25ನೇ ಹುಟ್ಟು ಹಬ್ಬಕ್ಕೆ ಎರಡೇ ದಿನ ಇರುವಾಗಲೇ ಖ್ಯಾತ ಕಂಟೆಂಟ್ ಕ್ರಿಯೇಟರ್ ಹಠಾತ್ ನಿಧನ
ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ,ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಇದಕ್ಕೆ ಮಿಶಾ ಅಗರ್ವಾಲ್ ಜೀವನದ ಅಂತ್ಯ ಮತ್ತೊಂದು ಉದಾಹರಣೆ. ಹೌದು, ಮಿಶಾ ಅಗರ್ವಾಲ್ ಪ್ರಖ್ಯಾತ ಕಂಟೆಂಟ್ ಕ್ರಿಯೇಟರ್. ಸೋಶಿಯಲ್ ಮೀಡಿಯಾದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದವರು ಇವರು. ಅತ್ಯಲ್ಪ ಅವಧಿಯಲ್ಲಿಯೇ, ಕೇವಲ 24ರ ಪ್ರಾಯದಲ್ಲಿಯೇ ಖ್ಯಾತಿಯ ಶಿಖರಕ್ಕೇರಿದ್ದವರು ಮಿಶಾ ಅಗರ್ವಾಲ್ .
ಇಂತಹ ಮಿಶಾ ಅಗರ್ವಾಲ್ ತಮ್ಮ 25ನೇ ಜನ್ಮದಿನವನ್ನು ಆಚರಿಸಿಕೊಳ್ಳುವ ಎರಡು ದಿನದ ಮೊದಲು ಇಹಲೋಕ ತ್ಯಜಿಸಿದ್ದಾರೆ. ಮಿಶಾ ಅಕಾಲಿಕ ನಿಧನಕ್ಕೆ ಕಾರಣ ಇನ್ನೂ ಗೊತ್ತಾಗದಿದ್ದರೂ ಮೊನ್ನೆ ಶುಕ್ರವಾರ ರಾತ್ರಿ ಮಿಶಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಿಶಾ ಅಗಲಿಕೆಯ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ.

ಮಿಶಾ ಅಗರ್ವಾಲ್ ಅವರ ನಿಧನದ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ, ನೀವು ಅವರಿಗೆ ಮತ್ತು ಅವರ ಕೆಲಸಕ್ಕೆ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಹೇಳಿರುವ ಅವರ ಕುಟುಂಬಸ್ಥರು ಈ ಅಪಾರವಾದ ನಷ್ಟವನ್ನು ನಿಭಾಯಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅವಳನ್ನು ನಿಮ್ಮ ಮನದಲ್ಲಿ ನಿಮ್ಮ ಯೋಚನೆಯಲ್ಲಿ ಜೀವಂತವಾಗಿಡಿ ಎಂದು ಹೇಳಿದ್ದಾರೆ.
ಮಿಶಾ ಅವರ ಈ ಹಠಾತ್ ನಿಧನದ ಸುದ್ದಿ ಕೇಳಿ ಇವರ ಫಾಲೋವರ್ಸ್‌ಗಳು, ಅಭಿಮಾನಿಗಳು ಸದ್ಯ ಶಾಕ್ ಆಗಿದ್ದಾರೆ. ತಮ್ಮ ಮನದ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಆಕೆಯ ತಮಾಷೆಯ ವಿಡಿಯೋಗಳು ನಮ್ಮಲ್ಲಿ ನಗು ಮೂಡಿಸುತ್ತಿದ್ದವು ಎಂದು ಅನೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇದು ಸುಳ್ಳು ಸುದ್ದಿ ಎನ್ನುತ್ತಿದ್ದಾರೆ. ಆಕೆ ಇಲ್ಲ ಅಂದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾರೆ. ಎಷ್ಟೊಂದು ಪ್ರತಿಭಾವಂತೆಯಾಗಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಈ ತರಹದ ಜೋಕ್ ಮಾಡಬೇಡಿ ಎಂದು ಕೂಡ ಹೇಳಿದ್ದಾರೆ.
ಫಾಲೋವರ್ಸ್‌ಗಳ ಈ ಕಾಮೆಂಟ್ ಅವರ ನೋವು ನೋಡಿ ಉತ್ತರವನ್ನು ಕೂಡ ನೀಡಿರುವ ಮಿಶಾ ಅವರ ಸಹೋದರಿ ಮುಕ್ತಾ ಅಗರ್ವಾಲ್, ಈ ಸುದ್ದಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕಿತ್ತು ಅದಕ್ಕೆ ನೀವು ಅರ್ಹರು ಕೂಡ ಹೀಗಾಗಿ ಸುದ್ದಿಯನ್ನು ನಿಮಗೆ ತಲುಪಿಸಿದ್ದೇವೆ ಎಂದು ಹೇಳಿದ್ದಾರೆ. ಹೆಚ್ಚೇನು ಮಾತನಾಡುವ ಸ್ಥಿತಿಯಲ್ಲಿ ನಾವು ಇಲ್ಲ ಎಂದು ತಿಳಿಸಿದ್ದಾರೆ.
ಅಂದ್ಹಾಗೇ ಮಿಶಾ ಅಗರ್ವಾಲ್ ಹಾಸ್ಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಎಲ್ಲರನ್ನು ನಗಿಸುತ್ತಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಮೂರುವರೆ ಲಕ್ಷ ಫಾಲೋವರ್ಸ್‌ಗಳನ್ನು ಮಿಶಾ ಅಗರ್ವಾಲ್ ಹೊಂದಿದ್ದರು. ಇನ್ನುGRWM { ಗೆಟ್ ರೆಡಿ ವಿತ್ ಮಿ } ಎಂದು ವಿಡಿಯೋಗಳನ್ನು ಕೂಡ ಮಿಶಾ ಶೇರ್ ಮಾಡುತ್ತಿದ್ದರು. ಇವರ ವಿಡಿಯೋಗಳು ಲಕ್ಷಾಂತರ ವೀಕ್ಷಣೆಯನ್ನು ಗಳಿಸುತ್ತಿದ್ದವು. ಹಲವಾರು ಜನ ಇವರ ವಿಡಿಯೋಗಳನ್ನು ನೋಡಿ, ಮೆಚ್ಚಿ ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಕೇವಲ ಇನ್‌ಸ್ಟಾಗ್ರಾಮ್ ಮಾತ್ರವಲ್ಲದೇ ಮಿಶಾ ಅಗರ್‌ವಾಲ್ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದರು. ತಮ್ಮ ಚಾನೆಲ್‌ಗೆ ದಿ ಮಿಶಾ ಅಗರ್‌ವಾಲ್ ಶೋ ಎಂದು ಹೆಸರಿಟ್ಟಿದ್ದರು.
ಸದ್ಯ ಮಿಶಾ ಅಗರ್ವಾಲ್ ಅವರ ನಿಧನಕ್ಕೆ ಕಾರಣವೇನು ಎನ್ನುವುದು ಇನ್ನು ಗೊತ್ತಾಗಿಲ್ಲ. ಕುಟುಂಬಸ್ಥರು ಕೂಡ ಹೇಳಿಲ್ಲ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಕೀರ್ತಿಯನ್ನು ಗಳಿಸಿದ ಮಿಶಾ ಅಗರ್ವಾಲ್ ಏಪ್ರಿಲ್ 4ರಿಂದ ಸೋಶಿಯಲ್ ಮೀಡಿಯಾದಿಂದ ದೂರ ಇದ್ದರು. ಯಾವಾಗಲೂ ಸಕ್ರಿಯರಾಗುತ್ತಿದ್ದ ಮಿಶಾ ಹೀಗೆ ಇನ್‌ಸ್ಟಾಗ್ರಾಮ್‌ನಿಂದ ಅಂತರ ಕಾಪಾಡಿಕೊಂಡಿದ್ದನ್ನು ಈಗ ಗಮನಿಸಿರುವ ಅನೇಕರು ಮಿಶಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಾ ಎನ್ನುವ ಪ್ರಶ್ನೆಯನ್ನು ಅವರ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಕೇಳುತ್ತಿದ್ದಾರೆ. ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಿಶಾಗೆ ನಿಧನಕ್ಕೆ ಕಾರಣವೇನು ? ಮಿಶಾಗೆ ನಿಜಕ್ಕೂ ಆಗಿದ್ದೇನು ? ಎನ್ನುವುದನ್ನು ಮಿಶಾ ಕುಟುಂಬಸ್ಥರು ಹೇಳುತ್ತಾರಾ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











