'ದಿ ಕಶ್ಮೀರಿ ಫೈಲ್ಸ್' ಸಿನಿಮಾದ ದೃಶ್ಯಗಳ ಕತ್ತರಿಗೆ ಕೋರ್ಟ್ ಸೂಚನೆ
ಇಂದಷ್ಟೆ ಬಿಡುಗಡೆ ಆಗಿರುವ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ವಿವಾದಕ್ಕೆ ಸಿಲುಕಿದೆ. ಸಿನಿಮಾದ ಕೆಲ ದೃಶ್ಯಗಳನ್ನು ಪ್ರದರ್ಶಿಸದಂತೆ ನ್ಯಾಯಾಲಯ ಆದೇಶಿಸಿದೆ.
'ದಿ ಕಾಶ್ಮೀರಿ ಫೈಲ್ಸ್' ಸಿನಿಮಾದ ವಿಶೇಷ ಪ್ರೀಮಿಯರ್ ಶೋ ನೋಡಿದ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಪತ್ನಿ ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ದೂರು ಆಲಿಸಿದ ಜಮ್ಮು ಕಾಶ್ಮೀರ ಜಿಲ್ಲಾ ನ್ಯಾಯಾಲಯವು, 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ.
''ಸಿನಿಮಾದಲ್ಲಿ ತೋರಿಸಲಾಗಿರುವ ಕೆಲವು ದೃಶ್ಯಗಳು ಸತ್ಯವಲ್ಲ ಅಲ್ಲದೆ ಆ ದೃಶ್ಯಗಳು ನನ್ನ ದಿವಂಗತ ಪತಿ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಗೌರವಕ್ಕೆ ಧಕ್ಕೆ ತರುತ್ತಿವೆ'' ಎಂದು ರವಿ ಖನ್ನಾ ಪತ್ನಿ ನಿರ್ಮಲಾ ಖನ್ನಾ ದೂರು ನೀಡಿದ್ದರು. ವಿಚಾರಣೆ ನಡೆಸಿದ ಜಮ್ಮು ಜಿಲ್ಲಾ ನ್ಯಾಯಾಲಯವು, ರವಿ ಖನ್ನಾ ಕುರಿತು ಇರುವ ದೃಶ್ಯಗಳನ್ನು ಬದಲಾವಣೆ ಮಾಡಬೇಕು ಅಥವಾ ಪ್ರದರ್ಶಿಸಬಾರದು ಎಂದು ಚಿತ್ರತಂಡಕ್ಕೆ ಹೇಳಿದೆ.

''ಸಿನಿಮಾದ ವಿಶೇಷ ಪ್ರದರ್ಶನ ವೀಕ್ಷಿಸಿದ ಬಳಿಕ ಸಿನಿಮಾವು ಸತ್ಯ ಘಟನೆಗಳನ್ನು ಆಧರಿಸಿಲ್ಲ. ಕಾಲ್ಪನಿಕ ಕತೆಯನ್ನು ಒಳಗೊಂಡಿದೆ. ರವಿ ಖನ್ನಾ ಅವರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಹೇಳಿದೆ ಆದರೆ ನನ್ನ ಮಾತನ್ನು ಚಿತ್ರತಂಡ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಬದಲಿಗೆ ನನ್ನ ವಿರುದ್ಧ ದೂಷಣೆ ಮಾಡಿದರು'' ಎಂದು ರವಿ ಖನ್ನಾ ಪತ್ನಿ ಹೇಳಿದ್ದಾರೆ.
'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ 'ಪ್ರೊಪಾಗಾಂಡ' ಸಿನಿಮಾ ಎಂಬ ಟೀಕೆಗೆ ಗುರಿಯಾಗಿದೆ. ಇದರ ಜೊತೆಗೆ ಕೆಲ ವರ್ಗಗಳ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾ ನ್ಯಾಯಾಲಯದ ಹೊರತಾಗಿಯೂ ಚಿತ್ರತಂಡ ಸಿನಿಮಾದಲ್ಲಿ ಯಾವುದೇ ಬದಲಾವಣೆ ಮಾಡದೆ ಬಿಡುಗಡೆ ಮಾಡಿದೆ. ರವಿ ಖನ್ನಾ ಪತ್ನಿ ಈ ವಿಷಯವಾಗಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ.
'ದಿ ಕಾಶ್ಮೀರಿ ಫೈಲ್ಸ್' ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್ ಇನ್ನೂ ಹಲವರು ನಟಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಹಿಂದುಗಳ ಮೇಲೆ ಆದ ದೌರ್ಜನ್ಯದ ಕತೆಯನ್ನು ಈ ಸಿನಿಮಾ ಹೊಂದಿದೆ.
'ದಿ ಕಾಶ್ಮೀರಿ ಫೈಲ್ಸ್' ಸಿನಿಮಾಕ್ಕೆ ತಮ್ಮ ಟಾಕ್ ಶೋನಲ್ಲಿ ಪ್ರಚಾರ ನೀಡಲು ಕಪಿಲ್ ಶರ್ಮಾ ನಿರಾಕರಿಸಿದರು ಎಂದು ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವಿಟ್ಟರ್‌ನಲ್ಲಿ ಆರೋಪಿಸಿದ್ದರು. ಇದು ಸಹ ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದನ್ನು ತಳ್ಳಿ ಹಾಕಿರುವ ಕಪಿಲ್ ಶರ್ಮಾ, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯದ ಒಂದು ಮುಖವನ್ನೇ ತೋರಿಸಲಾಗುತ್ತದೆ. ನಾವು ಸಿನಿಮಾಕ್ಕೆ ಪ್ರಚಾರ ನೀಡುವುದಿಲ್ಲ ಎಂದು ಹೇಳಿದ್ದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











