ಟ್ವಿಟ್ಟರ್-ಇನ್ಸ್ಟಾಗ್ರಾಮ್ ನ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿ ಆಡಿಯೋ ಸಂದೇಶ ರವಾನಿಸಿದ ದೀಪಿಕಾ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊಸ ವರ್ಷದ ಮೊದಲ ದಿನವೇ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿದ್ದ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡುವ ಮೂಲಕ ದೀಪಿಕಾ ಅಚ್ಚರಿ ಮೂಡಿಸಿದ್ದರು.
ದೀಪಿಕಾ ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಆದರೆ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ. ಡಿಸೆಂಬರ್ 31ರ ರಾತ್ರಿ ಎಲ್ಲಾ ಪೋಸ್ಟ್ ಗಳನ್ನು ದೀಪಿಕಾ ಡಿಲೀಟ್ ಮಾಡಿದ್ದಾರೆ. ದೀಪಿಕಾ ಅವರ ಈ ನಡೆ ಅಭಿಮಾನಿಗಳಿಗೆ ಮಾತ್ರವಲ್ಲದೆ ಬಾಲಿವುಡ್ ಮಂದಿಗೂ ಅಚ್ಚರಿ ಮೂಡಿಸಿದೆ. ಎಲ್ಲಾ ಪೋಸ್ಟ್ ಡಿಲೀಟ್ ಮಾಡಿದ ಬಳಿಕ ದೀಪಿಕಾ ಆಡಿಯೋ ಸಂದೇಶವನ್ನು ರವಾನಿಸಿದ್ದಾರೆ. ದೀಪಿಕಾ ಆಡಿಯೋದಲ್ಲಿ ಏನಿದೆ? ಮುಂದೆ ಓದಿ..

ಆಡಿಯೋ ಸಂದೇಶ ರವಾನಿಸಿದ ದೀಪಿಕಾ
ದೀಪಿಕಾ ಪೋಸ್ಟ್ ಡಿಲೀಟ್ ಆಗುತ್ತಿದ್ದಂತೆ ಖಾತೆ ಹ್ಯಾಕ್ ಆಗಿದೆಯಾ ಎಂದು ಎಲ್ಲರೂ ಭಾವಿಸಿದ್ದರು. ಬಳಿಕ ದೀಪಿಕಾ ಆಡಿಯೋ ಡೈರಿ ವೇದಿಕೆ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಆಡಿಯೋ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ದೀಪಿಕಾ ಮೊದಲ ಪೋಸ್ಟ್ ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

2020ಕ್ಕೆ ಧನ್ಯವಾದ ತಿಳಿಸಿದ ದೀಪಿಕಾ
ಈ ಆಡಿಯೋದಲ್ಲಿ ದೀಪಿಕಾ, 'ಎಲ್ಲರಿಗೂ ನಮಸ್ಕಾರ, ನನ್ನ ಆಡಿಯೋ ಡೈರಿಗೆ ಸ್ವಾಗತ. ಇದು ನನ್ನ ಯೋಚನೆ ಮತ್ತು ಭಾವನೆಗಳನ್ನು ಹಂಚಿಕೊಳ್ಳುವ ವೇದಿಕೆ. 2020ನೇ ವರ್ಷ ಎಲ್ಲರಿಗೂ ಅನಿಶ್ಚಿತತೆ ಕಾಡಿತ್ತು. ಆದರೆ ನಾನು ಧನ್ಯವಾದ ಹೇಳುತ್ತೇನೆ. 2021ಕ್ಕೆ ನನಗೂ ಹಾಗೂ ಎಲ್ಲರಿಗೂ ಉತ್ತಮ ಆರೋಗ್ಯ ಹಾಗೂ ನೆಮ್ಮದಿ ಸಿಗಲಿ ಎಂದು ಆಶಿಸುತ್ತೇನೆ. ಹೊಸ ವರ್ಷದ ಶುಭಾಶಯಗಳು' ಎಂದು ಹೇಳಿದ್ದಾರೆ.

ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ
ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರೀಯರಾಗಿದ್ದರು. ಇನ್ಸ್ಟಾಗ್ರಾಮ್ ನಲ್ಲಿ 52.5 ಮಿಲಿಯಲ್ ಫಾಲೋವರ್ಸ್ ಹೊಂದುವ ಮೂಲಕ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ನಟಿ ಎನ್ನುವ ಖ್ಯಾತಿ ಸಹ ಗಳಿಸಿದ್ದರು. ಟ್ವಿಟ್ಟರ್ ನಲ್ಲಿ 27.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದ ದೀಪಿಕಾ ದಿಢೀರನೆ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿರುವುದು ನಿರಾಸೆ ಮೂಡಿಸಿದೆ.

ರಾಜಸ್ಥಾನದಲ್ಲಿ ಹೊಸ ವರ್ಷ ಆಚರಣೆ
ದೀಪಿಕಾ ಸದ್ಯ ಪತಿ ರಣ್ವೀರ್ ಸಿಂಗ್ ಜೊತೆ ಜೈಪುರದಲ್ಲಿ ತಂಗಿದ್ದಾರೆ. ಒಂದು ವಾರ ಮುಂಚಿತವಾಗಿಯೇ ರಣ್ವೀರ್ ಮತ್ತು ದೀಪಿಕಾ ರಾಜಸ್ಥಾನಕ್ಕೆ ತೆರಳಿದ್ದಾರೆ. ಅಲ್ಲೇ ಇಬ್ಬರೂ 2021ಅನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.
Recommended Video

ದೀಪಿಕಾ ಸಿನಿಮಾಗಳು
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ದೀಪಿಕಾ ಸದ್ಯ ಶಕುನ್ ಭಾತ್ರ ನಿರ್ದೇಶನದ ಇನ್ನು ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅನನ್ಯಾ ಪಾಂಡೆ ಮತ್ತು ಸಿದ್ಧಾಂತ್ ಚತುರ್ವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಶಾರುಖ್ ಖಾನ್ ನಟನೆಯ ಪಠಾಣ್ ಮತ್ತು ಪ್ರಭಾಸ್ ಗೆ ನಾಯಕಿಯಾಗಿ ತೆಲುಗು ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.


Click it and Unblock the Notifications











