"ರಕ್ತ ಹಂಚಿಕೊಂಡವರೆಲ್ಲರೂ ನಮ್ಮ ಜೀವನದಲ್ಲಿ ಇರಬೇಕಾಗಿಲ್ಲ"; ಸಂಜಯ್ ದತ್ ಪುತ್ರಿ ಈ ಪೋಸ್ಟ್ ಮರ್ಮವೇನು?
ನಟ ಸಂಜಯ್ ದತ್ ಪುತ್ರಿ ತ್ರಿಶಾಲಾ ದತ್ ತಮ್ಮ ಪೋಷಕರ ಕುರಿತು ಇತ್ತೀಚೆಗೆ ಹಂಚಿಕೊಂಡಿರುವ ಪೋಸ್ಟ್ ಸದ್ದು ಮಾಡುತ್ತಿದೆ. ಆದರೆ, ಇದೇ ವೇಳೆ ಸಂಜಯ್ ದತ್ ಹಾಗೂ ತ್ರಿಶಾಲಾ ದತ್ ಸಂಬಂಧದ ಕುರಿತು ಹಳೆಯ ನೆನಪೊಂದನ್ನು ಕೆದಕಲಾಗಿದೆ. ಸಂಜಯ್ ದತ್‌ರ ಹಿರಿಯ ಪುತ್ರಿ ತ್ರಿಶಾಲಾ ದತ್, ಸದ್ಯ ನ್ಯೂಯಾರ್ಕ್‌ನಲ್ಲಿ ವಾಸವಾಗಿದ್ದು, ಮನೋವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಕುಟುಂಬದ ಗೌರವ ಕಾಪಾಡುವುದಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ" ಎಂದು ಬರೆದಿದ್ದರು.
ಈ ಪೋಸ್ಟ್ ವೈರಲ್ ಆಗುತ್ತಿದ್ದು, ಇದು ಸಾಮಾನ್ಯ ಸಂದೇಶವೇ ಅಥವಾ ತಮ್ಮ ಕುಟುಂಬದ ಬಗ್ಗೆ ಪರೋಕ್ಷವಾಗಿ ಕಮೆಂಟ್ ಮಾಡಲಾಗುತ್ತಿದೆಯೇ ಎಂದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲವಾದರೂ, ತ್ರಿಶಾಲಾ ದತ್ ತಮ್ಮ ತಂದೆ ಸಂಜಯ್ ದತ್ ಜೊತೆಗಿನ ಬಾಂಧವ್ಯದ ಕುರಿತು ಈ ಹಿಂದೆ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

2012ರಲ್ಲಿ ಸಂದರ್ಶನವೊಂದರಲ್ಲಿ ತ್ರಿಶಾಲಾ ತಮ್ಮ ಬಾಲ್ಯದ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ತ್ರಿಶಾಲಾ ದತ್ ನಟಿಯಾಗುವುದಕ್ಕೆ ಬಯಸುತ್ತಿದ್ದಾರೆ ಎನ್ನುವ ಊಹಾಪೋಹಗಳಿದ್ದವು. ಆದರೆ, ಸಂಜಯ್ ದತ್ ಭೇಟಿಯಾದ ಬಳಿಕ ತ್ರಿಶಾಲಾ ತಮ್ಮ ನಟನೆಯ ಕನಸನ್ನು ಕೈ ಬಿಟ್ಟಿರುವುದಾಗಿ ಹೇಳಿಕೊಂಡಿದ್ದರು.
"ಬೇರೆ ಸ್ಟಾರ್ ಕಿಡ್‌ಗಳಂತೆ ನನಗೆ ಅಪ್ಪ-ಅಮ್ಮನ ಸಹಾಯದಿಂದ ಐಷಾರಾಮಿ ಜೀವನ ನಡೆಸುವುದು ಬೇಕಿಲ್ಲ. ಅಪ್ಪ ಒಂದು ಫೋನ್ ಕಾಲ್ ಮಾಡಿ ಕೆಲಸ ಕೊಡಿಸುವ ಅಗತ್ಯವಿಲ್ಲ. ಅವರ ಸಹಾಯವಿಲ್ಲದೆ ಎಲ್ಲವನ್ನೂ ನಾನೇ ಮಾಡಬೇಕು. ಇದು ಕಷ್ಟ" ಎಂದು ತ್ರಿಶಾಲಾ ಹೇಳಿಕೊಂಡಿದ್ದರು. ಹಾಗೇ "ಶಾರುಖ್ ಖಾನ್‌ಗೂ ಯಾವುದೇ ಸಿನಿಮಾ ಹಿನ್ನೆಲೆಯಿರಲಿಲ್ಲ. ಉದ್ಯಮದಲ್ಲಿ ಸ್ನೇಹಿತರು, ಸಂಬಂಧಗಳಿಲ್ಲ. ಆದರೂ, ಅವರು ತಮ್ಮ ಪ್ರತಿಭೆ ಮತ್ತು ಯಶಸ್ಸು ಗಳಿಸಬೇಕು ಎಂಬ ಆಸಕ್ತಿಯಿಂದಲೇ ಇಷ್ಟೆಲ್ಲ ಸಾಧಿಸಿದ್ದಾರೆ. ಅವರು ಇಷ್ಟು ದೊಡ್ಡ ಸಾಧನೆ ಮಾಡಬೇಕಾದರೆ, ನಾನೂ ಮಾಡಬಹುದು. ಯಾವುದೇ ಕೆಲಸಕ್ಕೆ ಸಂಪೂರ್ಣ ಗಮನ ಕೊಟ್ಟರೆ, ಯಾರಾದರೂ ಏನನ್ನಾದರೂ ಸಾಧಿಸಬಹುದು" ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ತ್ರಿಶಾಲಾ ದತ್ ಇತ್ತೀಚೆಗೆ ಮಾಡಿದ ಪೋಸ್ಟ್‌ನಲ್ಲಿ "ನಿಮ್ಮ ರಕ್ತ ಹಂಚಿಕೊಂಡವರೆಲ್ಲರೂ ನಮ್ಮ ಜೀವನದಲ್ಲಿ ಇರಬೇಕಾಗಿಲ್ಲ. ಕೆಲವೊಮ್ಮೆ, ನಮ್ಮನ್ನು ಮಾನಸಿಕವಾಗಿ ಕುಗ್ಗಿಸುವ, ಅಮಾನ್ಯಗೊಳಿಸುವ, ನಿರ್ಲಕ್ಷಿಸುವ ಜನರು ಕುಟುಂಬ ಎಂಬ ಟೈಟಲ್ ಅನ್ನು ಬಳಸಿಕೊಳ್ಳುತ್ತಾರೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇದರ ಜೊತೆಗೆ "ನಿಮ್ಮ ಮನಃಶಾಂತಿಯನ್ನು ಕಾಪಾಡಿಕೊಳ್ಳುವ ಹಕ್ಕು ನಿಮಗಿದೆ. ಕುಟುಂಬದ ಗೌರವ ಉಳಿಸುವುದಕ್ಕಿಂತ ನಿಮ್ಮ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಹಕ್ಕು ನಿಮಗಿದೆ. ಏಕೆಂದರೆ ಕುಟುಂಬ ಎನ್ನುವುದು ದುರ್ಬಳಕೆ, ಕುತಂತ್ರ ಅಥವಾ ಅಪರಾಧಪ್ರಜ್ಞೆ ಮೂಡಿಸಲು ಇರುವ ಮುಕ್ತ ಅವಕಾಶವಲ್ಲ" ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
"ಯಾರು ನಿಮ್ಮನ್ನು ನೋಯಿಸುತ್ತಾರೋ, ಅವರನ್ನು ನಮ್ಮೊಳಗೆ ಬಿಟ್ಟುಕೊಳ್ಳಬೇಕಿಲ್ಲ. ಅವರು ನಿಮ್ಮನ್ನು ಬೆಳೆಸಿದವರೇ ಆಗಿರಬಹುದು. ಕುಟುಂಬವು ಸಮಾಜದಲ್ಲಿ ಹೇಗೆ ಕಾಣುತ್ತದೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಪೋಷಕರು, ಅದು ನಿಜವಾಗಿ ಹೇಗಿದೆ ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದಾದರೇ, ಅದೊಂದು ದೊಡ್ಡ ಸಮಸ್ಯೆಯೇ" ಎಂದು ತ್ರಿಶಾಲಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ತ್ರಿಶಾಲಾ ಅವರ ಈ ಇನ್‌ಸ್ಟಾಗ್ರಾಮ್ ಸ್ಟೋರಿ ಈಗ ಲಭ್ಯವಿಲ್ಲ. ಇನ್ನು ತ್ರಿಶಾಲಾ ದತ್, ಸಂಜಯ್ ದತ್ ಅವರ ಮೊದಲ ಪತ್ನಿ ರಿಚಾ ಶರ್ಮಾ ಅವರ ಪುತ್ರಿ. ರಿಚಾ ಶರ್ಮಾ ೧996ರಲ್ಲಿ ನಿಧನರಾದರು. ತಾಯಿಯ ಸಾವಿನ ನಂತರ, ತ್ರಿಶಾಲಾ ಅಮೆರಿಕಾದಲ್ಲಿ ತಮ್ಮ ಅಜ್ಜಿಯ ಬಳಿ ಬೆಳೆದರು. ನಂತರ ಸಂಜಯ್ ದತ್ 1997ರಲ್ಲಿ ರಿಯಾ ಪಿಳ್ಳೈ ಅವರನ್ನು ವಿವಾಹವಾದರು. ಆದರೆ, ಅವರು ಸಂಜಯ್ ದತ್ ಅವರಿಂದ ವಿಚ್ಛೇದನ ಪಡೆದರು. ಸದ್ಯ, ಸಂಜಯ್ ದತ್ ಮಾನ್ಯತಾ ದತ್ ಅವರನ್ನು ವಿವಾಹವಾಗಿದ್ದು, ಅವರಿಗೆ ಶಹರಾನ್ ಮತ್ತು ಇಕ್ರಾ ಎಂಬ ಅವಳಿ ಮಕ್ಕಳಿದ್ದಾರೆ.


Click it and Unblock the Notifications











