಮರಾಠಿಯಲ್ಲಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ 'ಪಾನಿ' ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಇನ್ನುಳಿದಂತೆ ಎರಡು ಭಾಗಗಳಲ್ಲಿ ರಾಮಾಯಣ ಚಿತ್ರ ತೆರೆಗೆ ಬರಲಿದ್ದು ಚಿತ್ರದ ಮೊದಲ ಭಾಗ 2026ರ ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ. ಎರಡನೇ ಭಾಗ 2027ರಲ್ಲಿ ತೆರೆಗೆ ಬರಲಿದೆ.


Click it and Unblock the Notifications











