ವಾರ್ 2 ಸೋಲಿನ ಎಫೆಕ್ಟ್: ಧೂಮ್ 4 ಚಿತ್ರದಿಂದ ಡೈರೆಕ್ಟರ್‌ಗೆ ಗೇಟ್ ಪಾಸ್- ಕರಣ್ ಜೋಹರ್ ಕ್ಯಾಂಪ್‌ಗೆ ಮರಳಿದ ಅಯಾನ್ ಮುಖರ್ಜಿ
ಪ್ರತಿ ಶುಕ್ರವಾರ ಬಿಡುಗಡೆಯಾಗುವ ಚಿತ್ರದ ಮೇಲೆ ಆ ಚಿತ್ರಕ್ಕೆ ದುಡಿದ ಹಲವರ ಜೀವನ ಅವಲಂಬಿತವಾಗಿರುತ್ತೆ. ಅವರ ಮುಂದಿನ ಭವಿಷ್ಯವನ್ನು ಚಿತ್ರದ ಸೋಲು ಗೆಲುವು ನಿರ್ಧಾರ ಮಾಡುತ್ತೆ. ಸ್ಟಾರ್ ಗಳ ಮೇಲೆ ಈ ಸೋಲು ಹೆಚ್ಚೇನು ಪರಿಣಾಮ ಬೀರದೇ ಇದ್ದರೂ ಕೂಡ ಆ ಚಿತ್ರದ ತಂತ್ರಜ್ಞರ ಮೇಲೆ ಈ ಸೋಲು ತುಂಬಾ ಪರಿಣಾಮ ಬೀರುತ್ತೆ.
ಅದರಲ್ಲಿಯೂ ದೋಣಿ ಮುಳುಗಿದರೆ ಕ್ಯಾಪ್ಟನ್ ಆಫ್ ಶಿಪ್ ಅಂದರೆ ನಿರ್ದೇಶಕರನ್ನೇ ಸೋಲಿಗೆ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತೆ. ಚಿತ್ರ ಸೋತ ನೋವಲ್ಲಿರುವಾಗ ನಿರ್ದೇಶಕರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಲಾಗುತ್ತೆ. ಅಯಾನ್ ಮುಖರ್ಜಿ ಇದಕ್ಕೆ ಸದ್ಯದ ಉದಾಹರಣೆ.

ಹೌದು. ಅಯಾನ್ ಮುಖರ್ಜಿ. ಬಾಲಿವುಡ್ ನ ಯಶಸ್ವಿ ನಿರ್ದೇಶಕ. ಸತತ ಸೋಲುಗಳಿಂದ ಹಿಂದಿ ಉದ್ಯಮ ಕಂಗಾಲಾಗಿ ಕುಂತ ಸಮಯದಲ್ಲಿ "ವೇಕ್ ಅಪ್ ಸಿದ್".. ''ಯೇ ಜವಾನಿ ಹೇ ದಿವಾನಿ''.. ಮತ್ತು ''ಬ್ರಹ್ಮಾಸ್ತ್ರ 1'' ಚಿತ್ರಗಳನ್ನು ನೀಡಿದವರು ಇವರು. ಆದರೆ ದುರಾದೃಷ್ಟ ಹೇಳಿ ಕೇಳಿ ಬೆನ್ನಿಗೇರುವುದಿಲ್ಲ.
ಗೆಲುವಿನ ಟ್ರ್ಯಾಕ್‌ನಲ್ಲಿದ್ದ ಅಯಾನ್ ಮುಖರ್ಜಿ ಪಥ ಬದಲಿಸಿದರು. ''ಬ್ರಹ್ಮಾಸ್ತ್ರ 2'' ಮಾಡದೇ ಆದಿತ್ಯ ಚೋಪ್ರಾ ಜೊತೆ ಕೈ ಜೋಡಿಸಿದರು. ಸುಮ್ಮನೆ ಇರಲಾರದೇ ''ವಾರ್ 2'' ಮಾಡಲು ಮುಂದಾದರು. ಆಗಲೇ ಹೇಳಿದಂತೆ ದುರಾದೃಷ್ಟ. ಅತೀವ ನಿರೀಕ್ಷೆ ಮೂಡಿಸಿದ್ದ ''ವಾರ್ 2'' ಮಕಾಡೆ ಮಲಗಿತು. ವಿತರಕರಿಗೆ ನಷ್ಟದ ಕೂಪಕ್ಕೆ ದೂಡಿತು.
''ವಾರ್ 2'' ಚಿತ್ರದ ನಷ್ಟದ ಪ್ರಮಾಣ ಎಷ್ಟಿತ್ತು ಅಂದರೆ ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಿದ ತಪ್ಪಿಗೆ ವಿತರಕರ ನಷ್ಟವನ್ನು ಆದಿತ್ಯ ಚೋಪ್ರಾ ಒಡೆತನದ YRF ಭರಿಸಲು ಮುಂದಾಗಿದೆ ಎನ್ನುವ ಸುದ್ದಿ ಕೂಡ ಹೊರ ಬಿತ್ತು. ಸದ್ಯದ ಸಮಾಚಾರ ಏನೆಂದರೆ ಇದೇ ಅಯಾನ್ ಮುಖರ್ಜಿಯನ್ನು ಸದ್ಯ ಆದಿತ್ಯ ಚೋಪ್ರಾ ತಮ್ಮ ಕನಸಿನ ''ಧೂಮ್ 4'' ಚಿತ್ರದಿಂದ ಹೊರ ದಬ್ಬಿದ್ದಾರೆ.
ಹೌದು, ಅಸಲಿಗೆ ಬಾಲಿವುಡ್‌ನ ಯಶಸ್ವೀ ಸರಣಿಗಳಲ್ಲಿ ಒಂದಾದ ''ಧೂಮ್'' ಚಿತ್ರದ ನಾಲ್ಕನೇ ಭಾಗ ಬರಲಿದೆ. ಚಿತ್ರೀಕರಣ ಇನ್ನೇನು ಶುರುವಾಗಲಿದೆ. ಹಾಲಿವುಡ್ ಮಾದರಿಯಲ್ಲಿ ಈ ಬಾರಿ ''ಧೂಮ್ 4'' ನಿರ್ಮಾಣ ಮಾಡುವ ಚಿಂತನೆಯನ್ನು ಮಾಡಿರುವ ನಿರ್ಮಾಪಕ ಆದಿತ್ಯ ಚೋಪ್ರಾ ಚಿತ್ರಕ್ಕೆ ನಾಯಕನನ್ನಾಗಿ ರಣ್‌ಬೀರ್ ಕಪೂರ್ ಅವರನ್ನು ಆಯ್ಕೆ ಮಾಡಿದ್ದರು. ಚಿತ್ರದ ಸಾರಥ್ಯವನ್ನು ಅಯಾನ್ ಮುಖರ್ಜಿಗೆ ವಹಿಸಿದ್ದರು.

ಅಯಾನ್ ಕೂಡ ಖುಷಿಯಿಂದ ಒಪ್ಪಿಕೊಂಡು ತಮ್ಮ ''ಬ್ರಹ್ಮಾಸ್ತ್ರ 2'' ಚಿತ್ರದ ಯೋಜನೆ ಮರೆತು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದರು. ಆದರೆ ''ವಾರ್ 2'' ಚಿತ್ರದ ಸೋಲು ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಧೂಮ್ 4'' ಚಿತ್ರದಿಂದ ಅಯಾನ್ ಹೊರ ಬಂದಿದ್ದು ಮತ್ತೆ ಕರಣ್ ಜೋಹರ್ ಕ್ಯಾಂಪ್‌ನ ಅಯಾನ್ ಸೇರಿಕೊಂಡಿದ್ದಾರೆ. ''ಬ್ರಹ್ಮಾಸ್ತ್ರ 2'' ಚಿತ್ರದ ಕೆಲಸವನ್ನು ಶುರು ಮಾಡಿದ್ದಾರೆ ಎಂದು ''ಬಾಲಿವುಡ್ ಹಂಗಾಮ'' ವರದಿಯನ್ನು ಮಾಡಿದೆ.
''ವಾರ್ 2'' ಮತ್ತು ಧೂಮ್ 4 ಅಂತಹ ಚಿತ್ರಗಳು ನನಗೆ ಸೂಕ್ತವಾದ ಚಿತ್ರಗಳಲ್ಲ, ನನ್ನ ಕಾರ್ಯವೈಖರಿಗೆ ಆ ಚಿತ್ರಗಳು ಹೊಂದುವುದಿಲ್ಲ. ಹೀಗಾಗಿಯೇ ಹೊರ ಬರುವುದು ಸೂಕ್ತ ಎಂದು ನಿರ್ಧಾರ ಮಾಡಿ ಅಯಾನ್ ಮುಖರ್ಜಿ ಚಿತ್ರದ ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಜೊತೆ ಚರ್ಚೆ ಮಾಡಿ ಗೌರವಯುತವಾಗಿ ಹೊರ ಬಂದಿದ್ದಾರೆ ಎಂದು ಕೂಡ ''ಬಾಲಿವುಡ್ ಹಂಗಾಮಾ''ದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.


Click it and Unblock the Notifications











