ಯಶ್ ನಿರ್ಮಾಣದ 'ರಾಮಾಯಣ' ಚಿತ್ರದ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ ರಣ್‌ಬೀರ್
ಸ್ಟಾರ್ ನಟರು ಸಿನಿಮಾ ಮಾಡುವ ಸ್ಟೈಲ್ ಬದಲಾಗಿದೆ. ಈಗ ಸಣ್ಣ ಸಿನಿಮಾಗಳನ್ನು ಮಾಡಲು ಜನಪ್ರಿಯ ಕಲಾವಿದರು ಹಿಂದೇಟು ಹಾಕುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಿಗಾಗಿ ಎರಡ್ಮೂರು ವರ್ಷ ವ್ಯಯಿಸುತ್ತಾರೆ. ಹೀಗೆ ಹೋಗಿ ಹಾಗೆ ನಟಿಸಿ ಬರುವುದಿಲ್ಲ. ಜನ ಪರ್ಫೆಕ್ಷನ್ ಕೇಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕಲಾವಿದರು ಹೋಂವರ್ಕ್ ಮಾಡಿ ಸಾಕಷ್ಟು ತರಬೇತಿ ಪಡೆದು ನಟಿಸುತ್ತಿದ್ದಾರೆ.
ಕಳೆದ ವರ್ಷ 'ಅನಿಮಲ್' ಸಿನಿಮಾ ಮಾಡಿ ಗೆದ್ದ ರಣ್‌ಬೀರ್ ಕಪೂರ್ ಇದೀಗ 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಅಧಿಕೃತವಾಗಿ ಸಿನಿಮಾ ಇನ್ನು ಘೋಷಣೆ ಆಗಿಲ್ಲ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು ಒಂದಷ್ಟು ಮೇಕಿಂಗ್ ಫೋಟೊಗಳು ವೈರಲ್ ಆಗಿತ್ತು. ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ನಟ ಯಶ್ ಕೂಡ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಪೌರಾಣಿಕ ಕಥಾಹಂದರದ 'ರಾಮಾಯಣ' ಚಿತ್ರವನ್ನು ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಬಗ್ಗೆ ನಟ ರಣ್‌ಬೀರ್ ಕಪೂರ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ಹೆಸರು ಹೇಳದೇ ಚಿತ್ರಕ್ಕಾಗಿ ತಯಾರಿ ನಡೆಸುತ್ತಿರುವ ಬಗ್ಗೆ ಮಾತನಾಡಿದ್ದಾರೆ.
ನಿಖಿಲ್ ಕಾಮತ್ ಯೂಟ್ಯೂಬ್ ಸಂದರ್ಶನದಲ್ಲಿ ರಣ್‌ಬೀರ್ ಕಪೂರ್ ಭಾಗವಹಿಸಿದ್ದಾರೆ. ಚಿತ್ರದ ಹೆಸರನ್ನು ಉಲ್ಲೇಖಿಸದೇ, ಕೊರಿಯನ್ ಫಿಟ್‌ನೆಸ್ ತರಬೇತುದಾರನಿಂದ ಪಾತ್ರಕ್ಕಾಗಿ ದಿನಕ್ಕೆ ನಾಲ್ಕು ಗಂಟೆಗಳ ತರಬೇತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ನಟನಾಗಿ ತರಬೇತಿಯ ಬಗ್ಗೆ ನನ್ನ ಗ್ರಹಿಕೆ ಬದಲಾಗಿದೆ ಎಂದಿದ್ದಾರೆ.

ಯಾವ ಸಿನಿಮಾ ಎಂದು ಕೇಳಿದ್ದಕ್ಕೆ ಇನ್ನು ಸಿನಿಮಾ ಘೋಷಣೆ ಆಗಿಲ್ಲ ಎಂದು ರಣ್‌ಬೀರ್ ಉತ್ತರಿಸಿದ್ದಾರೆ. ಮಾತು ಮುಂದುವರೆಸಿರುವ ನಟ "ಇದಕ್ಕೂ ಮುನ್ನ ಡಂಬ್ಬೆಲ್ಸ್ ಮತ್ತು ಪುಶ್ಶಿಂಗ್, ಎದೆಯ ಪ್ರೆಸ್ ಹಾಗೂ ಪ್ರೋಟೀನ್ ಎಲ್ಲಾ ಇದ್ದವು. ಈ ಕೊರಿಯನ್ ತರಬೇತುದಾರ ನಿಜಕ್ಕೂ ಸೂಪರ್. ಆತನ ಹೆಸರು ನಾಮ್. ಆತ ನಿಜವಾಗಿಯೂ ನನ್ನ ತರಬೇತಿಯ ಗ್ರಹಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾನೆ. ಆತನೊಂದಿಗೆ ದಿನಕ್ಕೆ 3 ಗಂಟೆ ತರಬೇತಿ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ತಮ್ಮ ರೊಟೀನ್ ಬಗ್ಗೆ ಮಾತನಾಡಿರುವ ರಣ್‌ಬೀರ್ "ಬೆಳಗ್ಗೆ 11ರಿಂದ 1 ಗಂಟೆಯವರೆಗೆ ಫ್ರೀ ಎಕ್ಸರ್‌ಸೈಸ್, ಸ್ಟ್ರೆಚಿಂಗ್ ಮತ್ತು ಕಾರ್ಡಿಯೋ ಮಾಡುತ್ತೇನೆ. ನಂತರ ಮಧ್ಯಾಹ್ನ ಒಂದು ಗಂಟೆ ನಿದ್ದೆ. ಬಳಿಕ ಸಂಜೆ 5 ರಿಂದ 7 ರವರೆಗೆ ತರಬೇತಿ . ಮಷೀನ್, ತೂಕ ಯಾವುದೂ ಇಲ್ಲದೇ ಹೊಸದಾಗಿ ತರಬೇತಿ ನೀಡುತ್ತಿದ್ದಾನೆ.
"ಪುಲ್‌ಅಪ್ಸ್, ಸ್ಕ್ವಾಟ್ಸ್, ಡೆಡ್‌ಲಿಫ್ಟ್ಸ್ ಮತ್ತು ಹ್ಯಾಂಡ್‌ಸ್ಟ್ಯಾಂಡ್ಸ್ ಮತ್ತು ಹೆಡ್‌ಸ್ಟ್ಯಾಂಡ್ಸ್ ಹೆಚ್ಚು ಮಾಡಿಸುತ್ತಿದ್ದಾನೆ. ಇದೆಲ್ಲಾ ನಿಜಕ್ಕೂ ಜಾಸ್ತಿ. ಆದರೆ ನಾನು ಆ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದೇನೆ. ಇದು ಖಂಡಿತವಾಗಿಯೂ ನಾನು ಅತ್ಯಂತ ಸವಾಲಿನದ್ದಾಗಿದೆ. ಇದಕ್ಕೆ ನಾನು ಕಳೆದ ಏಳು ತಿಂಗಳಿನಿಂದ ತಯಾರಿ ನಡೆಸುತ್ತಿರುವುದಕ್ಕಿಂತ ಮತ್ತೊಂದು ಹಂತದ ತಯಾರಿ ಅಗತ್ಯವಿದೆ" ಎಂದು ವಿವರಿಸಿದ್ದಾರೆ.
'ರಾಮಾಯಣ' ಚಿತ್ರದ ಬಜೆಟ್, ಸ್ಟಾರ್‌ಕಾಸ್ಟ್, ಗ್ರಾಫಿಕ್ಸ್ ಎಲ್ಲವೂ ಕುತೂಹಲ ಮೂಡಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವುದು ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಶೀಘ್ರದಲ್ಲೇ ಟೀಸರ್ ಸಮೇತ ಸಿನಿಮಾ ಘೋಷಣೆ ಆಗುವ ಸಾಧ್ಯತೆಯಿದೆ.


Click it and Unblock the Notifications











