ನ್ಯಾಯಾಧೀಶರ ಅವಹೇಳನ ಪ್ರಕರಣ: ಏ.10ಕ್ಕೆ ಖುದ್ದು ಹಾಜರಾಗುವಂತೆ ಅಗ್ನಿಹೋತ್ರಿಗೆ ದೆಹಲಿ ಹೈಕೋರ್ಟ್ ಸೂಚನೆ
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಜಾಮೀನು ನೀಡಿದ್ದ ನ್ಯಾ. ಎಸ್ ಮುರಳೀಧರ್ ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ಫಿಲ್ಮ್ ಮೇಕರ್ ವಿವೇಕ್ ಅಗ್ನಿಹೋತ್ರಿ ಟೀಕಿಸಿದ್ದರು. ನ್ಯಾಯಾಧೀಶರ ಅವಹೇಳನ ಪ್ರಕರಣ ಸಂಬಂಧ ಏಪ್ರಿಲ್ 10 ರಂದು ವೈಯಕ್ತಿಕವಾಗಿ ಕೋರ್ಟ್‌ಗೆ ಹಾಜರಾಗುವಂತೆ ದೆಹಲಿ ಹೈಕೋರ್ಟ್ ಅಗ್ನಿಹೋತ್ರಿ ಅವರಿಗೆ ಸೂಚಿಸಿದೆ.
2018ರಲ್ಲಿ ವಿವೇಕ್ ಈ ಬಗ್ಗೆ ಟ್ವೀಟ್ ಮಾಡಿದ್ದರು. ಈ ಸಂಬಂಧ ಅಗ್ನಿಹೋತ್ರಿ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿತ್ತು. ಡಿಸೆಂಬರ್ 6ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ವಿಭಾಗೀಯ ಪೀಠದ ಮುಂದೆ ವಿವೇಕ್ ಅಗ್ನಿಹೋತ್ರಿ ಪರ ವಕೀಲರು ತಮ್ಮ ಕಕ್ಷಿದಾರರು ಕ್ಷಮೆಯಾಚಿಸಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದರು. ಜೊತೆಗೆ ತಮ್ಮ ಕಕ್ಷಿದಾರರು ಟ್ವೀಟ್‌ಗಳನ್ನು ಡಿಲೀಟ್ ಮಾಡಿರುವುದಾಗಿ ಹೇಳಿದ್ದರು. ಈ ವೇಳೆ ಮಾರ್ಚ್ 16, 2023 ರಂದು(ಇಂದು) ವಿಚಾರಣೆಗೆ ವಿವೇಕ್ ಅಗ್ನಿಹೋತ್ರಿ ನ್ಯಾಯಾಲಯದ ಮುಂದೆ ಖುದ್ದು ಹಾಜರಿರುವಂತೆ ಪೀಠ ಸೂಚಿಸಿತ್ತು.

ಅಗ್ನಿಹೋತ್ರಿಯನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಡಿಸೆಂಬರ್ 6 ರ ಆದೇಶವನ್ನು ಪೀಠವು ಗಮನಿಸಿತು. ಡಿಸೆಂಬರ್ 6 ರಂದು ನಡೆದ ಕೊನೆಯ ವಿಚಾರಣೆಯಲ್ಲಿ, ಅಗ್ನಿಹೋತ್ರಿ ಅವರು 2018 ರಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ಗಳಿಗೆ ಬೇಷರತ್ ಕ್ಷಮೆಯಾಚಿಸಿದರು. ಮುಂದಿನ ವಿಚಾರಣೆಗೆ ಹಾಜರಾಗುವಂತೆ ಅಗ್ನಿಹೋತ್ರಿ ಅವರಿಗೆ ಪೀಠ ಹೇಳಿತ್ತು. ಅಗ್ನಿಹೋತ್ರಿ ಜ್ವರದಿಂದ ಬಳಲುತ್ತಿದ್ದು, ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅಗ್ನಿಹೋತ್ರಿ ಪರ ವಕೀಲರು ತಿಳಿಸಿದ್ದಾರೆ. ನಂತರ, ಮುಂದಿನ ದಿನಾಂಕದಂದು ದೈಹಿಕವಾಗಿ ಹಾಜರಾಗುವಂತೆ ಪೀಠವು ಅವರಿಗೆ ಸೂಚಿಸಿದೆ.
ಪೀಠವು, "ವಿವೇಕ್ ಅಗ್ನಿಹೋತ್ರಿ ಕಾಮೆಂಟ್ ಮಾಡಿರುವ ಕಾರಣ ನಾವು ಅವರನ್ನು ಹಾಜರಾಗಲು ಕೇಳುತ್ತಿದ್ದೇವೆ. ಅವರು ವೈಯಕ್ತಿಕವಾಗಿ ಪಶ್ಚಾತ್ತಾಪ ವ್ಯಕ್ತಪಡಿಸಲು ಏನಾದರೂ ತೊಂದರೆ ಇದೆಯೇ? ಪಶ್ಚಾತ್ತಾಪವನ್ನು ಯಾವಾಗಲೂ ಅಫಿಡವಿಟ್ ಮೂಲಕ ವ್ಯಕ್ತಪಡಿಸಲು ಸಾಧ್ಯವಿಲ್ಲ" ಹೇಳಿದೆ. ಇನ್ನು ಅಗ್ನಿಹೋತ್ರಿ ಮಾತ್ರವಲ್ಲ ಆರೆಸ್ಸೆಸ್ ನಾಯಕ ಗುರುಮೂರ್ತಿ ಕೂಡ ಇದೇ ರೀತಿ ಹೇಳಿಕೆ ನೀಡಿದ್ದರು. ಅವರು ಕ್ಷಮೆ ಯಾಚಿಸಿದ ನಂತರ ಪ್ರಕರಣ ಕೈ ಬಿಡಲಾಗಿತ್ತು.

ಬಾಲಿವುಡ್ ಸಿನಿಮಾ ನಿರ್ಮಾಪಕ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಳೆದ ವರ್ಷ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಿಂದ ಗಮನ ಸೆಳೆದರು. ಕಳೆದ ವರ್ಷ ಮಾರ್ಚ್ 11ಕ್ಕೆ ಬಿಡುಗಡೆಯಾಗಿದ್ದ ಸಿನಿಮಾ 300 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಶ್ ಶೇಕ್ ಮಾಡಿತ್ತು. ಸಿನಿಮಾ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ನಜ್ಯದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಇದೀಗ ಅಗ್ನಿಹೋತ್ರಿ 'ವ್ಯಾಕ್ಸಿನ್ ವಾರ್' ಎನ್ನುವ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟಿ ಸಪ್ತಮಿ ಗೌಡ ಕೂಡ ನಟಿಸ್ತಿದ್ದಾರೆ.


Click it and Unblock the Notifications











