ಸಂಕಷ್ಟದಲ್ಲಿ ಜಾಲಿLLB 3 ; ವಿಚಾರಣೆಗೆ ಖುದ್ಧು ಹಾಜರಾಗುವಂತೆ ಅಕ್ಷಯ್ ಕುಮಾರ್, ಅರ್ಷದ್‌ವಾರ್ಸಿಗೆ ಸಮನ್ಸ್ ಜಾರಿ!
''ಜಾಲಿ ಎಲ್‌ಎಲ್‌ಬಿ'' .. ಬಾಲಿವುಡ್‌ನ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದು. ಸುಭಾಶ್ ಕಪೂರ್ ಸಾರಥ್ಯದಲ್ಲಿ 2013ರಲ್ಲಿ ಶುರುವಾದ ಈ ಸರಣಿಯಲ್ಲಿ ಅರ್ಷದ್ ವಾರ್ಸಿ ಮೊದಲು ಅಭಿನಯಿಸಿದ್ದರು. ಆ ನಂತರ 2017ರಲ್ಲಿ ಅಕ್ಷಯ್ ಕುಮಾರ್ ''ಜಾಲಿ ಎಲ್ ಎಲ್‌ಬಿ''ಯ ಭಾಗವಾದರು. ಈಗ 2025ರಲ್ಲಿ ಈ ಚಿತ್ರದ ಮೂರನೇ ಭಾಗ ಬರುತ್ತಿದೆ. ಈ ಭಾಗದಲ್ಲಿ ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಇಬ್ಬರು ಜಾಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇನ್ನೇನು ಈ ಚಿತ್ರ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆದರೆ ಈಗ ಈ ಬಿಡುಗಡೆಗೆ ವಿಘ್ನ ಎದುರಾಗಿದೆ. ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ವಿರುದ್ಧ ಪುಣೆಯ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

''ನ್ಯೂಸ್18'' ವರದಿಯ ಪ್ರಕಾರ ವಕೀಲ ವಾಜಿದ್ ಖಾನ್ ಬಿದ್ಕರ್ ಅವರು ಸಲ್ಲಿಸಿದ ದೂರಿನ ನಂತರ ಪುಣೆ ನ್ಯಾಯಾಲಯವು ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿಗೆ ನೋಟಿಸ್ ಜಾರಿ ಮಾಡಿದೆ. ಚಿತ್ರವು ಕಾನೂನು ವ್ಯವಸ್ಥೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳನ್ನು ಅಣಕಿಸುತ್ತದೆ ಎಂದು ಆರೋಪವನ್ನು .ವಾಜಿದ್ ಖಾನ್ ಬಿದ್ಕರ್ ಮಾಡಿದ್ದು, ''ಜಾಲಿ ಎಲ್‌ಎಲ್‌ಬಿ 3'' ಚಿತ್ರದಲ್ಲಿ ಕಾನೂನು ವೃತ್ತಿಗೆ ಅವಮಾನ ಮಾಡಲಾಗಿದೆ. ನ್ಯಾಯಾಂಗಕ್ಕೆ ಅಗೌರವ ತೋರಲಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಾಧೀಶರನ್ನು 'ಮಾಮು' ಎಂದು ಕರೆಯುವ ದೃಶ್ಯಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಸೂಚಿಸಿದೆ. ಇವರಿಬ್ಬರು ಮಾತ್ರವಲ್ಲದೇ ಚಿತ್ರದ ನಿರ್ದೇಶಕ ಸುಭಾಶ್ ಕಪೂರ್ ಅವರಿಗೂ ಸಮನ್ಸ್ ನೀಡಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಅಂದ್ಹಾಗೇ ''ಜಾಲಿ ಎಲ್‌ಎಲ್‌ಬಿ 3'' ಚಿತ್ರಕ್ಕೆ ಸಂಕಷ್ಟ ಎದುರಾಗುತ್ತಿರುವುದು ಇದು ಮೊದಲಲ್ಲ. ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿಯೇ ಕಳೆದ ವರ್ಷ ಅಂದರೆ ಮೇ 2024 ರಲ್ಲಿ, ಅಜ್ಮೀರ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಚಂದ್ರಭಾನ್ ಸಹ ಚಿತ್ರತಂಡದ ವಿರುದ್ಧ ದೂರು ಸಲ್ಲಿಸಿದ್ದರು. ಈ ಸರಣಿಯು ಭಾರತೀಯ ನ್ಯಾಯಾಂಗಕ್ಕೆ ಅಗೌರವ ತೋರುತ್ತದೆ ಎಂದು ಆರೋಪಿಸಿದ್ದರು.
ಚಿತ್ರವು ವಕೀಲರು ಮತ್ತು ನ್ಯಾಯಾಧೀಶರನ್ನು "ಅನುಚಿತ" ರೀತಿಯಲ್ಲಿ ಚಿತ್ರಿಸುತ್ತದೆ ಎಂದು ಆರೋಪಿಸಿದ್ದ ಚಂದ್ರಭಾನ್ ಚಿತ್ರತಂಡ ವಿರುದ್ದ ಕೆಂಡ ಕಾರಿದ್ದರು.ಈ ಕೂಡಲೇ ''ಜಾಲಿ ಎಲ್‌ಎಲ್‌ಬಿ 3'' ಚಿತ್ರದ ಚಿತ್ರೀಕರಣವನ್ನು ನಿಲ್ಲಿಸುವಂತೆಯೂ ನ್ಯಾಯಾಲಯಕ್ಕೆ ಮನವಿಯನ್ನು ಕೂಡ ಮಾಡಿದ್ದರು.

ಇನ್ನು ''ಎನ್‌ಬಿಟಿ'' ವರದಿಯ ಪ್ರಕಾರ, ''ಜಾಲಿ ಎಲ್‌ಎಲ್‌ಬಿ'' ಮೊದಲ ಎರಡು ಚಿತ್ರಗಳಲ್ಲಿ ಕೂಡ ನ್ಯಾಯಾಂಗದ ಘನತೆ ಮತ್ತು ಪ್ರತಿಷ್ಠೆಯನ್ನು ಕುಗ್ಗಿಸುವ ಕೆಲಸವನ್ನು ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ಮಾಡಿದ್ದಾರೆ ಎಂದು ಕೂಡ ಚಂದ್ರಭಾನ್ ವಾದಿಸಿದ್ದರು.
ತಮ್ಮ ಈ ವಾದದಲ್ಲಿ ''ಜಾಲಿ ಎಲ್‌ಎಲ್‌ಬಿ 3'' ಚಿತ್ರದ ಚಿತ್ರೀಕರಣವು ಅಜ್ಮೀರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಡಿಆರ್‌ಎಂ ಕಚೇರಿ ಸುತ್ತ ಮುತ್ತ ನಡೆಯುತ್ತಿದೆ ಎಂದು ಅವರು ಹೇಳಿದ್ದ ಚಂದ್ರಭಾನ್, ಚಿತ್ರೀಕರಣದ ಸಮಯದಲ್ಲಿಯೂ ನಟರು ನ್ಯಾಯಾಂಗ ಮತ್ತು ನ್ಯಾಯಾಧೀಶರ ಗೌರವವನ್ನು ಎತ್ತಿಹಿಡಿಯುವಲ್ಲಿ ಗಂಭೀರವಾಗಿರಲಿಲ್ಲ ಎಂದು ಆರೋಪಿಸಿದ್ದರು.
ಇನ್ನುಳಿದಂತೆ ಸದ್ಯ ಕಾನೂನು ಸಂಕಷ್ಟದಲ್ಲಿ ಸಿಲುಕಿರುವ ''ಜಾಲಿ ಎಲ್‌ಎಲ್‌ಬಿ 3'' ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ಹೊರತು ಪಡಿಸಿದರೆ ಸೌರಭ್ ಶುಕ್ಲಾ, ಹುಮಾ ಖುರೇಷಿ, ಅಮೃತಾ ರಾವ್ ಮತ್ತು ಗಜರಾಜ್ ರಾವ್ ಸೇರಿದಂತೆ ಹಲವರು ಇದ್ದಾರೆ. ಇನ್ನು ಚಿತ್ರ ಸೆಪ್ಟೆಂಬರ್ 19ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದ್ದು ಅದೇ ದಿನ ತೆರೆಗೆ ಬರುತ್ತಾ ? ಅಥವಾ ಚಿತ್ರದ ಬಿಡುಗಡೆ ಮುಂದಕ್ಕೋಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











