ಜವಾನ್ ಪೈರಸಿ ವಿಡಿಯೋ ಇದ್ರೆ ಹುಷಾರ್!: ನಿಮ್ಮ ಮೇಲೂ ಬೀಳಬಹುದು ಕ್ರಿಮಿನಲ್ ಕೇಸ್!?
ಬಾಲಿವುಡ್ ನಟ ಶಾರುಖ್ ಖಾನ್ ಅವರ 'ಜವಾನ್' ಚಿತ್ರವು ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರೆಸುತ್ತಿದೆ. ಜವಾನ್ ಚಿತ್ರದ ಜನಪ್ರಿಯತೆ ಮತ್ತು ಯಶಸ್ಸನ್ನು ಗಮನದಲ್ಲಿಟ್ಟುಕೊಂಡು, ಹಲವು ಮಂದಿ ಸಿನಿಮಾದ ನಕಲಿ ಕಾಪಿಗಳನ್ನು ಬಿಡುಗಡೆ ಮಾಡಿದ್ದಾರೆ.
ಚಿತ್ರಮಂದಿರದಲ್ಲಿ ಒಳ್ಳೆ ಕಮಾಲ್ ಮಾಡುತ್ತಿರುವ ಹೊತ್ತಿನಲ್ಲಿ ಇಂತಹ ನಕಲಿ ಕಾಪಿಗಳು ಚಿತ್ರದ ಮೇಲೆ ಕೆಟ್ಟ ಪರಿಣಾಮ ಬೀರಲಿವೆ. ಸಿನಿಮಾದ ಪ್ರಮುಖ ದೃಶ್ಯಗಳು, ಸಿನಿಮಾದ ಅರ್ಧ ಭಾಗ, ಕೆಟ್ಟ ಕ್ವಾಲಿಟಿಯ ಪ್ರಿಂಟ್ ಸೇರಿದಂತೆ ಹಲವು ರೀತಿಯಲ್ಲಿ ಸಿನಿಮಾ ಪೈರಸಿ ಮಾಡಲಾಗಿದೆ. ಹಲವು ಪ್ಲಾಟ್‌ಫಾರಂಗಳಲ್ಲಿ ಈ ದೃಶ್ಯಗಳು ಕಾಣಿಸುತ್ತಿವೆ.

ಪೈರಸಿ ವಿರುದ್ಧ 'ಜವಾನ್' ಟೀಂ ಯುದ್ಧ!
'ಜವಾನ್' ಸಿನಿಮಾ ವಾಟ್ಸಾಪ್, ಟೆಲಿಗ್ರಾಮ್ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಸೋರಿಕೆಯಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಚಿತ್ರತಂಡ ಕಠಿಣ ಕ್ರಮ ತೆಗೆದುಕೊಂಡಿದೆ. ಚಿತ್ರದ ನಿರ್ಮಾಪಕರಾದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಕ್ಲಿಪ್‌ಗಳನ್ನು ಹಂಚಿಕೊಳ್ಳುವ ಅಥವಾ ವಿವಿಧ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಾದ ಶಿಸ್ತಿನ ಕ್ರಮವನ್ನು ತೆಗೆದುಕೊಂಡಿದೆ.
'ಜವಾನ್' ಪೈರಸಿ ಮಾಡುವವರ ವಿರುದ್ಧ ದೂರು
ಸಿನಿಮಾದ ಪೈರಸಿ ಕಾಪಿಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳು ಮತ್ತು ಗುಂಪುಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಪ್ರೊಡಕ್ಷನ್ ಹೌಸ್ ಖುದ್ದು ಫೀಲ್ಡ್‌ಗೆ ಇಳಿದಿದೆ. ಇದು ಹಲವು ಪೈರಸಿ ವಿರೋಧಿ ಏಜೆನ್ಸಿಗಳನ್ನು ನೇಮಿಸಿಕೊಂಡಿದೆ. ಈ ಏಜೆನ್ಸಿಗಳು ಆರೋಪಿಗಳನ್ನು ಪತ್ತೆ ಹಚ್ಚಿ ಪೈರಸಿ ಹರಡುವವರ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ವರದಿ ನೀಡುತ್ತದೆ.
ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಇಂದು ಪೈರಸಿಯಲ್ಲಿ ತೊಡಗಿರುವವರ ವಿರುದ್ಧ ಸಾಂತಾಕ್ರೂಜ್ ವೆಸ್ಟ್, ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಮರ್ ಪಾಟೀಲ್ ಅವರಿಗೆ ಪೊಲೀಸ್ ದೂರು ಸಲ್ಲಿಸಿದೆ.

ಪ್ರೊಡಕ್ಷನ್ ಹೌಸ್ ಮೂಲಗಳ ಪ್ರಕಾರ, "ನಾವು ಈಗಾಗಲೇ ವಿವಿಧ ವೇದಿಕೆಗಳಲ್ಲಿ ವ್ಯಕ್ತಿಗಳು ನಡೆಸುತ್ತಿರುವ ಪೈರೇಟೆಡ್ ಖಾತೆಗಳನ್ನು ಪತ್ತೆಹಚ್ಚಿದ್ದೇವೆ. ಜವಾನ್ ಚಿತ್ರದ ನಕಲಿ ಕಾಪಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ಅವರ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಕ್ರಮವನ್ನು ಪ್ರಾರಂಭಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಪೈರಸಿ ಎಂಬುದು ಚಲನಚಿತ್ರೋದ್ಯಮವು ದೊಡ್ಡ ಮಟ್ಟದಲ್ಲಿ ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಇದು ಚಲನಚಿತ್ರದಲ್ಲಿ ಕೆಲಸ ಮಾಡಿದ ಸಾವಿರಾರು ಜನರ ಶ್ರಮವನ್ನು ಹಾಳು ಮಾಡುತ್ತದೆ. ಕಾನೂನುಬಾಹಿರವಾಗಿ ರೆಕಾರ್ಡ್ ಮಾಡುವ ಮತ್ತು ಸೋರಿಕೆ ಮಾಡುವ ಇಂತಹ ಕೃತ್ಯಗಳು ಮೋಸ, ಕಳ್ಳತನ ಮತ್ತು ಬೌದ್ಧಿಕ ಆಸ್ತಿಯ ಹಾನಿಗೆ ಸಮನಾಗಿರುತ್ತದೆ.
ಸಿನಿಮಾ ಪೈರಸಿ ಮಾಡುವುದು ಕಾನೂನುಬಾಹಿರ ಅಷ್ಟೇ ಅಲ್ಲದೇ, ಕ್ರಿಮಿನಲ್ ಪಿತೂರಿಗೆ ಸಹ. ಕ್ರಿಮಿನಲ್ ಪಿತೂರಿ ನಡೆಸದೆ ಅಂತಹ ಕೃತ್ಯವು ಸಾಧ್ಯವಾಗುವುದಿಲ್ಲ. ಆದ್ದರಿಂದ, ವ್ಯಕ್ತಿಗಳು ಮತ್ತು ಗುಂಪುಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ಪ್ರೋಡಕ್ಷನ್ ಹೌಸ್ ಮನವಿ ಮಾಡಿದೆ.
'ಜವಾನ್'
ತಮಿಳು ನಿರ್ದೇಶಕ ಅಟ್ಲಿ ಆಕ್ಷನ್ ಕಟ್ ಹೇಳಿರುವ 'ಜವಾನ್' ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಹೈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿದ್ದಾರೆ. ದೀಪಿಕಾ ಪಡುಕೋಣೆ, ಸಂಜಯ್ ದತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ನಟಿಸಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತವಿದೆ.


Click it and Unblock the Notifications











