ಮುಂಬೈನಲ್ಲಿ ಕಾರ್ತಿಕ್ ಆರ್ಯನ್ ಜೊತೆ ಸಿಕ್ಕಿ ಬಿದ್ದ ಶ್ರೀಲೀಲಾ..!
ಪ್ರೀತಿ ಅಂದರೆ ಅದು ನಾಟಕವೂ ಅಲ್ಲ. ಆಟಿಕೆಯೂ ಅಲ್ಲ. ಈ ಪ್ರೀತಿ ಯಾರ ಮೇಲೆ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಆಗಬಹುದು. ಎಲ್ಲರೂ ತನ್ನ ಕೈಹಿಡಿಯುವ ಸಂಗಾತಿ ಹೀಗಿರಬೇಕು. ಹಾಗಿರಬೇಕು ಎಂದು ಕನಸಿನ ಮೂಟೆಯನ್ನೇ ಹೊತ್ತು ಸಾಗುತ್ತಾರೆ. ಚಿತ್ರರಂಗದಲ್ಲಿರುವವರು ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಬಣ್ಣದ ಲೋಕದಲ್ಲಿ ಅನೇಕರು ಪ್ರೀತಿಯಲ್ಲಿ ಬಿದ್ದಿದ್ದಾರೆ.
ಈ ಸಾಲಿಗೆ ಈಗ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ಕೂಡ ಸೇರಿಕೊಂಡಿದ್ದಾರಾ ಎನ್ನುವುದೇ ಸದ್ಯಕ್ಕೆ ಹಲವರನ್ನು ಕಾಡುತ್ತಿರುವ ಅನುಮಾನ. ಹೌದು, ಅಸಲಿಗೆ ಕೆಲ ದಿನಗಳಿಂದ ಬಾಲಿವುಡ್‌ನ ಹೊಸ ಸೂಪರ್ ಸ್ಟಾರ್ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ನಿಜ ಜೀವನದಲ್ಲಿ ಕೂಡ ಪ್ರೇಮ ಗೀತೆ ಹಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ನಡೆ ಕೂಡ ಹಾಗೇ ಇದೆ.

ಚಿತ್ರದ ಚಿತ್ರೀಕರಣದ ಹೊರತಾಗಿಯೂ ಜೊತೆ ಜೊತೆಯಲ್ಲಿ ಕಾಣಸಿಗುವ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್, ಸದ್ಯ ಮುಂಬೈನಲ್ಲಿ ಜೊತೆಯಾಗಿ ಪಾಪರಾಜಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.
ಅಂದ್ಹಾಗೇ ಇದಕ್ಕೂ ಮುನ್ನ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸಹೋದರಿ ಮಾಡಿದ ಸಾಧನೆಗೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ಪಾರ್ಟಿಯನ್ನು ಹಮ್ಮಿಕೊಂಡಿದ್ದರು. ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಶ್ರೀಲೀಲಾ, ಕಾರ್ತಿಕ್ ಆರ್ಯನ್ ಅವರ ಕುಟುಂಬದ ಜೊತೆ ಕುಣಿದು ಕುಪ್ಪಳಿಸಿದ್ದರು.
ಇನ್ನು ಕೆಲ ದಿನಗಳ ಹಿಂದೆ ನಿಮ್ಮ ಮನೆಗೆ ಬರುವ ಸೊಸೆ ಹೇಗಿರಬೇಕು, ಅವರ ಮೇಲೆ ನಿಮಗೆ ಇರುವ ನಿರೀಕ್ಷೆಗಳೇನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಕಾರ್ತಿಕ್ ಆರ್ಯನ್ ಅವರ ತಾಯಿ ಮಾಲಾ ತಿವಾರಿ ನನ್ನ ಮಗನ ಕೈ ಹಿಡಿಯುವ ಹುಡುಗಿ ಒಳ್ಳೆಯ ಡಾಕ್ಟರ್ ಆಗಿರಬೇಕು ಎಂದು ಹೇಳಿದ್ದರು. ಇದು ನನ್ನ ಬೇಡಿಕೆ ಮಾತ್ರವಲ್ಲ ನಮ್ಮ ಇಡೀ ಕುಟುಂಬದ ಬೇಡಿಕೆ ಕೂಡ ಹೌದು ಎಂದು ಹೇಳಿದ್ದರು.
ಇನ್ನು ಬಹುತೇಕರಿಗೆ ಗೊತ್ತಿರುವಂತೆ ಶ್ರೀಲೀಲಾ ಕೇವಲ ನಾಯಕಿ ಮಾತ್ರ ಅಲ್ಲ. ಆಕ್ಟಿಂಗ್ ಜೊತೆಯಲ್ಲಿ ಶ್ರೀಲೀಲಾ ಎಂಬಿಬಿಎಸ್ ವ್ಯಾಸಂಗವನ್ನು ಕೂಡ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ನಡುವೆ ಪ್ರೇಮಾಂಕುರವಾಗಿರುವುದು ನೂರಕ್ಕೆ ನೂರು ಸತ್ಯ ಎನ್ನುವ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಲೇ ಇದೆ. ಹೀಗಿರುವಾಗ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಈಗ ಮುಂಬೈನಲ್ಲಿ ಮತ್ತೊಮ್ಮೆ ಸಿಕ್ಕಿ ಬಿದ್ದಿದ್ದಾರೆ.
ಇನ್ನುಳಿದಂತೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಜೊತೆಯಾಗಿ ಅಭಿನಯಿಸಿರುವ ಚಿತ್ರವನ್ನು ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಅನುರಾಗ್ ಬಸು ನಿರ್ದೇಶನ ಮಾಡಿದ್ದಾರೆ. ಸದ್ಯ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲವಾದರೂ ಅನೇಕರು ಆಶಿಕಿ 3 ಎಂದು ನಾಮಕರಣ ಮಾಡಿದರೆ ಸೂಕ್ತವೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಈ ಚಿತ್ರ ಹೊರತು ಪಡಿಸಿದರೆ ಶ್ರೀಲೀಲಾ ತೆಲುಗಿನಲ್ಲಿ ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಮತ್ತು ಶಿವಕಾರ್ತಿಕೆಯನ್ ಅಭಿನಯದ ಪರಾಶಕ್ತಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಮುಂಬೈನ ರೆಸ್ಟೋರೆಂಟ್‌ನಲ್ಲಿ ಜಂಟಿಯಾಗಿ ಊಟ ಮಾಡಿರುವ ಇಬ್ಬರು ಆ ನಂತರ ಒಂಟಿಯಾಗಿ ಬಂದು ಕ್ಯಾಮರಾಗಳಿಗೆ ಪೋಸ್ ನೀಡಿದ್ದಾರೆ. ಸದ್ಯ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಅವರ ಈ ಡಿನ್ನರ್ ಡೇಟ್‌ನ ಫೋಟೊ ಮತ್ತು ವಿಡಿಯೋಗಳು ವೈರಲ್ ಆಗಿದ್ದು ಅನೇಕ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿವೆ. ಆ ಪೈಕಿ ಹಲವರು ಈ ಜೋಡಿಯನ್ನು ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ. ಕೇವಲ ರೀಲ್‌ನಲ್ಲಿ ಮಾತ್ರವಲ್ಲ ರಿಯಲ್ ಲೈಫ್‌ನಲ್ಲಿ ಕೂಡ ಇಬ್ಬರು ಒಂದಾಗಲಿ ಎಂದು ಆಶಿಸಿದ್ದಾರೆ.


Click it and Unblock the Notifications











