ಧರ್ಮೇಂದ್ರ ನಿಧನದ ನಂತರ ಜಗಜ್ಜಾಹೀರಾಯ್ತು ಕುಟುಂಬದಲ್ಲಿನ ಬಿರುಕು ; ದುಃಖ ಹಂಚಿಕೊಳ್ಳಲು ಬರಲಿಲ್ಲ ಹೇಮಾ ಮಾಲಿನಿ
ಕುಟುಂಬ ವ್ಯವಸ್ಥೆಯ ಮೂಲ ಬೇರು ಇರುವುದೇ ಪ್ರೀತಿಯಲ್ಲಿ ಪ್ರೀತಿ ಮೌಲ್ಯಾತೀತ. ಆದರೆ ಬದಲಾದ ಈ ಕಾಲದಲ್ಲಿ ಈಗ ಕುಟುಂಬದವರ ನಡುವೆ ಪ್ರೀತಿಯೇ ಇಲ್ಲದಂತಾಗಿದೆ. ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಗುಣ ಮೆಚ್ಚಿಕೊಳ್ಳಬೇಕಾದವರು ಹಣದ ಮುಖ ನೋಡಲು ಶುರು ಮಾಡಿದ್ದಾರೆ. ಇನ್ನು ಮನೆ ಅಂದ ಮೇಲೆ ಮನಸ್ತಾಪಗಳು ಸಹಜ. ಆದರೆ.. ಅದನ್ನೇ ದೊಡ್ಡದು ಮಾಡಬಾರದು.
ಮುಂದುವರೆಸಿಕೊಂಡು ಹೋಗಬಾರದು. ಹಗೆತನ, ದ್ವೇಷ ಸಾಧಿಸಬಾರದು. ಅದರಲ್ಲಿಯೂ ಮನೆಯ ಹಿರಿಯ ಜೀವ ಕಣ್ಮರೆಯಾದಾಗ ಒಬ್ಬರ ನೋವನ್ನು ಇನ್ನೊಬ್ಬರು ಹಂಚಿಕೊಳ್ಳಬೇಕು. ಕಷ್ಟಕ್ಕೆ ಹೆಗಲಾಗಬೇಕು. ಆದರೆ.. ಈಗೀಗ ಬಿರುಕು.. ಭಿನ್ನಾಭಿಪ್ರಾಯ.. ಎಲ್ಲರ ಮನೆಯ ಸಾಮಾನ್ಯ ಅಧ್ಯಾಯವಾದಂತಾಗಿದೆ. ಅದು ಜನ ಸಾಮಾನ್ಯರ ಮನೆಯೇ ಇರಲಿ, ಗಾಜಿನ ಮನೆಯಲ್ಲಿರುವ ಸೆಲೆಬ್ರೇಟಿಗಳ ಮನೆಯೇ ಆಗಿರಲಿ, ಎಲ್ಲರ ಮನೆ ದೋಸೆನೂ ತೂತೇ. ಇದಕ್ಕೆ ಧಮೇಂದ್ರ ಅವರ ಕುಟುಂಬದ ಮನಸ್ತಾಪ ಸದ್ಯದ ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಬಾಲಿವುಡ್‌ನ ದಂತಕತೆ ಧಮೇಂದ್ರ ಅವರಿಗೆ ಇಬ್ಬರು ಪತ್ನಿಯರು. ಒಬ್ಬರು ಪ್ರಕಾಶ್ ಕೌರ್ ಮತ್ತೊಬ್ಬರು ಹೇಮಾ ಮಾಲಿನಿ. ಪ್ರಕಾಶ್ ಕೌರ್ ಮತ್ತು ಧಮೇಂದ್ರ ಅವರ ಪ್ರೇಮ ಸಂಕೇತಕ್ಕೆ ಇವರಿಗೆ ನಾಲ್ಕು ಮಕ್ಕಳಿದ್ದಾರೆ. ಅವರೇ ಸನ್ನಿ ಡಿಯೋಲ್.. ಬಾಬಿ ಡಿಯೋಲ್.. ಅಜೀತಾ ಡಿಯೋಲ್ ಮತ್ತು ವಿಜೇತಾ ಡಿಯೋಲ್.
ಮತ್ತೊಂದು ಕಡೆ ಹೇಮಾ ಮಾಲಿನಿ ಅವರಿಗೆ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಪುತ್ರಿಯರಿದ್ದಾರೆ. ಇನ್ನೂ ಎಷ್ಟೇ ಆದರೂ ಧರ್ಮೇಂದ್ರ ಅವರಿಗೆ ಹೇಮಾ ಮಾಲಿನಿ ಎರಡನೇ ಪತ್ನಿ. ಇನ್ನು ಎರಡನೇ ಮದುವೆಯಾದರು ಕೂಡ ಧರ್ಮೇಂದ್ರ ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ಕೈ ಬಿಡಲಿಲ್ಲ. ಈ ಹಿನ್ನೆಲೆ ಹೇಮಾ ಮಾಲಿನಿ ಮತ್ತು ಪ್ರಕಾಶ್ ಕೌರ್ ಅವರ ನಡುವೆ ಸಂಬಂಧ ಮೊದಲಿಂದ ಸರಿ ಇಲ್ಲ. ಎರಡು ಕುಟುಂಬದ ನಡುವೆ ಭಿನ್ನಾಭಿಪ್ರಾಯಗಳು ಇವೆ. ಈ ಭಿನ್ನಾಭಿಪ್ರಾಯ, ಕುಟುಂಬದಲ್ಲಿನ ಬಿರುಕು ಈಗ ಧರ್ಮೇಂದ್ರ ನಿಧನದ ನಂತರ ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಹೌದು, ತಂದೆ ಧರ್ಮೇಂದ್ರ ನೆನಪಿನಲ್ಲಿ ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಮುಂಬೈನಲ್ಲಿ ಶ್ರದ್ದಾಂಜಲಿ ಸಭೆ ಹಮ್ಮಿಕೊಂಡಿದ್ದರು. ಈ ಸಭೆಗೆ "ಸೆಲೆಬ್ರೇಷನ್ ಆಫ್ ಲೈಫ್" ಎಂದು ಹೆಸರಿಡಲಾಗಿತ್ತು. ಸನ್ನಿ ಮತ್ತು ಬಾಬಿ ಜೊತೆ ಅಜೀತಾ, ವಿಜೇತಾ, ಮೊಮ್ಮಕ್ಕಳಾದ ಕರಣ್, ರಾಜ್‌ವೀರ್, ಮೊದಲ ಪತ್ನಿ ಪ್ರಕಾಶ್ ಕೌರ್ ಈ ಸಭೆಯಲ್ಲಿ ಭಾಗವಹಿಸಿದ್ದರು. ಅಭಯ್ ಡಿಯೋಲ್ ಕೂಡ ತಮ್ಮ ಕುಟುಂಬದ ಜೊತೆ ಇದ್ದರು.
ಇನ್ನು, ಐಶ್ವರ್ಯಾ ರೈ..ಅಭಿಷೇಕ್ ಬಚ್ಚನ್.. ಶಾರುಖ್ ಖಾನ್.. ಸಲ್ಮಾನ್ ಖಾನ್.. ಮಾಧುರಿ ದೀಕ್ಷಿತ್.. ವಿದ್ಯಾ ಬಾಲನ್.. ಶಬಾನಾ ಅಜ್ಮಿ.. ಜಾಕಿ ಶ್ರಾಫ್.. ಸಿದ್ಧಾರ್ಥ್ ಮಲ್ಹೋತ್ರಾ.. ಸುನಿಲ್ ಶೆಟ್ಟಿ.. ಅಜಯ್ ದೇವಗನ್.. ಅಮೀಶಾ ಪಟೇಲ್.. ಫರ್ದೀನ್ ಖಾನ್.. ನಿಮ್ರತ್ ಕೌರ್.. ಸೋನು ಸೂದ್.. ಅನು ಮಲಿಕ್.. ಸುಭಾಷ್ ಘಾಯ್.. ಅಬ್ಬಾಸ್-ಮಸ್ತಾನ್.. ಅನಿಲ್ ಶರ್ಮಾ..ಹೀಗೆ ಬಾಲಿವುಡ್‌ನ ಹಲವಾರು ಜನ ಈ ಸಭೆಗೆ ಬಂದಿದ್ದರು. ಧರ್ಮೇಂದ್ರ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡರು.

ಆದರೆ.. ಹೇಮಾಮಾಲಿನಿ ಆಗಲಿ ಅವರ ಮಕ್ಕಳಾದ ಇಶಾ ಡಿಯೋಲ್ ಮತ್ತು ಅಹನಾ ಡಿಯೋಲ್ ಆಗಲಿ ಈ ಶ್ರದ್ಧಾಂಜಲಿ ಸಭೆಗೆ ಕೊನವರೆಗೆ ಬರಲೇ ಇಲ್ಲ. ಬದಲಿಗೆ ಹೇಮಾ ಮಾಲಿನಿ ತಮ್ಮ ಮನೆಯಲ್ಲಿ ಪ್ರತೈಕವಾಗಿ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಂಡಿದ್ದರು. ಮಹಿಮಾ ಚೌಧರಿ.. ಗೋವಿಂದ ಪತ್ನಿ ಸುನಿತಾ ಅಹುಜಾ.. ಗೋವಿಂದ ಅವರ ಮಗ ಯಶ್‌ವರ್ಧನ್ ಸೇರಿದಂತೆ ಇಲ್ಲಿ ಕೂಡ ಹಲವು ಸೆಲೆಬ್ರಿಟಿಗಳು ಬಂದಿದ್ದರು. ಇಶಾ ಡಿಯೋಲ್ ಅವರ ಮಾಜಿ ಪತಿ ಭರತ್ ತಖ್ತಾನಿ ಕೂಡ ಆಗಮಿಸಿದ್ದರು.
ಹೇಮಾ ಮಾಲಿನಿ ಅವರ ಈ ನಡೆ ಸದ್ಯ ಚರ್ಚೆಗೆ ಮುನ್ನುಡಿಯನ್ನು ಬರೆದಿದೆ. ಮನಸ್ತಾಪ.. ಮುನಿಸು ಏನೇ ಇರಲಿ.. ಎಲ್ಲವನ್ನೂ ಮರೆತು ಈ ಸಮಯದಲ್ಲಿ ಡಿಯೋಲ್ ಕುಟುಂಬದ ಜೊತೆ ಹೇಮಾ ಮಾಲಿನಿ ನಿಲ್ಲಬೇಕಿತ್ತು. ಅವರ ಜೊತೆ ದುಖ ಹಂಚಿಕೊಳ್ಳಬೇಕಿತ್ತು ಎನ್ನುವ ಅಭಿಪ್ರಾಯ ಸದ್ಯ ಸಾರ್ವತ್ರಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಈ ಮೂಲಕ ಧರ್ಮೇಂದ್ರ ಕುಟುಂಬದಲ್ಲಿ ಮೊದಲಿಂದ ಇದ್ದ ಬಿರುಕು ಮತ್ತೊಮ್ಮೆ ಜಗಜ್ಜಾಹೀರಾಗಿದೆ.


Click it and Unblock the Notifications











