ಕನ್ನಡಕ್ಕೆ ಬಂದ ಕರೀನಾ ಕಪೂರ್ ? ಹೊಡಿರಲೇ ಹಲಗಿ ಎಂದ 'ರಾಕಿ' ಬಣ ; 'ಟಾಕ್ಸಿಕ್' ನಲ್ಲಿ ಟಾಪ್ ನಟಿ..?
ಕೆಲ ನಟರ ಸಿನಿಮಾಗಳೇ ಹಂಗೆ. ಚಿತ್ರ ಸೆಟ್ಟೇರಿದ ದಿನದಿಂದ ತೆರೆ ಕಾಣೋವರೆಗೂ ಚಿತ್ರಪ್ರೇಮಿಗಳು ಜಾತಕ ಪಕ್ಷಿಯಂತೆ ಕಾದು ಕುಳಿತು ಬಿಡ್ತಾರೆ. ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ವಿಚಾರದಲ್ಲಿಯೂ ಇಂಥಹದ್ದೇ ಒಂದು ವಾತಾವರಣ ಇದೆ. ಇದಕ್ಕೆ ಪೂರಕವಾಗಿ ಈ ಚಿತ್ರ ಆರಂಭವಾದ ದಿನದಿಂದನೇ ಅದು ಹಾಗಂತೆ, ಇದು ಹೀಗಂತೆ, ಎಂಬ ಮಾತಿನ ಬಳ್ಳಿ ವಾಟ್ಸ್ ಆಪ್, ಮೆಸೆಂಜರ್, ಚಾಟ್ ಗಳಲ್ಲಿ ಹರಿದಾಡ್ತಾನೇ ಇದೆ.
ಇನ್ನೂ ಈ ಚಿತ್ರದ ನಾಯಕಿ ವಿಚಾರಕ್ಕೆ ಬಂದರೆ ಅನೇಕರಿಗೆ ಕರೀನಾ ಕಪೂರ್ ಅವರ ಮೇಲೆ ಅನುಮಾನ ಇದೆ. ಟಾಕ್ಸಿಕ್ ಚಿತ್ರದ ಮೂಲಕ ಬಾಲಿವುಡ್ ನ ಬೆಬೋ ಕರಿನಾ ಕಪೂರ್, ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬರುವುದು ಖಚಿತ ಎಂಬ ಭವಿಷ್ಯವಾಣಿ ಹಿಂದಿನಿಂದ ಕೇಳಿ ಬರುತ್ತಾನೇ ಇದೆ. ಈ ಮಾತು ಈಗ ನಿಜವಾಗುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ. ಕರೀನಾ ಆಡಿದ ಮಾತು ಈ ಅನುಮಾನವನ್ನ ಈಗ ಇನ್ನೂ ಹೆಚ್ಚಿಸಿದೆ.

ಅಭಿಮಾನಿಗಳ ಜೊತೆ ಇತ್ತೀಚಿಗೆ ಪ್ರಶ್ನೋತ್ತರ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದ ಕರೀನಾ ಕಪೂರ್, ದಕ್ಷಿಣಕ್ಕೆ ದಂಡೆತ್ತಿ ಬರುತ್ತಿರುವ ವಿಚಾರವನ್ನ ಒಪ್ಪಿಕೊಂಡಿದ್ದಾರೆ. ನಿಮ್ಮ ಮುಂದಿನ ಚಿತ್ರ ''ಕ್ರೂ''ದ ಪ್ರಚಾರ ಮಾಡಲು ಹೈದ್ರಾಬಾದ್ ಗೆ ಬರುತ್ತೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಕರೀನಾ, ನಾನು ದೊಡ್ಡ ಸೌತ್ ಸಿನಿಮಾವನ್ನ ಮಾಡುತ್ತಿದ್ದೇನೆ. ಇನ್ನೂ ಇದು ಪ್ಯಾನ್ ಇಂಡಿಯಾ ಕಾಲ. ಹೀಗಾಗಿ ಈ ಚಿತ್ರದ ಚಿತ್ರೀಕರಣ ಎಲ್ಲಿ ನಡೆಯುತ್ತೆ ಅನ್ನುವ ವಿಚಾರ ನನಗೆ ಇನ್ನೂ ಗೊತ್ತಿಲ್ಲ. ಆದರೆ ನಾನು ಈ ಚಿತ್ರಕ್ಕೆ ಸಿಕ್ಕಾಪಟ್ಟೆ ಎಕ್ಸಾಯಟ್ ಆಗಿದ್ದೇನೆ ಎಂದಿದ್ದಾರೆ.
ಕರೀನಾ ಅವರ ಈ ಮಾತು ಈಗ ರಾಕಿಂಗ್ ಬಣದಲ್ಲಿ, ಬ್ರೇಕಿಂಗ್ ನ್ಯೂಸ್ ಆಗಿ ಹರಿದಾಡುತ್ತಿದೆ. ಗೊತ್ತಾಯ್ತಾ ನಮ್ಮ ಬಾಸ್ ತಾಖತ್ತು ಎಂಬ ಅಭಿಮಾನದ ಮಾತು ಮಾರ್ದನಿಸುತ್ತಿದೆ. ನಿಜಕ್ಕೂ ಕರೀನಾ ಕಪೂರ್, ಟಾಕ್ಸಿಕ್ ಚಿತ್ರದ ಒಂದು ಪ್ರಮುಖ ಭಾಗಾನಾ..? ಈ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಿ ಸಿಗಲಿದೆಯಾದರೂ BollyBlindsNGossip ಹಂಚಿಕೊಂಡಿರುವ ಕರೀನಾ ಕಪೂರ್ ಅವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಯಶ್ ಅಭಿಮಾನಿಗಳ ಖುಷಿಯನ್ನೂ ಇಮ್ಮಡಿಗೊಳಿಸಿದೆ.

ಯಶ್ ಇಷ್ಟ ಎಂದಿದ್ದ ಕರೀನಾ..!
ಹೆಚ್ಚೇನಿಲ್ಲ. ಆರು ತಿಂಗಳ ಹಿಂದೆ ಕರೀನಾ ಕಪೂರ್ ಖುದ್ದು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಿನಿಮಾ ಹಾಗೂ ವ್ಯಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ವಿಚಾರಗಳನ್ನ ಹಂಚಿಕೊಂಡಿದ್ದರು. ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎಂದು ಕೇಳಲಾದ ಪ್ರಶ್ನೆಗೆ ಒಂದು ಸೆಕೆಂಡ್ ಕೂಡ ವ್ಯರ್ಥ ಮಾಡದೇ ಕರೀನಾ 'ಯಶ್' ಹೆಸರು ತೆಗೆದುಕೊಂಡಿದ್ದರು. ನೀವು ಹೇಳಿದ ಎಲ್ಲಾ ಸ್ಟಾರ್ಗಳೂ ಸೂಪರ್... ಆದ್ರೆ ನನಗೆ ಕೆ.ಜಿ.ಎಫ್ ಸಿನಿಮಾ ಅಂದರೆ ಬಹಳ ಇಷ್ಟ. ಹೀಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ ಎಂದಿದ್ದರು. ತಾವು ಈ ಚಿತ್ರವನ್ನು ನೋಡಿರುವುದಾಗಿಯೂ ತಿಳಿಸಿದ್ದರು. ಇಷ್ಟೇ ಸಾಕಿತ್ತು ಅಂದಿನಿಂದ ಯಶ್ ಅಭಿನಯದ ಟಾಕ್ಸಿಕ್ ಚಿತ್ರದಲ್ಲಿ ಕರೀನಾ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಾನೆ ಇದೆ. ಈಗ ಕರೀನಾ ಸೌತ್ ಚಿತ್ರದ ಭಾಗವಾಗ್ತಿರುವ ವಿಚಾರ ಬಹಿರಂಗ ಪಡಿಸಿದ್ದಾರೆ. ಹೀಗಾಗಿ ಆರು ತಿಂಗಳಿಂದ ಕೇಳಿ ಬರುತ್ತಿರುವ ಮಾತುಗಳಿಗೆ ಮತ್ತೆ ಜೀವ ಬಂದಂತೆ ಆಗಿದೆ.

ಒಟ್ಟಿನಲ್ಲಿ ಕರೀನಾ ಕಪೂರ್ ಅವರ ಮನದ ಮಾತು, ಅನೇಕರ ನಿದ್ದೆ ಕೆಡಿಸಿದೆ. ಕರೀನಾ ಹೇಳಿದ ಆ ಸೌತ್ ಸಿನಿಮಾ ಟಾಕ್ಸಿಕ್ ಆಗಿರಲಿ ಎಂಬ ಪ್ರಾರ್ಥನೆಯನ್ನೂ ಒಂದು ವರ್ಗ ಮಾಡುತ್ತಿದೆ. ಟಾಕ್ಸಿಕ್ ಕುರಿತು ಯಾವ ಗುಟ್ಟನ್ನೂ ಇಲ್ಲಿವರೆಗೆ ರಾಕಿಂಗ್ ಸ್ಟಾರ್ ಯಶ್ ಬಿಟ್ಟು ಕೊಟ್ಟಿಲ್ಲ. ಇನ್ನೂ ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆಗೆ ಅಷ್ಟು ಸುಲಭವಾಗಿ ಉತ್ತರ ಕೊಡುತ್ತಾರಾ..?


Click it and Unblock the Notifications











