ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ; 'ಧುರಂಧರ್'ನ ಬಡೇ ಸಾಬ್ ಯಾರು ? ಇಲ್ಲಿದೆ ಪೂರ್ಣ ವಿವರ
ಒಂದು ಚಿತ್ರಕ್ಕೆ ನಿರ್ದೇಶಕ-ನಿರ್ಮಾಪಕ ಮತ್ತು ತಂತ್ರಜ್ಞರನ್ನು ಹೊರತು ಪಡಿಸಿ ಕೇವಲ ನಾಯಕ- ನಾಯಕಿ ಮಾತ್ರ ಮುಖ್ಯ ಅಲ್ಲ. ಆ ಚಿತ್ರದ ಖಳನಾಯಕ ಕೂಡ ಮುಖ್ಯ, ಪೋಷಕ ಕಲಾವಿದರು ಕೂಡ ಮುಖ್ಯ. ಹೀಗಾಗಿ ಈ ವಿಚಾರವನ್ನು ಚೆನ್ನಾಗಿ ಅರಿತ ಹಲವರು ತಮ್ಮ ಚಿತ್ರದ ಸಪೋರ್ಟಿಂಗ್ ಕಾಸ್ಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅಳೆದು ತೂಗಿ ಕಲಾವಿದರನ್ನು ಆಯ್ಕೆ ಮಾಡಿ ಪಾತ್ರಗಳನ್ನು ನೀಡುತ್ತಾರೆ.
ಹೀಗೆ ಒಲಿಯುವ ಪಾತ್ರಗಳಿಂದ ಕೆಲ ಒಮ್ಮೆ ಎಲೆ ಮರೆ ಕಾಯಿಯಂತೆ ಇದ್ದ ಕಲಾವಿದರ ಬದುಕು ಬದಲಾಗುತ್ತೆ. ಆ ಚಿತ್ರದ ತೂಕವನ್ನು ಹೆಚ್ಚಿಸುವುದಲ್ಲದೆ, ಪ್ರೇಕ್ಷಕರ ಮನಸ್ಸಿನಲ್ಲಿ ತಮ್ಮ ಅಭಿನಯದಿಂದ ಶಾಶ್ವತವಾಗಿ ಉಳಿದು ಬಿಡುತ್ತಾರೆ. ಉದಾಹರಣೆಗೆ ದಾನಿಶ್ ಇಕ್ಬಾಲ್.

ಹೌದು, ''ಧುರಂಧರ್'' ಚಿತ್ರದ ಮೊದಲ ಭಾಗ ಬಿಡುಗಡೆಯಾದ ನಂತರ ಹಲವರಲ್ಲಿ ಬಡೇ ಸಾಬ್ ಯಾರು ಎನ್ನುವ ಪ್ರಶ್ನೆ ಕಾಡುತ್ತಿತ್ತು. ಕೆಲವರು ಸಲ್ಮಾನ್ ಖಾನ್ ಹೆಸರನ್ನು ತೇಲಿ ಬಿಟ್ಟರೆ, ಇನ್ನೂ ಕೆಲವರು ''ಧುರಂಧರ್ 2'' ನಲ್ಲಿ ಬಡೇ ಸಾಬ್ ಪಾತ್ರವನ್ನು ಇಮ್ರಾನ್ ಹಶ್ಮಿ ನಿರ್ವಹಿಸಿದ್ದಾರೆ ಎಂದು ಪುಕಾರು ಹಬ್ಬಿಸಿದರು.
ಇದಕ್ಕೆ ಪೂರಕವಾಗಿ ಚಿತ್ರಪ್ರೇಮಿಗಳ ಪಾಲಿಗೆ ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತೆ ಕಾರ್ಯ ನಿರ್ವಹಿಸುವ ''ಲೆಟರ್ ಬಾಕ್ಸ್''ನಲ್ಲಿ ಇಮ್ರಾನ್ ಹಶ್ಮಿಯ ಹೆಸರು ಉಲ್ಲೇಖ ಮಾಡಲಾಗಿತ್ತು.
ಇದೆಲ್ಲದರಿಂದ ಯಾವುದು ಸತ್ಯ - ಯಾವುದು ಮಿಥ್ಯ.. ಎಂದು ಗೊತ್ತಾಗದೇ ಪ್ರೇಕ್ಷಕರು ಗೊಂದಲಕ್ಕೀಡಾದರು. ಕುತೂಹಲದಿಂದಲೇ ಚಿತ್ರಮಂದಿರಕ್ಕೆ ಹೋದರು. ಹೀಗೆ ಹೋದ ಎಲ್ಲರಿಗೆ ಎದುರಾಗಿದ್ದು ಅಚ್ಚರಿ. ಯಾಕೆಂದರೆ ಬಡೇ ಸಾಬ್ ಪಾತ್ರಕ್ಕೆ ಜೀವ ತುಂಬಿದ್ದು ಸಲ್ಮಾನ್ ಖಾನೂ ಅಲ್ಲ. ಇಮ್ರಾನ್ ಹಶ್ಮಿಯೂ ಅಲ್ಲ. ಈ ಪಾತ್ರ ಒಲಿದಿದ್ದು ದಾನಿಶ್ ಇಕ್ಬಾಲ್ ಎಂಬ ಅಪ್ಪಟ ಪ್ರತಿಭಾವಂತನಿಗೆ.
ಯಾರು ಈ ದಾನಿಶ್ ಇಕ್ಬಾಲ್ ..?
ಪ್ಯಾನ್ ಇಂಡಿಯಾ ಎಂಬ ಪ್ರಪಂಚದಲ್ಲಿ ದಾನಿಶ್ ಇಕ್ಬಾಲ್, ಹಲವರಿಗೆ ಅಪರಿಚಿತರಾಗಿರಬಹುದು. ಆದರೆ. ಅಭಿನಯದ ವಿಚಾರದಲ್ಲಿ ದಾನಿಶ್ ಪಳಗಿದ ಕುದುರೆ. ದೆಹಲಿಯ ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD)ದಲ್ಲಿ ಪದವಿ ಪಡೆದ ಇವರು, ಲಂಡನ್‌ನ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮಾದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದವರು.

ಇನ್ನು ''ಧುರಂಧರ್'' ಇವರ ಮೊದಲ ಸಿನಿಮಾವೇನು ಅಲ್ಲ. ''ಧುರಂಧರ್''ನ ಬಡೇ ಸಾಬ್ ಆಗುವ ಮುನ್ನ ರಂಗಭೂಮಿಯಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ದಾನಿಶ್ ಇಕ್ಬಾಲ್,
''ಮಹಾರಾಣಿ 2''.. ''ಆರಣ್ಯಕ್''.. ''ಫರಾಜ್''.. ''ಭಕ್ಷಕ್'' ಹೀಗೆ ಹಲವು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾನಾ ಪಾಟೇಕರ್ ಜೊತೆ ಇವರು ಅಭಿನಯಿಸಿರುವ ''ಸಂಕಲ್ಪ'' ಇತ್ತೀಚೆಗಷ್ಟೇ ಓಟಿಟಿಯಲ್ಲಿ ಪ್ರಸಾರ ಆರಂಭಿಸಿದೆ.
ಬಡೇ ಸಾಬ್‌ಗೆ 12 ಗಂಟೆ ಮೇಕಪ್, ರಹಸ್ಯ ಅರಿಯದ ದಾನಿಶ್
ಬಡೇ ಸಾಬ್ ಪಾತ್ರವನ್ನೇನೋ ದಾನಿಶ್ ಇಕ್ಬಾಲ್ ಮಾಡುತ್ತಿದ್ದರು. ಆದರೆ ತಾನು ಮಾಡುತ್ತಿರುವ ಪಾತ್ರದ ಹೆಸರು ಬಡೇ ಸಾಬ್ ಎನ್ನುವ ವಿಚಾರ ದಾನಿಶ್ ಇಕ್ಬಾಲ್‌ಗೆ ಕೊನೆವರೆಗೆ ಗೊತ್ತೇ ಇರಲಿಲ್ಲ. ತನ್ನ ಪಾತ್ರಕ್ಕಿರುವ ಪ್ರಾಮುಖ್ಯತೆಯ ಅರಿವು ಇರಲಿಲ್ಲ. ದಾವೂದ್ ಇಬ್ರಾಹಿಂ ನೆರಳಿನಂತೆ ಇರುವ ಪಾತ್ರ ಇದು ಎಂದಷ್ಟೇ ದಾನಿಶ್ ಇಕ್ಬಾಲ್‌ಗೆ ಆದಿತ್ಯ ಧರ್ ಹೇಳಿದ್ದರು.
ಇನ್ನು ಬಡೇ ಸಾಬ್ ಪಾತ್ರಕ್ಕೆ ಜೀವ ತುಂಬಲು ದಾನಿಶ್ ಇಕ್ಬಾಲ್, ಊಟ, ತಿಂಡಿ ಇಲ್ಲದೇ ಒಂದಲ್ಲ.. ಎರಡಲ್ಲ..ಹನ್ನೆರಡು ಗಂಟೆ ಕುಂತಲ್ಲಿಯೇ ಕುಂತಿದ್ಧಾರೆ. ಯಾಕೆಂದರೆ ಪ್ರತಿದಿನ ಸುಮಾರು 10 ರಿಂದ 12 ಗಂಟೆ ಇವರ ಮೇಕಪ್‌ಗೆ ಬೇಕಾಗುತ್ತಿತ್ತು. ''ರಿಪಬ್ಲಿಕ್'' ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ತುಂಬಾನೇ ತ್ರಾಸದಾಯಕವಾದ ಅನುಭವ ಅದು ಎಂದು ನೆನಪು ಮಾಡಿಕೊಂಡಿದ್ದಾರೆ ದಾನಿಶ್ ಇಕ್ಬಾಲ್.
ಒಟ್ನಲ್ಲಿ ಅಪ್ಪಟ ರಂಗಭೂಮಿ ಪ್ರತಿಭೆಯಾದ ದಾನಿಶ್ ಇಕ್ಬಾಲ್ ಅವರಿಗೆ ಬಾಲಿವುಡ್‌ನಲ್ಲಿ ಸಿಗಬೇಕಾದ ಗೌರವ ಮತ್ತು ಸ್ಥಾನವನ್ನು ''ಧುರಂಧರ್ 2'' ತಂದು ಕೊಟ್ಟಿದೆ. ದಾನಿಶ್ ಇಕ್ಬಾಲ್ ರೂಪದಲ್ಲಿ ಬಾಲಿವುಡ್‌ಗೆ ಈಗ ಹೊಸ ವಿಲನ್ ಸಿಕ್ಕಂತಾಗಿದೆ.


Click it and Unblock the Notifications











