ಚಿನ್ನಾಭರಣ ಕಂಪನಿಗೆ 12 ಲಕ್ಷ ಮೋಸ ಮಾಡಿದ್ರಾ 'ಬಿಗ್ ಬಾಸ್' ಸ್ಪರ್ಧಿ.?
ಒಂದೇ ಧಾರಾವಾಹಿಯಲ್ಲಿ ಅಭಿನಯಿಸಿದ್ದರೂ, ಹಿಂದಿ ಕಿರುತೆರೆ ಲೋಕದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದವರು ನಟಿ ಹೀನಾ ಖಾನ್.
'ಬಿಗ್ ಬಾಸ್ 11' ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಹೀನಾ ಖಾನ್ ಮಾಡಿಕೊಂಡಿರುವ ವಿವಾದಗಳು, ಎಡವಟ್ಟುಗಳು ಒಂದೆರಡಲ್ಲ ಬಿಡಿ. 'ಬಿಗ್ ಬಾಸ್' ಮನೆಯಲ್ಲಿ ಬಂಧಿಯಾಗಿದ್ದಾಗಲೇ, ದಕ್ಷಿಣ ಭಾರತದ ನಟಿಯರ ಬಗ್ಗೆ ಹೀನಾಯವಾಗಿ ಮಾತನಾಡಿ ಕಾಂಟ್ರವರ್ಸಿಯನ್ನ ಮೈಮೇಲೆ ಎಳೆದುಕೊಂಡಿದ್ದವರು ಇದೇ ಹೀನಾ ಖಾನ್.
ತರಹೇವಾರಿ ಉಡುಗೆಗಳನ್ನು ಧರಿಸಿ ಆಗಾಗ ಟ್ರೋಲ್ ಆಗುತ್ತಲೇ ಇರುವ ಹೀನಾ ಖಾನ್ ಈ ಬಾರಿ ಚಿನ್ನಾಭರಣ ಕಂಪನಿಯೊಂದರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈವೆಂಟ್ ಒಂದಕ್ಕೆ ಧರಿಸಲು ಚಿನ್ನಾಭರಣ ಕಂಪನಿಯಿಂದ ದುಬಾರಿ ಬೆಲೆಯ ಒಡವೆ ಪಡೆದು, ಅದನ್ನ ವಾಪಸ್ ಕೊಡದೆ, ದುಡ್ಡು ಕೂಡ ಕಟ್ಟದೆ ವಂಚಿಸಿದ್ದಾರೆ ಎಂದು ಚಿನ್ನಾಭರಣ ಕಂಪನಿಯೊಂದು ಹೀನಾ ಖಾನ್ ವಿರುದ್ಧ ನೋಟೀಸ್ ಜಾರಿ ಮಾಡಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ...

12 ಲಕ್ಷ ಮೌಲ್ಯದ ಆಭರಣ
ಏಪ್ರಿಲ್ ತಿಂಗಳಲ್ಲಿ ಕಾರ್ಯಕ್ರಮವೊಂದಕ್ಕಾಗಿ ಧರಿಸಲು ಚಿನ್ನಾಭರಣ ಕಂಪನಿಯೊಂದರಿಂದ ಬರೋಬ್ಬರಿ 12 ಲಕ್ಷ ಮೌಲ್ಯದ ಆಭರಣಗಳನ್ನು ನಟಿ ಹೀನಾ ಖಾನ್ ಪಡೆದಿದ್ದರು. ಆದ್ರೆ, ಈವರೆಗೂ ಆ ಆಭರಣಗಳನ್ನು ಹೀನಾ ಖಾನ್ ಚಿನ್ನಾಭರಣ ಕಂಪನಿಗೆ ವಾಪಸ್ ನೀಡಿಲ್ಲ. ಹೀಗಾಗಿ, 15 ದಿನಗಳ ಒಳಗೆ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಹೀನಾ ಖಾನ್ ಗೆ ವಕೀಲರ ಮುಖಾಂತರ ಚಿನ್ನಾಭರಣ ಕಂಪನಿ ನೋಟೀಸ್ ನೀಡಿದೆ ಎಂದು ವರದಿ ಆಗಿದೆ.

ಯಾವ ನೋಟೀಸ್ ಬಂದಿಲ್ಲ.!
''ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಯಾವುದೇ ನೋಟೀಸ್ ಬಂದಿಲ್ಲ. ಇದು ನನ್ನ ಇಮೇಜ್ ಗೆ ಡ್ಯಾಮೇಜ್ ಮಾಡುವ ಯತ್ನ'' ಎಂದು ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ ನಟಿ ಹೀನಾ ಖಾನ್.

ಟ್ವೀಟ್ ಮಾಡಿದ ಹೀನಾ ಖಾನ್
''ಲೀಗಲ್ ನೋಟೀಸ್ ನನ್ನ ಮನೆ ಬಾಗಿಲು ತಲುಪದೇ ಹೇಗೆ ಮೀಡಿಯಾ ಹೌಸ್ ಗಳ ಬಾಗಿಲು ತಲುಪಿತು ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ಈ ತಂತ್ರ ವರ್ಕ್ ಆಗಲ್ಲ. ಹೊಸದೇನಾದರೂ ಪ್ರಯತ್ನಿಸಿ'' ಎಂದು ಹೀನಾ ಖಾನ್ ಟ್ವೀಟ್ ಮಾಡಿದ್ದಾರೆ.

ಸ್ಟೈಲಿಸ್ಟ್ ಮಾಡಿದ ಎಡವಟ್ಟು.?
ಅಷ್ಟಕ್ಕೂ, ಚಿನ್ನಾಭರಣ ಕಂಪನಿಯಿಂದ ಹೀನಾ ಖಾನ್ ಗಾಗಿ ಒಡವೆಗಳನ್ನ ತಂದವರು ಸ್ಟೈಲಿಸ್ಟ್ ಹೇಮಲತಾ. ''ನಾನು ಆ ಆಭರಣಗಳನ್ನು ಧರಿಸಲಿಲ್ಲ. ಯಾಕಂದ್ರೆ, ನನಗದು ಇಷ್ಟ ಆಗಲಿಲ್ಲ. ಹೀಗಾಗಿ ಬೇರೆ ಧರಿಸಿದೆ. ನನ್ನ ಸ್ಟೈಲಿಸ್ಟ್ ಹೇಮಲತಾ ಅದನ್ನ ಆಟೋದಲ್ಲಿ ಬಿಟ್ಟುಬಿಟ್ಟಿದ್ದಾರೆ. ಈಗಾಗಲೇ 2.86 ಲಕ್ಷ ವಾಪಸ್ ಕೊಡಲಾಗಿದೆ'' ಎಂದು ಸಂದರ್ಶನದಲ್ಲಿ ಹೀನಾ ಖಾನ್ ತಿಳಿಸಿದ್ದಾರೆ.

ಹೆಸರಿಗೆ ಮಸಿ
''ಅನವಶ್ಯಕವಾಗಿ ನನ್ನ ಹೆಸರಿಗೆ ಮಸಿ ಬಳಿಯಲಾಗುತ್ತಿದೆ. ಈ ಪ್ರಕರಣದ ಬಗ್ಗೆ ನನ್ನ ವಕೀಲರು ಕೂಡ ಗಮನ ಹರಿಸುತ್ತಾರೆ. ಚಿನ್ನಾಭರಣ ಕಂಪನಿಯವರು ನನ್ನ ಬಳಿ ಕ್ಷಮೆ ಕೇಳುವವರೆಗೂ ನಾನು ಬಿಡುವುದಿಲ್ಲ'' ಎಂದಿದ್ದಾರೆ ನಟಿ ಹೀನಾ ಖಾನ್.


Click it and Unblock the Notifications











