ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ: ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು
ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದ, ಸೆಲಬ್ರಿಟಿಗಳಿಂದ ತೀವ್ರ ಖಂಡನೆಗೆ ಒಳಗಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. "ರಶ್ಮಿಕಾ ಮಂದಣ್ಣ ಅವರ ನಕಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎಐ) ರಚಿಸಿದ ವೀಡಿಯೊಗೆ ಸಂಬಂಧಿಸಿದಂತೆ, ಐಪಿಸಿಯ ಎಫ್‌ಐಆರ್ ಯು/ಎಸ್ 465 ಮತ್ತು 469, 1860 ಮತ್ತು ಐಟಿ ಆಕ್ಟ್, 2000 ರ ಸೆಕ್ಷನ್ 66 ಸಿ ಮತ್ತು 66 ಇ ಅನ್ನು ದೆಹಲಿ ಪೊಲೀಸ್ ವಿಶೇಷ ಘಟಕದಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ" ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕ್ರಮಕ್ಕೆ ಮುಂದಾದ ದೆಹಲಿ ಮಹಿಳಾ ಆಯೋಗ
ನಟಿ ರಶ್ಮಿಕಾ ಮಂದಣ್ಣಾ ಅವರ ಡೀಪ್‌ಫೇಕ್ ವಿಡಿಯೋ ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು. ಅನೇಕರು ಇದು ರಶ್ಮಿಕಾ ಅಲ್ಲ ಎಂದು ಹೇಳಿದ್ದರು. ಆದರೆ, ಕೆಲವರು ವಿಡಿಯೋವನ್ನು ಹೆಚ್ಚು ವೈರಲ್ ಮಾಡಿದ್ದರು. ಇದಾದ ಬೆನ್ನಲ್ಲೆ ದೆಹಲಿ ಮಹಿಳಾ ಆಯೋಗವು ಘಟನೆ ಬಗ್ಗೆ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ದೆಹಲಿ ಆಯೋಗದ ಹೇಳಿಕೆಯ ಪ್ರಕಾರ, "ಭಾರತೀಯ ನಟಿ ರಶ್ಮಿಕಾ ಮಂದಣ್ಣಾ ಅವರ ಡೀಪ್‌ಫೇಕ್ ವೀಡಿಯೊ ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ ಎಂಬ ಮಾಧ್ಯಮ ವರದಿಗಳ ಕುರಿತು ದೆಹಲಿ ಮಹಿಳಾ ಆಯೋಗವು ಸ್ವಯಂ ಪ್ರಕರಣ ದಾಖಲಿಸಿಕೊಂಡಿದೆ" ಎಂದು ಹೇಳಿದೆ.
ಮುಂದುವರಿದು, "ವರದಿಯ ಪ್ರಕಾರ, ನಟಿ ರಶ್ಮಿಕಾ ಮಂದಣ್ಣಾ ಈ ವಿಷಯದಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮತ್ತು ವೀಡಿಯೊದಲ್ಲಿ ಯಾರೋ ತಮ್ಮ ಚಿತ್ರವನ್ನು ಅಕ್ರಮವಾಗಿ ಮಾರ್ಫ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾವುದೇ ಬಂಧನವಾಗಿಲ್ಲ ಎಂಬುದನ್ನು ಆಯೋಗವು ಗಮನಿಸಿದೆ. ನವೆಂಬರ್ 17 ರೊಳಗೆ ಆರೋಪಿಗಳ ವಿವರಗಳನ್ನು ಒಳಗೊಂಡಂತೆ ಎಫ್‌ಐಆರ್ ಪ್ರತಿಯನ್ನು ನೀಡಬೇಕು" ಎಂದು ಆಗ್ರಹಿಸಿದೆ.
"ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಬಂಧನ ಮಾಡಿಲ್ಲ. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ದಯವಿಟ್ಟು ಈ ವಿಷಯದಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರತಿಯನ್ನು, ಈ ವಿಷಯದಲ್ಲಿ ಬಂಧಿತ ಆರೋಪಿಗಳ ವಿವರಗಳನ್ನು ಒದಗಿಸಬೇಕು. ಜೊತೆಗೆ ಪ್ರಕರಣದ ಬಗ್ಗೆ ವಿವರವಾದ ಕ್ರಮ ತೆಗೆದುಕೊಳ್ಳಲಾಗಿದೆಯೇ?. ವಿಷಯದ ಗಂಭೀರತೆಯನ್ನು ಪರಿಗಣಿಸಿ, ದಯವಿಟ್ಟು ನವೆಂಬರ್ 17 ರೊಳಗೆ ಆಯೋಗ ಕೇಳಿದ ಮಾಹಿತಿಯನ್ನು ಒದಗಿಸಿ" ಎಂದು ಆಯೋಗ ಮನವಿ ಮಾಡಿದೆ.
ಇನ್ನು, ನವೆಂಬರ್ 7 ರಂದು, ಯಾವುದೇ ಡೀಪ್‌ಫೇಕ್ ವಿಡಿಯೋ, ಫೋಟೋಗಳನ್ನು 36 ಗಂಟೆಗಳ ಒಳಗೆ ತೆಗೆದುಹಾಕಲು ಸರ್ಕಾರವು ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಆದೇಶ ನೀಡಿತ್ತು. ಇದಲ್ಲದೇ ಹೋದರೇ, ಭಾರತೀಯ ಕಾನೂನಿನ ಅಡಿಯಲ್ಲಿ ಕ್ರಿಮಿನಲ್ ಮತ್ತು ನ್ಯಾಯಾಂಗ ಪ್ರಕ್ರಿಯೆಗಳಿಗೆ ಹೊಣೆಗಾರರಾಗುತ್ತಾರೆ ಎಂದಿತ್ತು. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಇಂತಹ ವಿಡಿಯೋ, ಫೋಟೋಗಳ ಬಗ್ಗೆ ಜಾಗೃತರಾಗಿರುವಂತೆ ಜನರಲ್ಲಿ ಮನವಿ ಮಾಡಿದ್ದರು.


Click it and Unblock the Notifications










