Deepfake: ರಶ್ಮಿಕಾ, ಆಲಿಯಾ ಬಳಿಕ ಪ್ರಿಯಾಂಕ ಚೋಪ್ರಾ: ಮುಖ ಅಲ್ಲ ಧ್ವನಿ ಬದಲಿಸಿ ಶಾಕ್ ಕೊಟ್ಟ ಕಿಡಿಗೇಡಿಗಳು
ಕೃತಕ ಬುದ್ದಿಮತ್ತೆಯ(AI) ಸಹಾಯದಿಂದ ಯಾರದ್ದೋ ದೇಹಕ್ಕೆ ಯಾರದ್ದೋ ಮುಖ ಅಂಟಿಸಿ ಫೇಕ್ ವಿಡಿಯೋ, ಫೋಟೊ ವೈರಲ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸಾಕಷ್ಟು ನಟಿಯರು ಡೀಪ್‌ಫೇಕ್ ವಿಡಿಯೋಗಳಿಂದ ಸಂಕಷ್ಟ ಎದುರಿಸಿದ್ದರು. ನಟಿ ರಶ್ಮಿಕಾ ಮಂದಣ್ಣ ಫೇಕ್ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿತ್ತು.
ರಶ್ಮಿಕಾ ಬಳಿಕ ಕತ್ರೀಕಾ ಕೈಫ್, ಕಾಜೋಲ್, ಆಲಿಯಾ ಭಟ್‌ಗೂ ಇಂತದ್ದೇ ಕಹಿ ಅನುಭವ ಎದುರಾಗಿತ್ತು. ಆದರೆ ರಶ್ಮಿಕಾ ಬಿಟ್ಟು ಬೇರೆ ಯಾರು ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇನ್ನು ಕಿರಿಕ್ ಬೆಡಗಿಗೆ ಅಮಿತಾಬ್ ಬಚ್ಚನ್ ಸೇರಿದಂತೆ ಸಾಕಷ್ಟು ನಟ-ನಟಿಯರು ಬೆಂಬಲವಾಗಿ ನಿಂತಿದ್ದರು. ಇದೀಗ ಪ್ರಿಯಾಂಕಾ ಚೋಪ್ರಾಗೂ ಡೀಪ್‌ಫೇಕ್ ಪ್ರಾಬ್ಲಂ ಶುರುವಾಗಿದೆ. ಈ ಬಾರಿ ಹಸಿಬಿಸಿ ವಿಡಿಯೋಗೆ ನಟಿಯ ಮುಖ ಅಂಟಿಸಿಲ್ಲ. ಬದಲಿಗೆ ಆಕೆಯ ಹಳೆಯ ವಿಡಿಯೋ ಧ್ವನಿ ಬದಲಿಸಿ ಶಾಕ್ ಕೊಟ್ಟಿದ್ದಾರೆ.

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿಮಾಗಳಿಂದ ದೂರಾಗಿದ್ದಾರೆ. ಪತಿ ಹಾಗೂ ಮಗಳ ಜೊತೆ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಹಾಗೊಮ್ಮ ಈಗೊಮ್ಮೆ ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆಗೆ ಡೀಪ್‌ಫೇಕ್ ಶಾಕ್ ಎದುರಾಗಿದೆ.
ಪಿಗ್ಗಿಗೆ ಸಂಬಂಧಿಸಿದ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಆದರೆ, ಈ ಬಾರಿ ಕಿಡಿಕೇಡಿಗಳು ನಟಿಯ ಮುಖ ಬದಲಿಸದೇ ಧ್ವನಿ ಬದಲಿಸಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಮಾತನಾಡಿದ್ದ ವಿಡಿಯೋ ಇದೀಗ ವೈರಲ್ ಆಗಿದ್ದು, ಆಕೆಯ ಧ್ವನಿ ಬದಲಾಗಿದೆ. ಆ ವಿಡಿಯೋದಲ್ಲಿ ಆಕೆ ನಕಲಿ ಬ್ರ್ಯಾಂಡ್ ಪ್ರಚಾರ ಮಾಡುತ್ತಿರುವಂತೆ ಕ್ರಿಯೇಟ್ ಮಾಡಲಾಗಿತ್ತು. ಆ ಬ್ರ್ಯಾಂಡ್‌ನಿಂದಾಗಿ 2023ರಲ್ಲಿ ತನ್ನ ವಾರ್ಷಿಕ ಆದಾಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಎಲ್ಲರೂ ಅದನ್ನು ಬಳಸಿ ಎಂದು ಪ್ರಿಯಾಂಕ ಹೇಳಿದಂತೆ ವಿಡಿಯೋ ಕ್ರಿಯೇಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಗರಂ ಆಗಿದ್ದಾರೆ. ಹಿಂಗೂ ಡೀಪ್‌ಫೇಕ್ ವಿಡಿಯೋ ಸೃಷ್ಟಿಸುತ್ತಿದ್ದಾರಾ? ಎಂದು ಅಚ್ಚರಿಗೊಂಡಿದ್ದಾರೆ.
ಮೊದಲಿಗೆ ಜಾರಾ ಪಟೇಲ್ ಎನ್ನುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ತುಂಡು ಬಟ್ಟೆಯಲ್ಲಿ ಲಿಫ್ಟ್ ಒಳಗೆ ಪ್ರವೇಶಿಸುವ ವಿಡಿಯೋಗೆ ರಶ್ಮಿಕಾ ಮುಖ ಮಾರ್ಪ್ ಮಾಡಿ ವೈರಲ್ ಮಾಡಿದ್ದರು. ಬಳಿಕ ರೋಸಿ ಬ್ರೀನ್ ಎನ್ನುವ ಮತ್ತೊಬ್ಬ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಬಟ್ಟೆ ಬದಲಿಸುವ ವಿಡಿಯೋಗೆ ನಟಿ ಕಾಜೋಲ್ ಮುಖ ಅಂಟಿಸಿ ತೇಲಿ ಬಿಟ್ಟಿದ್ದರು. ಇನ್ನು ಯುವತಿಯೊಬ್ಬಳ ಹಸಿಬಿಸಿ ವಿಡಿಯೋಗೆ ಆಲಿಯಾ ಭಟ್ ಮುಖ ಅಂಟಿಸಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದರು. ಇದೀಗ ಪ್ರಿಯಾಂಕ ಚೋಪ್ರಾ ಧ್ವನಿ ಬದಲಿಸಿದ್ದಾರೆ. ಇದೆಲ್ಲಾ ನೋಡುತ್ತಿದ್ದರೆ ಮುಂದೆ ಈ ಡೀಪ್‌ಫೇಕ್ ಅನ್ನೋದು ಯಾವೆಲ್ಲಾ ಸ್ವರೂಪ ಪಡೆದುಕೊಳ್ಳಬಹುದು ಎಂದು ಆತಂಕ ಹುಟ್ಟಿಸುತ್ತದೆ.
ಮತ್ತೊಂದೆಡೆ, ಡೀಪ್‌ಫೇಕ್ ವೀಡಿಯೊಗಳ ಬಗ್ಗೆ ಕೇಂದ್ರ ಐಟಿ ಇಲಾಖೆ ತೀವ್ರವಾಗಿ ಪ್ರತಿಕ್ರಿಯಿಸಿದೆ. ಡೀಪ್‌ಫೇಕ್ ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅದು ಹೇಳಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಕಂಪನಿಗಳಿಗೂ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ರಶ್ಮಿಕಾ ಡೀಪ್‌ಫೇಕ್ ವಿಡಿಯೋ ವಿಚಾರದಲ್ಲಿ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಶ್ಮಿಕಾ ವಿಡಿಯೋ ಬಂದಾಗಲೇ ಅಮಿತಾಬ್ ಬಚ್ಚನ್, ರಕ್ಷಿತ್ ಶೆಟ್ಟಿ, ವಿಜಯ್ ದೇವರಕೊಂಡ, ನಾಗಚೈತನ್ಯಾ ಸೇರಿದಂತೆ ಹಲವರು ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಆಪ್, ಸಾಫ್ಟ್‌ವೇರ್ ಬಳಸಲು ಸೂಕ್ತ ನಿಯಮಗಳನ್ನು ರೂಪಿಸಬೇಕು. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.


Click it and Unblock the Notifications











