ಸಿನಿಮಾದತ್ತ ಮುಖ ಮಾಡಿದ ಶಿಖರ್ ಧವನ್! ಪ್ರಮುಖ ಪಾತ್ರಕ್ಕೆ ಆಯ್ಕೆ
ಕ್ರಿಕೆಟಿಗರು ಸಿನಿಮಾಕ್ಕೆ ಬರುವುದು ಹೊಸದೇನೂ ಅಲ್ಲ. ಹಲವು ದಶಕಗಳಿಂದಲೂ ಸಿನಿಮಾ ಹಾಗೂ ಕ್ರಿಕೆಟ್ ರಂಗಗಳು ಪರಸ್ಪರ ಆಪ್ತವಾಗಿವೆ. ಕ್ರಿಕೆಟಿಗರು ಸಿನಿಮಾ ತಾರೆಯರನ್ನು ವಿವಾಹವಾಗುವ ಸಂಪ್ರದಾಯ ಹೊಸದೇನೂ ಅಲ್ಲ.
ಕ್ರಿಕೆಟ್ ತಾರೆಯರು ಸಿನಿಮಾ ನಿರ್ಮಾಣ ಮಾಡುವುದು, ಸಿನಿಮಾಗಳಲ್ಲಿ ನಟಿಸುವುದು ಸಹ ಹೊಸದೇನೂ ಅಲ್ಲ. ಹಲವು ಕ್ರಿಕೆಟ್ ತಾರೆಯರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಸಾಲಿಗೆ ಹೊಸ ಸೇರ್ಪಡೆ ಕ್ರಿಕೆಟಿಗ ಶಿಖರ್ ಧವನ್.
'ಗಬ್ಬರ್' ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಶಿಖರ್ ಧವನ್ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿರುವುದು ಬಹುತೇಕ ಖಾತ್ರಿಯಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಸಿನಿಮಾದ ಚಿತ್ರೀಕರಣವೂ ಬಹುತೇಕ ಪೂರ್ಣವಾಗಿದೆ!

ಶಿಖರ್ ಧವನ್, ಕೇವಲ ಅತಿಥಿ ಪಾತ್ರದಲ್ಲಿ ನಟಿಸುತ್ತಿಲ್ಲ ಬದಲಿಗೆ ಪೂರ್ಣ ಪ್ರಮಾಣದ ಪಾತ್ರದಲ್ಲಿಯೇ ನಟಿಸುತ್ತಿದ್ದಾರೆ. ಸಿನಿಮಾದ ಪಾತ್ರಕ್ಕೆ ಶಿಖರ್ ಸೂಕ್ತವಾದ ವ್ಯಕ್ತಿ ಎಂದು ನಿರ್ದೇಶಕರಿಗೆ ಎನಿಸಿ, ಶಿಖರ್ ಅನ್ನು ಈ ಬಗ್ಗೆ ಕೇಳಿದಾಗ ಖುಷಿಯಿಂದ ಒಪ್ಪಿಕೊಂಡು ನಟಿಸಿದ್ದಾರಂತೆ. ಸಿನಿಮಾದ ಹೆಸರು ಇನ್ನಷ್ಟೆ ಬಹಿರಂಗಗೊಳ್ಳಬೇಕಿದೆ.
ಕಳೆದ ವರ್ಷ ಅಕ್ಷಯ್ ಕುಮಾರ್ ನಟನೆಯ 'ರಾಮ್ ಸೇತು' ಸಿನಿಮಾದ ಚಿತ್ರೀಕರಣದ ಸೆಟ್‌ನಲ್ಲಿ ಶಿಖರ್ ಧವನ್ ಕಾಣಿಸಿಕೊಂಡಿದ್ದರು. ಅದೇ ಸಿನಿಮಾದಲ್ಲಿ ಶಿಖರ್ ಧವನ್ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಶಿಖರ್ ನಟಿಸುತ್ತಿಲ್ಲ. ಬಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾದಲ್ಲಿ ಶಿಖರ್ ನಟಿಸಿದ್ದಾರೆ ಎನ್ನಲಾಗಿದೆ.
ಶಿಖರ್ ಧವನ್‌ಗೆ ನಟನೆ ತೀರ ಹೊಸದೇನೂ ಅಲ್ಲ, ಹಲವು ಜಾಹೀರಾತುಗಳಲ್ಲಿ ಶಿಖರ್ ಧವನ್ ನಟಿಸಿದ್ದಾರೆ. ಶಿಖರ್ ಒಳ್ಳೆಯ ಪಂಜಾಬಿ ನೃತ್ಯಗಾರ ಸಹ. ಬಾಲಿವುಡ್ ಮಂದಿಯೊಂದಿಗೆ ಒಳ್ಳೆಯ ಗೆಳೆತನವನ್ನೂ ಸಹ ಶಿಖರ್ ಧವನ್ ಹೊಂದಿದ್ದಾರೆ. ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ಪ್ರೀತಿ ಜಿಂಟಾ ಇನ್ನೂ ಹಲವು ನಟ-ನಟಿಯರು ಶಿಖರ್ ಧವನ್‌ಗೆ ಒಳ್ಳೆಯ ಗೆಳೆಯರು.
ಹಲವು ಕ್ರಿಕೆಟಿಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಜಯ್ ಜಡೇಜಾ, ಕಪಿಲ್ ದೇವ್, ವಿನೋದ್ ಕಾಂಬ್ಳಿ, ಅನಿಲ್ ಕುಂಬ್ಳೆ, ಇನ್ನೂ ಹಲವಾರು ಮಂದಿ ಕ್ರಿಕೆಟ್ ತಾರೆಯರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಹುತೇಕ ಕ್ರಿಕೆಟಿಗರು ಅತಿಥಿ ಪಾತ್ರಗಳಲ್ಲಿ ಅಷ್ಟೆ ಕಾಣಿಸಿಕೊಂಡಿದ್ದಾರೆ. ಕೆಲವರು ಮಾತ್ರ ಪೂರ್ಣ ಪ್ರಮಾಣದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ಜಡೇಜಾ, ವಿನೋದ್ ಕಾಂಬ್ಳಿ, ಹರ್ಭಜನ್ ಸಿಂಗ್ ಅಂಥಹವರಲ್ಲಿ ಕೆಲವರು.


Click it and Unblock the Notifications










