ರಜನಿ, ಯಶ್, ಸಲ್ಲು, ಶಾರುಖ್ ಕೋಟಿ ಕೋಟಿ ಹಣ ಪಡೆದು ಅಂಬಾನಿ ಮದುವೆಗೆ ಹೋದ್ರಾ? ನಾಗ್ ಹೇಳಿಕೆ ವೈರಲ್
ದೇಶದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಮಗನ ಮದುವೆಯನ್ನು ಬಹಳ ವಿಜೃಂಬಣೆಯಾಗಿ ನೆರವೇರಿಸಿದ್ದಾರೆ. ಅದಕ್ಕಾಗಿ ಸಾವಿರಾರು ಕೋಟಿ ನೀರಿನಂತೆ ಚೆಲ್ಲಿದ್ದಾರೆ. ದೇಶ ವಿದೇಶದ ಸೆಲೆಬ್ರೆಟಿಗಳು, ಉದ್ಯಮಿಗಳು, ಕೀಡಾಪಟುಗಳು, ರಾಜಕೀಯ ಮುಖಂಡರು ನಡ ವಧು ವರರನ್ನು ಹಾರೈಸಿದ್ದಾರೆ.
ಪ್ರಧಾನಿ ಮೋದಿ ಸೇರಿದಂತೆ ಸಾಕಷ್ಟು ಗಣ್ಯರು ಈ ಅದ್ಧೂರಿ ವಿವಾಹ ಮಹೋತ್ಸವಕ್ಕೆ ಸಾಕ್ಷಿ ಆಗಿದ್ದಾರೆ. ಸಾವಿರಾರು ಅತಿಥಿಗಳಿಗೆ ರಾಜಾತಿಥ್ಯ ನೀಡಲಾಗಿದೆ. 3 ದಿನಗಳ ಕಾಲ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಶಾಸ್ತ್ರಗಳು ನಡೆದವು. ಸ್ಟಾರ್ ನಟರೆಲ್ಲಾ ನಮ್ಮದೇ ಮನೆ ಮದುವೆ ಎನ್ನುವಂತೆ ಭಾಗಿ ಆಗಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಸ್ವರ್ಗವೇ ಧರೆಗಿಳಿದಂತೆ ಇತ್ತು. ಅತಿಥಿಗಳಿಗೆ ಸ್ಟಾರ್ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಆಗಿತ್ತು. ಡಿಸೈನರ್ ಕಾಸ್ಟ್ಯೂಮ್‌ನಲ್ಲಿ ತಾರೆಯರೆಲ್ಲಾ ಮಿಂಚಿದ್ದಾರೆ. ವಿದೇಶಿ ಸೆಲೆಬ್ರೆಟಿಗಳು ಕೂಡ ದೇಸಿ ಉಡುಗೆ ತೊಟ್ಟು ಅಂಬಾನಿ ಮನೆ ವಿವಾಹ ಮಹೋತ್ಸವಕ್ಕೆ ಸಾಕ್ಷಿ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗ್ತಿದೆ. ಈ ರೀತಿ ದೇಶ ವಿದೇಶದ ತಾರೆಯರೆಲ್ಲಾ ಒಂದೇ ಕಾರ್ಯಕ್ರಮದಲ್ಲಿ ಭಾಗಿ ಆಗಿ ಸಂಭ್ರಮಿಸಿರುವುದು ಇದೇ ಮೊದಲು. ಅಂಬಾನಿ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧ್ಯ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಸ್ಟಾರ್ ನಟರು ಅನಂತ್- ರಾಧಿಕಾ ಮದುವೆಗೆ ಹೀಗೆ ಹೋಗಿ ಹಾಗೆ ಬಂದಿಲ್ಲ. ವೇದಿಕೆ ಏರಿ ನವ ವಧು- ವರನ ಕೈ ಕುಲುಕಿ ಶುಭ ಹಾರೈಸಿ, ಫೋಟೊಗೆ ಪೋಸ್ ಕೊಟ್ಟು ಬಂದಿಲ್ಲ. ಫ್ಯಾಮಿಲಿ ಸಮೇತ ಹೋಗಿ ಅಲ್ಲೇ ಗಂಟೆಗಳ ಕಾಲ ಕಳೆದಿದ್ದಾರೆ. ವಧು- ವರನ ಜೊತೆ ಹೆಜ್ಜೆ ಹಾಕಿದ್ದಾರೆ. ಮುಖೇಶ್ ಅಂಬಾನಿ ಕೂಡ ಕುಣಿದಿದ್ದಾರೆ. ಅಷ್ಟೆಲ್ಲಾ ಯಾಕೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.
ಸಿನಿಮಾಗಳಲ್ಲಿ ಬಿಟ್ಟರೆ ಹೀಗೆ ಮದುವೆ ಕಾರ್ಯಕ್ರಮದಲ್ಲಿ ರಜನಿಕಾಂತ್ ಎಂದೂ ಹೆಜ್ಜೆ ಹಾಕಿದವರಲ್ಲ. ಇದನ್ನು ನೋಡಿ ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡುತ್ತಾರೆ. ದುಡ್ಡಿನ ತಾಳಕ್ಕೆ ಎಲ್ಲರೂ ಕುಣಿಯುತ್ತಾರೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅಂಬಾನಿ ಆಪ್ತರು ಎನ್ನುವ ಕಾರಣಕ್ಕೆ ತಾರೆಯರಲ್ಲ ಅವರ ಮಗನ ಮದುವೆಗೆ ಹೋಗಿಲ್ಲ. ಅದಕ್ಕಾಗಿ ಕೋಟಿ ಕೋಟಿ ಹಣ ಪಡೆದಿದ್ದಾರೆ ಎನ್ನಲಾಗ್ತಿದೆ.

ಅಂಬಾನಿ ಮಗನ ಮದುವೆಗೆ ಹೋಗುವುದೇ ಹೆಚ್ಚು. ಆ ವೈಭೋಗ ನೋಡಿ ಅನುಭವಿಸಿದರೆ ಸಾಲದೇ? ಅದಕ್ಕಾಗಿ ಹಣ ಕೊಡ್ತಾರಾ? ಅಂತೆಲ್ಲಾ ಕೇಳಬೇಡಿ. ಹಣ ಉಳ್ಳವರು ಹೀಗೆ ಹಣ ಕೊಟ್ಟು ತಾರೆಯರನ್ನು ತಮ್ಮ ಮನೆಯ ಶುಭಕಾರ್ಯಕ್ರಮಗಳಿಗೆ ಕರೆಸುತ್ತಾರೆ ಎನ್ನುವ ಮಾತುಗಳು ಆಗಾಗ್ಗೆ ಕೇಳಿಬರುತ್ತದೆ. ಸದ್ಯ ಅಂಬಾನಿ ಮಗನ ಮದುವೆ ವಿಚಾರದಲ್ಲೂ ಇದೇ ಆಗಿರೋದು ಎಂದು ಕೆಲವರು ಹೇಳುತ್ತಿದ್ದಾರೆ.
ಇದೇ ವಿಚಾರದ ಬಗ್ಗೆ ಕೆಲ ದಿನಗಳ ಹಿಂದೆ ತೆಲುಗು ನಟ ನಾಗಾರ್ಜುನ ಮಾತನಾಡಿದ್ದರು. ಸಂದರ್ಶನದಲ್ಲಿ ಈ ಬಗ್ಗೆ ಓಪನ್ ಅಪ್ ಆಗಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಹಣವಂತರು ಸಿನಿಮಾ ಸೆಲೆಬ್ರಿಟಿಗಳಿಗೆ ಹಣ ಕೊಟ್ಟು ಅತಿಥಿಗಳಾಗಿ ಆಹ್ವಾನಿಸುತ್ತಿದ್ದಾರೆ. ಇದಕ್ಕಾಗಿ ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳು ಕೋಟಿಗಟ್ಟಲೆ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
"ಪ್ರಪಂಚ ಹೇಗಿದೆ ಅಂದ್ರೆ, ಮದುವೆಗಳಿಗೆ ಹಣ ಕೊಟ್ಟು ಕರೆಸುತ್ತಿದ್ದಾರೆ ಅಂದ್ರೆ, ನಾನು ಇನ್ನೇನು ಹೇಳಲಿ? ನಮ್ಮ ಮದುವೆಗೆ ಬನ್ನಿ, ಅದಕ್ಕೆ ನಾವು ಹಣ ಕೊಡುತ್ತೇವೆ ಎನ್ನುತ್ತಾರೆ. ನಾನು ಎಂದಿಗೂ ಆ ರೀತಿ ಹೋಗಿಲ್ಲ. ಆದರೆ ನನಗೆ ಅಂತಹ ಪ್ರಪೋಸಲ್ ಬಂದಿದೆ. ನನ್ನನ್ನು ಕೇಳಿದ್ದರು. ಅತಿಥಿಯಾಗಿ ಬನ್ನಿ, 20 ನಿಮಿಷ ಕಳೆಯಿರಿ, ಎಂಟರ್‌ಟೈನ್ ಮಾಡಿ ಹೋಗಿ ಎನ್ನುತ್ತಾರೆ"
"ಇದಕ್ಕಾಗಿ ಎಷ್ಟು ಹಣ ಕೊಡ್ತಾರೆ ಎನ್ನುವುದಕ್ಕೆ ಒಂದು ಮಿತಿಯಿಲ್ಲ. ಬಾಲಿವುಡ್ ಸ್ಟಾರ್ ಕೋಟಿ ಕೋಟಿ ಕೊಡ್ತಾರೆ, ನಮಗೂ ಚೆನ್ನಾಗಿ ಕೊಡ್ತಾರೆ, ಸಕ್ಸಸ್ ಇದ್ದರೆ ಮಾತ್ರ ನಮ್ಮನೆಗೆ ಬರುತ್ತಾರೆ, ಇಲ್ಲವಾದಲ್ಲಿ ತಲೆಕೆಡಿಸಿಕೊಳ್ಳುವುದಿಲ್ಲ. ಆ ರೀತಿ ಹಣ ಪಡೆದು ಹೋಗುವುದರಲ್ಲಿ ತಪ್ಪಿಲ್ಲ. ಅವರೇನು ತಪ್ಪು ಮಾಡುತ್ತಿಲ್ಲವಲ್ಲ" ಎಂದು ನಾಗಾರ್ಜುನ ಹೇಳಿದ್ದರು.
ಮುಖೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಬಂದ ಅತಿಥಿಗಳಿಗೆ ಭಾರೀ ಉಡುಗೊರೆಗಳನ್ನು ಕೊಟ್ಟಿದ್ದಾರೆ. ನಟ ಯಶ್, ಶಾರುಖ್ ಖಾನ್ ಹಾಗೂ ರಣ್‌ವೀರ್ ಸಿಂಗ್ ಸೇರಿದಂತೆ ಹಲವರಿಗೆ 2 ಕೋಟಿ ರೂ. ಮೌಲ್ಯದ ಆಡೆಮಾರ್ಸ್ ಪಿಗೆಟ್ ಕೈ ಗಡಿಯಾರಗಳನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರ ಈಗ ಭಾರೀ ಸದ್ದು ಮಾಡ್ತಿದೆ.


Click it and Unblock the Notifications











