ಆರಾಧ್ಯ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಯೂಟ್ಯೂಬ್ ಚಾನಲ್‌ಗಳಿಗೆ ನಿರ್ಬಂಧ: ವಿಡಿಯೋ ತೆಗೆಯಲು ದೆಹಲಿ ಹೈಕೋರ್ಟ್ ಸೂಚನೆ
ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ಯೂಟ್ಯೂಬ್ ಚಾನಲ್‌ಗಳ ವಿರುದ್ಧ ನಟ ಅಮಿತಾಬ್ ಬಚ್ಚನ್ ಮೊಮ್ಮಗಳು ಆರಾಧ್ಯ ಬಚ್ಚನ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಅಭಿಷೇಕ್ ಬಚ್ಚನ್ - ಐಶ್ವರ್ಯ ರೈ ಮಗಳು ದೆಹಲಿ ಹೈಕೋರ್ಟ್‌ನಲ್ಲಿ ಪಿಟಿಷನ್ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಕೂಡಲೇ ಆ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಸಂಬಂಧಪಟ್ಟವರಿಗೆ ಆದೇಶಿಸಿದೆ.
ವಿಡಿಯೋಗಳನ್ನು ತೆಗೆದು ಹಾಕುವುದರ ಜೊತೆಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ 9 ಯೂಟ್ಯೂಬ್ ಚಾನಲ್‌ಗಳನ್ನು ನಿರ್ಬಂಧ ಹೇರಿದೆ. ತಮ್ಮ ತಂದೆಯ ಮೂಲಕ 11 ವರ್ಷದ ಹುಡುಗಿ ಆರಾಧ್ಯ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಸುಳ್ಳು ಸುದ್ದಿ ಪ್ರಸಾರ ಮಾಡುವ ಯೂಟ್ಯೂಬ್ ಚಾನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ. ಹರಿಶಂಕರ್ ನೇತೃತ್ವದ ಏಕ ಸದಸ್ಯ ಪೀಠ ಆ ವಿಡಿಯೋಗಳನ್ನು ತೆಗೆದು ಹಾಕುವಂತೆ, ಆ ಯೂಟ್ಯುಬ್ ಚಾನಲ್‌ಗಳನ್ನು ಹೇಳಿದೆ. "ಪ್ರತಿ ಮಗುವಿಗೂ ಗೌರವದಿಂದ ಬದುಕುವ ಹಕ್ಕು, ತಮ್ಮ ಬಗ್ಗೆ ಗೌರವದಿಂದ ವರ್ತಿಸುವ ಹಕ್ಕು ಇದೆ" ಎಂದು ಕೋರ್ಟ್ ಹೇಳಿದೆ.

ನ್ಯಾಯಾಧೀಶ ಸಿ. ಹರಿಶಂಕರ್ ಪಿಟಿಷನ್‌ನಲ್ಲಿ ಒದಗಿಸಿದ ಚಿತ್ರಗಳು, ವೀಡಿಯೊ ಕ್ಲಿಪ್‌ಗಳನ್ನು ಪರಿಶೀಲಿಸಿದ ನಂತರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳಿಗೆ ಸಂಬಂಧಿಸಿದಂತೆ ಇಂತಹ ಸುಳ್ಳು ಸುದ್ದಿ ಪ್ರಸಾರವಾಗುತ್ತಿರುವುದು ಇದೇ ಮೊದಲು ಏನಲ್ಲ. ಆದರೂ ಸ್ಟಾರ್ ಕಿಡ್ಸ್ ಮೇಲೆ ಆರೋಪ ಆಗಿರುವ ಕಾರಣ ಆಕೆಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ."ಸೆಲೆಬ್ರಿಟಿ ಅಥವಾ ಸಾಮಾನ್ಯ ವ್ಯಕ್ತಿಯ ಮಗುವಾದರೂ ಸರಿ. ಪ್ರತಿ ಮಗುವನ್ನು ಗೌರವದಿಂದ ನೋಡಿಕೊಳ್ಳಬೇಕು. ದೈಹಿಕ, ಮಾನಸಿಕ ಆರೋಗ್ಯಕ್ಕೆ ಘಾಸಿಯಾಗುವಂತಹ ಸುದ್ದಿಗಳನ್ನು ಹರಡುವುದನ್ನು ಸಹಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರಾಧ್ಯ ಬಚ್ಚನ್ ಇನ್ನಿಲ್ಲ, ಆರಾಧ್ಯ ಬಚ್ಚನ್‌ಗೆ ಸ್ಥಿತಿ ಗಂಭೀರ, ಆರಾಧ್ಯ ಅಸ್ವಸ್ಥ ಎನ್ನುವ ಟೈಟಲ್‌ಗಳನ್ನು ಕೊಟ್ಟು ಪೋಸ್ಟ್ ಮಾಡಿದ್ದ ವಿಡಿಯೋಗಳನ್ನು ತೆಗೆಯಲು ಗೂಗಲ್, ಯೂಟ್ಯೂಬ್‌ಗೆ ಕೋರ್ಟ್ ಹೇಳಿದೆ. ಈ ಸುದ್ದಿಗಳ ಬಗ್ಗೆ ವರದಿ ಮಾಡಿದರೇ ಕೂಡಲೇ ಆ ವಿಡಿಯೋಗಳನ್ನು ತೆಗೆದು ಹಾಕುವುದಾಗಿ ಗೂಗಲ್ ಹೇಳಿದೆ.
ಈ ಹಿಂದೆ ಕೂಡ ಅಭಿಷೇಕ್ ಬಚ್ಚನ್ "ಟ್ರೋಲ್‌ಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ರೀತಿ ಮಾಡುವವರನ್ನು ಕ್ಷಮಿಸೋಕು ಸಾಧ್ಯವಿಲ್ಲ. ನಾನು ಸೆಲೆಬ್ರೆಟಿ ಸರಿ, ಆದರೆ ನನ್ನ ಮಗಳಿಗೂ ಈ ಇಂಡಸ್ಟ್ರಿಗೂ ಸಂಬಂಧವೇ ಇಲ್ಲ, ಆದರೂ ಆಕೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನಗೆ ಏನಾದರೂ ಹೇಳಬೇಕು ಅಂದ್ರೆ ನನ್ನ ಮುಂದೆ ಬಂದು ಹೇಳಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.


Click it and Unblock the Notifications











