ಚಿತ್ರತಂಡಗಳ ಜೊತೆ ಕ್ಯಾತೆ, 8 ಗಂಟೆಯ ಷರತ್ತು ; ಮೌನ ಮುರಿದ ದೀಪಿಕಾ- ಆದರೆ ಆ ಸೂಪರ್ ಸ್ಟಾರ್‌ಗಳು ಯಾರು?
ಸಾಮಾನ್ಯವಾಗಿ ಮದುವೆಯಾದ ನಂತರ ನಾಯಕಿಯರು ಅವಕಾಶಗಳ ಕೊರತೆಯನ್ನು ಎದುರಿಸುತ್ತಾರೆ. ಇನ್ನು ಮಗು ಆದರೆ ಮುಗೀತು. ಸ್ಟಾರ್ ಹೀರೋಯಿನ್‌ಗಳ ಪಾಲಿಗೆ ಚಿತ್ರರಂಗದ ಬಾಗಿಲು ಬಹುತೇಕ ಮುಚ್ಚಿದಂತೆಯೇ. ಪೋಷಕ ಪಾತ್ರಗಳಿಗೆ ಆ ನಂತರ ಇವರನ್ನು ಸೀಮಿತಗೊಳಿಸಲಾಗುತ್ತೆ. ಆದರೆ, ಇದಕ್ಕೆ ತದ್ವಿರುದ್ದ ಎನ್ನುವಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮದುವೆಯಾದ ನಂತರ ಕೂಡ ತಮ್ಮ ಬೇಡಿಕೆಯನ್ನು ಹಾಗೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗ್ತಾರೆ.
ಮಗು ಆದ ಮೇಲೆ ಕೂಡ ನಾಯಕಿಯ ಪಾತ್ರಗಳಲ್ಲಿಯೇ ಮುಂದುವರೆಯುತ್ತಾರೆ. ಉದಾಹರಣೆಗೆ ದೀಪಿಕಾ ಪಡುಕೋಣೆ. ಹೌದು, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಅನೇಕರು ಚಿತ್ರರಂಗಕ್ಕೆ ದೀಪಿಕಾ ಪಡುಕೋಣೆ ಗುಡ್ ಬೈ ಹೇಳ್ತಾರೆ ಎಂದು ಅಂದುಕೊಂಡಿದ್ದರು.

ಆದರೆ. ಡಿಪ್ಪಿ ಮಾತ್ರ ಮಗುವಿಗೆ ಜನ್ಮ ನೀಡಿದ ನಾಲ್ಕೈದು ತಿಂಗಳಿನಲ್ಲಿಯೇ ಮರಳಿ ಚಿತ್ರರಂಗಕ್ಕೆ ಬಂದರು. ಹಲವು ಕಥೆಗಳನ್ನು ಕೇಳಿದರು. ಹೀಗೆ ಕೇಳಿ ಒಪ್ಪಿಕೊಂಡ ಚಿತ್ರಗಳಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪ್ರಭಾಸ್ ಅಭಿನಯದ ''ಸ್ಪಿರಿಟ್'' ಇತ್ತು. ''ಕಲ್ಕಿ 2'' ಚಿತ್ರದಲ್ಲಿ ಮುಂದುವರೆಯುವ ಅವಕಾಶ ಕೂಡ ದೀಪಿಕಾ ಬಳಿ ಇತ್ತು.
ಆದರೆ, ಇದಕ್ಕೆ ಇವರ ತಾಯ್ತನದ ಸಂಭ್ರಮ ಅಡ್ಡಿ ಬಂತು. ಮಗುವನ್ನು ನೋಡಿಕೊಳ್ಳುವ ಜವಾಬ್ಧಾರಿಯಿಂದ ದೀಪಿಕಾ ಪಡುಕೋಣೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವ ಷರತ್ತನ್ನು ಈಗ ಹಾಕುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಿತ್ತು. ನೋಡ..ನೋಡುತ್ತಾ.. ಈ ಕುರಿತು ಚರ್ಚೆ ಕೂಡ ಶುರುವಾಯ್ತು.
ಇದಲ್ಲದೇ ಮತ್ತೂ ಕೆಲವರು 08 ಗಂಟೆ ಷರತ್ತು ಒಪ್ಪುವುದಲ್ಲದೇ ಅವರಿಗೆ ದುಬಾರಿ ಸಂಭಾವನೆಯನ್ನು ಕೂಡ ಕೊಡಬೇಕು ಎಂದು ಮಾತನಾಡಲು ಶುರು ಮಾಡಿದರು. ಇಷ್ಟೇ ಅಲ್ಲ ಅವರ ಜೊತೆ ಬರುವ 25 ಸಿಬ್ಬಂದಿಗಳ ಖರ್ಚು ವೆಚ್ಚ ಕೂಡ ನಿರ್ಮಾಪಕರೇ ಭರಿಸಬೇಕು ಎಂದು ಸುದ್ದಿ ಹಬ್ಬಿಸಿದರು.
ಇದೆಲ್ಲದರಿಂದ ಸೋಶಿಯಲ್ ಮೀಡಿಯಾದಲ್ಲಿ ಪರ -ವಿರೋಧದ ಚರ್ಚೆ ಶುರುವಾಯ್ತು. ಕೆಲವರು ದೀಪಿಕಾ ಅವರನ್ನು ಬೆಂಬಲಿಸಿದರು. ಇನ್ನೂ ಕೆಲವರು ಕಾಲೆಳೆದರು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಮೌನ ಮುರಿದಿದ್ದಾರೆ.

''CNBC-TV18''ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ದೀಪಿಕಾ ಪಡುಕೋಣೆ, ನನಗೆ ಯಾರ ಹೆಸರನ್ನು ಹೇಳಲು ಇಷ್ಟ ಇಲ್ಲ. ಈ ವಿಚಾರವನ್ನು ಇನ್ನೂ ದೊಡ್ಡದು ಮಾಡಲು ಕೂಡ ಮನಸ್ಸಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಕೇವಲ ನಾನು ಮಾತ್ರ ಅಲ್ಲ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಸ್ಥಾನದಲ್ಲಿರುವ ನಟರೇ 8 ಗಂಟೆಗಳ ನಂತರ ಕೆಲಸ ಮಾಡುವುದಿಲ್ಲ ಎಂದು ಹೇಳಿರುವ ದೀಪಿಕಾ, ಅವರು ಕೇವಲ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕೆಲಸ ಮಾಡುತ್ತಾರೆ. ಆದರೆ ಅವರನ್ನು ಯಾರು ಪ್ರಶ್ನೆ ಮಾಡುವುದಿಲ್ಲ. ಅವರ ವಿಚಾರ ಯಾವತ್ತು ಸುದ್ದಿಯಾಗುವುದಿಲ್ಲ ಎಂದು ಹೇಳಿದ್ದರೆ. ಮಹಿಳೆಯರು ಅಥವಾ ತಾಯಂದಿರು 8 ಗಂಟೆಯ ಕೆಲಸಕ್ಕೆ ಬೇಡಿಕೆ ಇಟ್ಟರೆ ಅದು ದೊಡ್ಡ ಸುದ್ದಿಯಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ನಾನು ಹಲವು ಸಮಸ್ಯೆಗಳನ್ನು ಎದುರಿಸಿಕೊಂಡೇ ಬಂದಿದ್ದೇನೆ ಎಂದು ಹೇಳಿರುವ ದೀಪಿಕಾ, ಸಂಬಳದ ವಿಚಾರದಲ್ಲಿ ಕೂಡ ತಾರತಮ್ಯ ಮಾಡುತ್ತಾರೆ. ಆಗ ನಾನು ಮೌನವಾಗಿಯೇ ಅದಕ್ಕೆ ವಿರೋಧ ಮಾಡಿದ್ದೇನೆ.. ಹೋರಾಡಿದ್ದೇನೆ ಎಂದು ಹೇಳಿರುವ ದೀಪಿಕಾ ಕೆಲ ಒಮ್ಮೆ ಕೆಲ ವಿಚಾರಗಳು ಸಾರ್ವಜನಿಕವಾಗುತ್ತವೆ. ನಾನು ಅವುಗಳನ್ನು ಶಾಂತವಾಗಿ ಮತ್ತು ಘನತೆಯಿಂದ ಎದುರಿಸುವುದರಲ್ಲಿ ನಂಬಿಕೆ ಇಡುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ದೀಪಿಕಾ ಹೇಳಿದ ಈ ಮಾತುಗಳ ಬಗ್ಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಇನ್ನೂ ಕೆಲವರಲ್ಲಿ ದೀಪಿಕಾ ಹೇಳಿದ ಆ ಸೂಪರ್ ಸ್ಟಾರ್‌ಗಳು ಯಾರು ? ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಅವರ ಬಗ್ಗೆ ದೀಪಿಕಾ ಮಾತನಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೂ ಕೆಲವರು ವಾರಾಂತ್ಯದಲ್ಲಿ ಅಮಿತಾಬ್ ಬಚ್ಚನ್ ಕೆಲಸ ಮಾಡಲ್ಲ ಎಂದು ಚರ್ಚೆ ಮಾಡುತ್ತಿದ್ದಾರೆ.


Click it and Unblock the Notifications











