ಸಿನಿಮಾದಿಂದ ಪ್ರೇರಣೆಗೊಂಡು ಯುವತಿಯರಿಗೆ ವಂಚಿಸುತ್ತಿದ್ದವನ ಬಂಧನ
ಸಿನಿಮಾದಿಂದ ಪ್ರೇರಣೆಗೊಂಡು ಬದುಕು ರೂಪಿಸಿಕೊಂಡವರು ಎಷ್ಟೋ ಮಂದಿ ಇದ್ದಾರೆ. ಹಾಗೆಯೇ ಸಿನಿಮಾದಲ್ಲಿನ ನಕಾರಾತ್ಮಕ ಅಂಶಗಳಿಂದಲೂ ಪ್ರಭಾವಿತರಾದವರೂ ಇದ್ದಾರೆ.
ಇಲ್ಲೊಬ್ಬ ಮಹಾಶಯ ಸಿನಿಮಾದಿಂದಲೇ ಪ್ರೇರಣೆಗೊಂಡು ಜನರಿಗೆ ಸುಳ್ಳು ಹೇಳಿ ವಂಚಿಸುತ್ತಿದ್ದನಂತೆ. ಆತನೀಗ ಪೊಲೀಸರ ಅತಿಥಿಯಾಗಿದ್ದಾನೆ.ದೆಹಲಿಯ ಆನಂದ್ ಕುಮಾರ್ ಎಂಬಾತ, ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದ ಹಿಂದಿ ರೀಮೇಕ್ ಕಬೀರ್ ಸಿಂಗ್ ಸಿನಿಮಾ ನೋಡಿ ಅದರಿಂದ ಸ್ಪೂರ್ತಿಗೊಂಡು ತಾನು ವೈದ್ಯನೆಂದು ಹೇಳಿಕೊಂಡು ಯುವತಿಯರಿಗೆ ವಂಚಿಸುತ್ತಿದ್ದ.
ಡೇಟಿಂಗ್ ವೆಬ್‌ಸೈಟ್, ಆಪ್‌ಗಳಲ್ಲಿ ತಾನೊಬ್ಬ ಮೂಳೆ ತಜ್ಞ ಎಂದು ಹಾಕಿಕೊಂಡು ಸುಂದರ ಯುವತಿಯರನ್ನು ಭೇಟಿ ಆಗುತ್ತಿದ್ದನಂತೆ. ಹೀಗೆಯೇ ಒಬ್ಬ ವೈದ್ಯೆಯನ್ನು ಭೇಟಿ ಆಗಿ ಆಕೆಯಿಂದ ಹಣವನ್ನೂ ಪೀಕಿಸಿದ್ದಾನೆ.

ಟಿಂಡರ್‌ನಲ್ಲಿ ನಕಲಿ ಖಾತೆ
ಟಿಂಡರ್ ಆಪ್‌ನಲ್ಲಿ ಡಾ.ರೋಹಿತ್ ಗುಜ್ರಾಲ್ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದಿದ್ದ ಆಸಾಮಿ, ವೈದ್ಯೆಯೊಬ್ಬಳ ಸಂಪರ್ಕ ಬೆಳೆಸಿ ಆಕೆಯೊಂದಿಗೆ ಮಾತನಾಡಿ, ಆಕೆಯಿಂದ 30,000 ಹಣ ಪಡೆದುಕೊಂಡಿದ್ದಾನೆ.

ಯುವತಿಯರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ
ಅಷ್ಟೆ ಅಲ್ಲದೆ ಆಕೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಆಗ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಅಸಲಿಗೆ ಇವೆಂಟ್ ಮ್ಯಾನೇಜರ್ ಆಗಿದ್ದ
ಈ ನಕಲಿ ವೈದ್ಯ ಅಸಲಿಗೆ ಇವೆಂಟ್ ಮ್ಯಾನೇಂಜ್‌ಮೆಂಟ್ ಮಾಡುತ್ತಿದ್ದನಂತೆ. ಜೊತೆಗೆ ಈತ ಸಿನಿಮಾದಲ್ಲಿ ನಟಿಸುವ ಆಸಕ್ತಿಯುಳ್ಳ ಹಲವಾರು ಯುವಕ-ಯುವತಿಯರ, ಮಾಡೆಲ್‌ಗಳ ಸಂಪರ್ಕವಿದೆಯಂತೆ ಹೀಗೆಂದು ದೆಹಲಿ ಸೈಬರ್ ಸೆಲ್‌ನ ಡೆಪ್ಯುಟಿ ಕಮೀಷನರ್ ಹೇಳಿದ್ದಾರೆ. ಮಾಡೆಲ್‌ಗಳಲ್ಲಿ ಒಬ್ಬರ ಚಿತ್ರವನ್ನು ಬಳಸಿ ನಕಲಿ ಪ್ರೊಫೈಲ್ ತಯಾರಿಸಿದ್ದಾನೆ. ಕಬೀರ್ ಸಿಂಗ್ ಸಿನಿಮಾ ನೋಡಿ ಸ್ಪೂರ್ತಿ ಪಡೆದಿದ್ದ ಈತ ವೈದ್ಯನೆಂದು ನಕಲಿ ಖಾತೆ ಸೃಷ್ಟಿಸಿದ್ದಾನೆ.

ಹಲವು ಸುಳ್ಳುಗಳನ್ನು ಹೇಳಿದ್ದ
ರೋಹಿತ್ ಹೆಸರಲ್ಲಿ ಯುವತಿಯರೊಂದಿಗೆ ಮಾತನಾಡುತ್ತಿದ್ದ ಈತ, 'ನನಗೆ ಆನಂದ್ ಎಂಬ ಗೆಳೆಯನಿದ್ದು ಅವನ ಬಳಿ ನನ್ನ ಮತ್ತು ಅವನ ತಂಗಿಯ ಖಾಸಗಿ ಫೊಟೊಗಳಿವೆ. ಅವನು ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ, ನನ್ನ ತಾಯಿಯ ಆರೋಗ್ಯ ಬೇರೆ ಸರಿಯಿಲ್ಲ ಹಾಗಾಗಿ ಹಣದ ಅವಶ್ಯಕತೆ ಇದೆ' ಎಂದು ಹೇಳಿ ಹಣ ವಸೂಲಿ ಮಾಡುತ್ತಿದ್ದನಂತೆ.

ಖಾಸಗಿ ಚಿತ್ರ ಬಹಿರಂಗದ ಬೆದರಿಕೆ
ಯುವತಿಯರು ಹಣ ಹಾಕದೇ ಇದ್ದಾಗ ಅವರು ಕಳಿಸಿದ್ದ ಖಾಸಗಿ ಫೊಟೊ, ವಿಡಿಯೋಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಸುತ್ತಿದ್ದನಂತೆ. ಕಳೆದ ನಾಲ್ಕು ತಿಂಗಳಿಂದ ಈ ರೀತಿಯ ಕಾರ್ಯದಲ್ಲಿ ತೊಡಗಿದ್ದ ಈತ ಸುಮಾರು 5 ಲಕ್ಷ ಹಣ ಸಂಪಾದನೆ ಮಾಡಿದ್ದಾನಂತೆ. ಪ್ರಸ್ತುತ ದೆಹಲಿಯ ಲಾಜ್‌ಪತ್ ನಗರ್ ಪೊಲೀಸ್ ಠಾಣೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ.


Click it and Unblock the Notifications











