'ಧುರಂಧರ್'-2 ನಿರ್ದೇಶಕನ ಬಳಿ ವಿಚಿತ್ರ ಬೇಡಿಕೆ ಇಟ್ಟ ಪಾಕಿಸ್ತಾನದ ಪ್ರಜೆಗಳು!
ಒಂದೇ ವಾರದಲ್ಲಿ 'ಧುರಂಧರ್'-2 ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಎಲ್ಲಾ ಕಡೆ ಬ್ಲಾಕ್‌ಬಸ್ಟರ್ ರೆಸ್ಪಾನ್ಸ್ ಸಿಕ್ತಿದೆ. ಪಾಕಿಸ್ತಾನ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕಿಲ್ಲ. ಆದರೆ ಸಿನಿಮಾ ಕ್ರೇಜ್ ಬಗ್ಗೆ ಅಲ್ಲಿ ಸಿಕ್ಕಾಪಟ್ಟೆ ಟಾಕ್ ಶುರುವಾಗಿದೆ. 'ಧುರಂಧರ್' ಚಿತ್ರ ಕೂಡ ಬಿಡುಗಡೆ ಆಗಿರಲಿಲ್ಲ. ಆದರೆ ಬಳಿಕ ಪೈರಸಿ ಸಿಡಿಯಲ್ಲಿ ಸಿನಿಮಾ ನೋಡಲು ಮುಗಿಬಿದ್ದಿದ್ದರು.
'ಧುರಂಧರ್'-2 ಸಿನಿಮಾ ಗೆಲುವಿನ ಬಗ್ಗೆ ಪಾಕಿಸ್ತಾನದ ಪ್ರಜೆಗಳು ಮಾತನಾಡಿರುವ ವಿಡಿಯೋಗಳು ವೈರಲ್ ಆಗುತ್ತಿದೆ. ಭಾರತೀಯರು ಪಾಕಿಸ್ತಾನಕ್ಕೆ ತೆರಳಿ ಗೂಡಾಚಾರರಾಗಿ ಅಲ್ಲಿನ ಭಯೋತ್ಪಾದನೆ ಮಟ್ಟ ಹಾಕುವ ಕಥೆ ಈ ಚಿತ್ರದಲ್ಲಿದೆ. 'ಧುರಂಧರ್' ಸಿನಿಮಾ ಬಳಿಕ ಪಾಕಿಸ್ತಾನದಲ್ಲಿ ಭಾರತದ ಗೂಡಾಚಾರರಿಗಾಗಿ ಹುಡುಕಾಟ ನಡೆಯುತ್ತಿದೆ ಎನ್ನುವ ಊಹಾಪೋಹ ಶುರುವಾಗಿದೆ. ಕೆಲ ವೀಡಿಯೋಗಳನ್ನು ಹೀಗೆ ವೈರಲ್ ಮಾಡಿದ್ದರು.

ಅಂದಹಾಗೆ ಪಾಕಿಸ್ತಾನದ ಕರಾಚಿಯ ಲಿಯಾರಿ(Lyari) ಪಟ್ಟಣದ ಹಿನ್ನೆಲೆಯಲ್ಲಿ 'ಧುರಂಧರ್' ಸರಣಿ ಕಥೆ ನಡೆಯುತ್ತದೆ. ಅಲ್ಲಿ 1999-2009ರ ಅವಧಿಯಲ್ಲಿ ನಡೆದಿದ್ದ ಗ್ಯಾಂಗ್ ವಾರ್‌ಗಳ ಹಿನ್ನೆಲೆಯಲ್ಲಿ ಆದಿತ್ಯಧರ್ ಕತೆ ಹೆಣೆದಿದ್ದಾರೆ. ಲಿಯಾರಿ ಪಟ್ಟಣದ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ತೆರೆಮೇಲೆ ತಂದಿದ್ದಾರೆ. ಇವತ್ತಿಗೂ ಆ ಪಟ್ಟಣ ಬಹಳ ಹಿಂದುಳಿದಿದೆ. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಜನ ಕಷ್ಟ ಅನುಭವಿಸುತ್ತಿದ್ದಾರೆ.
'ಧುರಂಧರ್'-2 ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುತ್ತಿದ್ದಾರೆ. ಅದರಲ್ಲಿ 500 ಕೋಟಿ ರೂ. ನಮಗೆ ಕೊಟ್ಟರೆ ನಮ್ಮ ನಗರವನ್ನು ನಾವು ಅಭಿವೃದ್ಧಿಪಡಿಸಿಕೊಳ್ಳುತ್ತೇವೆ, ಒಳ್ಳೆ ರಸ್ತೆಗಳನ್ನು ನಿರ್ಮಿಸಿಕೊಳ್ಳುತ್ತೇನೆ ಎಂದು ಅಲ್ಲಿನ ಜನರು ಯೂಟ್ಯೂಬ್ ಚಾನಲ್ ಸಂದರ್ಶನಗಳಲ್ಲಿ ತಮಾಷೆಯಾಗಿ ಹೇಳಿದ್ದಾರೆ. ಕಳೆದ ವರ್ಷ 'ಧುರಂಧರ್' ಸಿನಿಮಾ ಬಿಡುಗಡೆ ಆಗಿದ್ದಾಗ ಕೂಡ ಇದೇ ರೀತಿ ಪಾಕಿಸ್ತಾನದ ಕೆಲ ಪ್ರಜೆಗಳು ಆಡಿದ್ದ ಮಾತುಗಳು ವೈರಲ್ ಆಗಿತ್ತು.
ತಮ್ಮ ಕಷ್ಟದ ಜೀವನವನ್ನು 'ಧುರಂಧರ್' ಸರಣಿ ಸಿನಿಮಾ ಮೂಲಕ ಇಡೀ ಪ್ರಪಂಚಕ್ಕೆ ತೋರಿಸಲಾಗಿದೆ. ಅದಕ್ಕೆ ನಿರ್ದೇಶಕರಿಗೆ ಧನ್ಯವಾದ ಎಂದು ಕೂಡ ಪಾಕಿಸ್ತಾನದ ಪ್ರಜೆಗಳು ಹೇಳಿರುವುದನ್ನು ನೋಡಬಹುದು. ಆದಷ್ಟು ಬೇಗ ಓಟಿಟಿ ಅಥವಾ ಪೈರಸಿ ಸಿಡಿಗಳ ಮೂಲಕ ಸೀಕ್ವೆಲ್ ಸಿನಿಮಾ ಕೂಡ ಪಾಕಿಸ್ತಾನಕ್ಕೆ ತಲುಪುತ್ತದೆ ಎಂದು ಹೇಳಲಾಗ್ತಿದೆ. 'ಧುರಂಧರ್' ಚಿತ್ರದಲ್ಲಿ ಪಾಕಿಸ್ತಾನ ವಿರೋಧಿ ಸಂದೇಶ ಇದೆ ಎನ್ನುವ ಕಾರಣಕ್ಕೆ ಬಹ್ರೇನ್, ಓಮನ್, ಕತಾರ್, ಕುವೈತ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ 6 ಗಲ್ಫ್ ರಾಷ್ಟ್ರಗಳಲ್ಲಿ ನಿಷೇಧ ಹೇರಲಾಗಿದೆ.
ಭಾರತದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಧುರಂಧರ್-2' ಈಗ 8ನೇ ಸ್ಥಾನಕ್ಕೇರಿದೆ. ಮೊದಲ 8 ದಿನಕ್ಕೆ ಸಿನಿಮಾ 1081 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಕರ್ನಾಟಕದಲ್ಲಿ ಕೂಡ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಆದಿತ್ಯಧರ್ ರೀಸರ್ಚ್, ಕಥೆ- ಚಿತ್ರಕಥೆ, ಮೇಕಿಂಗ್ ಎಲ್ಲದರ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಕೆಲವರು ಮಾತ್ರ ಇದೊಂದು ಪ್ರೊಪಾಗಂಡಾ ಸಿನಿಮಾ ಎಂದು ಟೀಕಿಸುತ್ತಿದ್ದಾರೆ. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.
'ಧುರಂಧರ್- 2' ಸಿನಿಮಾ ಅಲ್ಲು ಅರ್ಜುನ್ ನಟನೆಯ 'ಪುಷ್ಪ'- ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ದಾಖಲೆ ಮುರಿಯುತ್ತಾ? ಎನ್ನುವ ಚರ್ಚೆ ನಡೀತಿದೆ. ಸುಕುಮಾರ್ ನಿರ್ದೇಶನದ ಸಿನಿಮಾ 1600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಆದಿತ್ಯಧರ್ ಸಿನಿಮಾ ಇನ್ನೆರಡು ದಿನಗಳಲ್ಲಿ 'ಕೆಜಿಎಫ್- 2' ಕಲೆಕ್ಷನ್ ದಾಖಲೆ ಮೀರಿಸುವ ಸಾಧ್ಯತೆಯಿದೆ.


Click it and Unblock the Notifications











