ಬೆಂಗಳೂರಿನಲ್ಲಿ ರಣ್ವೀರ್ - ದೀಪಿಕಾ ಆರತಕ್ಷತೆ : ಕನ್ನಡದ ಯಾವ ಸ್ಟಾರ್ ಗಳು ಭಾಗಿ?
Recommended Video

ಬಾಲಿವುಡ್ ನ ನವ ಜೋಡಿ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರ ಆರತಕ್ಷತೆ ಕಾರ್ಯಕ್ರಮ ಇಂದು ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ದಿಗ್ಗಜರು ಕೂಡ ಭಾಗಿಯಾಗಲಿದ್ದಾರೆ.
ರಣ್ವೀರ್ ಹಾಗೂ ದೀಪಿಕಾ ವಿವಾಹ ಕಳೆದ ಗುರುವಾರದಂದು ಇಟಲಿಯ ಲೇಕ್ ಕೋಮೊದಲ್ಲಿ ನಡೆದಿತ್ತು. ಅದರ ನಂತರ ಇಂದು ಬೆಂಗಳೂರಿನಲ್ಲಿ ಒಂದು ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಿನ್ನೆ ಬೆಳಗ್ಗೆ ಈ ಜೋಡಿ ಬೆಂಗಳೂರಿಗೆ ಬಂದಿದ್ದು, ಆರತಕ್ಷತೆಯ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ.
ಎರಡು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಮೊದಲ ಕಾರ್ಯಕ್ರಮ ದೀಪಿಕಾ ತವರೂರು ಆದ ಬೆಂಗಳೂರಿನಲ್ಲಿ ನಡೆಯಲಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಅನೇಕ ಸ್ಟಾರ್ ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಂದೆ ಓದಿ...

ಲೀಲಾ ಪ್ಯಾಲೇಸ್ ನಲ್ಲಿ ಕಾರ್ಯಕ್ರಮ
ಇಂದು ಸಂಜೆ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ದೀಪಿಕಾ - ರಣ್ವೀರ್ ಅವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ದೀಪಿಕಾಗೆ ಲೀಲಾ ಪ್ಯಾಲೇಸ್ ಬಹಳ ಇಷ್ಟ ಆಗುವ ಹೋಟೆಲ್ ಅಂತೆ. ಅಲ್ಲಿ ಸಿಗುವ ಆಹಾರ ಅವರ ಫೇವರೇಟ್ ಅಂತೆ. ಅದೇ ಕಾರಣಕ್ಕೆ ತಮ್ಮ ಆರತಕ್ಷತೆ ಕೂಡ ಅಲ್ಲಿಯೇ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡದ ನಟರಿಗೆ ಆಮಂತ್ರಣ
ಸ್ಯಾಂಡಲ್ ವುಡ್ ನಟರಾದ ಅಂಬರೀಶ್, ಉಪೇಂದ್ರ, ಸುದೀಪ್, ಯಶ್, ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕರಾದ ಇಂದ್ರಜೀತ್ ಲಂಕೇಶ್ ಅವರಿಗೆ ದೀಪಿಕಾ - ರಣ್ವೀರ್ ಆರತಕ್ಷತೆಯ ಆಮಂತ್ರಣ ತಲುಪಿದ್ದು, ಇವರೆಲ್ಲ ನವ ಜೋಡಿಯನ್ನು ಹರಸಲು ಬರುವ ಸಾಧ್ಯತೆ ಇದೆ.

ದಕ್ಷಿಣ ಭಾರತದ ದಿಗ್ಗಜರು
ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ಪ್ರಮುಖ ನಟ, ನಟಿ, ನಿರ್ದೇಶಕ, ನಿರ್ಮಾಪಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ದೀಪಿಕಾ ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ ನಟಿಸಿದ್ದು, ಇಲ್ಲಿನ ಚಿತ್ರರಂಗದಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ.

ಕ್ರೀಡಾ ತಾರೆಯರು ಭಾಗಿ
ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಭಾರತದ ಪ್ರಮುಖ ಕ್ರೀಡಾಪಟುವಿನಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಭಾರತ ಕ್ರಿಕೆಟ್ ತಂಡದ ಆಟಗಾರರು ಆರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನವರೇ ಆದ ರಾಹುಲ್ ಡ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ಕೆಲವು ಬ್ಯಾಡ್ಮಿಂಟನ್ ಆಟಗಾರರು ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.

ಮುಂಬೈ ನಲ್ಲಿ ಮತ್ತೊಂದು ಆರತಕ್ಷತೆ
ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರ ಮತ್ತೊಂದು ಆರತಕ್ಷತೆ ಕಾರ್ಯಕ್ರಮ ಮುಂಬೈ ನಲ್ಲಿ ನಡೆಯಲಿದೆ. ಇದೇ ತಿಂಗಳ 28ರಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಾಲಿವುಡ್ ಚಿತ್ರರಂಗದ ಸಾಕಷ್ಟು ಕಲಾವಿದರು, ಚಿತ್ರರಂಗ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.


Click it and Unblock the Notifications











