ಲತಾ ಮಂಗೇಶ್ಕರ್ ಮೃತದೇಹಕ್ಕೆ ಉಗಿದರೇ ಶಾರುಖ್?
ಭಾರತದ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ನಿನ್ನೆಯಷ್ಟೆ ನಿಧನರಾದರು. ಲತಾ ದೀದಿಯ ನಿಧನಕ್ಕೆ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರು ಕಣ್ಣೀರು ಹಾಕಿದ್ದಾರೆ.
ನಿನ್ನೆ ನಡೆದ ಲತಾ ಮಂಗೇಶ್ಕರ್ ಅಂತ್ಯಕ್ರಿಯೆಯಲ್ಲಿ ಬಾಲಿವುಡ್ ಸ್ಟಾರ್‌ಗಳಾದ ಶಾರುಖ್ ಖಾನ್, ಅಮೀರ್ ಖಾನ್, ರಣ್ಬೀರ್ ಕಪೂರ್ ಸೇರಿದಂತೆ ಇನ್ನೂ ಹಲವರು ಭಾಗವಹಿಸಿದ್ದರು. ಸಿನಿಮಾ ರಂಗದ ಸೆಲೆಬ್ರಿಟಿಗಳು ಮಾತ್ರವಲ್ಲ ರಾಜಕೀಯ, ಕ್ರಿಕೆಟ್ ರಂಗದ ಹಲವು ಸೆಲೆಬ್ರಿಟಿಗಳು ಲತಾ ದೀದಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಲತಾ ಮಂಗೇಶ್ಕರ್ ಅವರ ಅಂತ್ರಕ್ರಿಯೆಯ ವಿಡಿಯೋ ಹಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಭಾವಪೂರ್ಣ ಅಂತಿಮ ವಿದಾಯವನ್ನು ದೇಶದ ಅತ್ಯುತ್ತಮ ಗಾಯಕಿಗೆ ಹೇಳಲಾಯಿತು. ಆದರೆ ಅಂತ್ಯಕ್ರಿಯೆಯ ವೇಳೆ ಶಾರುಖ್ ಖಾನ್ ಲತಾಜಿಯ ಮೃತದೇಹದ ಮೇಲೆ ಉಗಿದಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದು, ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.

ನಿನ್ನೆ ಲತಾ ದೀದಿಯ ಅಂತ್ಯಸಂಸ್ಕಾರದಲ್ಲಿ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆಗೆ ಭಾಗವಹಿಸಿದ್ದ ನಟ ಶಾರುಖ್ ಖಾನ್ ಲತಾ ದೀದಿಗಾಗಿ ದುವಾ (ಪ್ರಾರ್ಥನೆ) ಮಾಡಿದರು. ಪೂಜಾ ದದ್ಲಾನಿ ಕೈ ಮುಗಿದು ತಲೆ ಬಾಗಿ ನಮಸ್ಕರಿಸಿದರೆ, ಶಾರುಖ್ ಖಾನ್ ದುವಾ ಮಾಡಿ ಮಾಸ್ಕ್ ತೆಗೆದ ಉಗುಳಿದಂತೆ ಕಾಣುವ ವರ್ತನೆಯೊಂದನ್ನು ಮಾಡಿದರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ ನಿಜವಾಗಿಯೂ ಶಾರುಖ್ ಖಾನ್ ಲತಾ ಮಂಗೇಶ್ಕರ್ ಅವರ ಮೃತ ದೇಹ ಅಥವಾ ಅಸ್ಥಿಯ ಮೇಲೆ ಉಗುಳಲಿಲ್ಲ. ಬದಲಿಗೆ ಬಾಯಿಂದ ಗಾಳಿ ಊದಿದರು. ಇಸ್ಲಾಂ ಧರ್ಮದಲ್ಲಿ ಇದೊಂದು ಪದ್ಧತಿ. ಮೃತರು ಮುಂದಿನ ಜನ್ಮದಲ್ಲಿ ದೇವರ ಆಶೀರ್ವಾದದಿಂದ ಮತ್ತೆ ಜನಿಸಲಿ ಎಂದು ಕೋರುವ, ಪ್ರಾರ್ಥಿಸುವ ಪದ್ಧತಿ ಇದು. ಒಳ್ಳೆಯ ಉದ್ದೇಶದಿಂದ ಶಾರುಖ್ ಖಾನ್ ಮಾಡಿದ ಕಾರ್ಯವನ್ನು ತಪ್ಪಾಗಿ ಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಹಲವರು ಶಾರುಖ್ ಅನ್ನು ಮೂದಲಿಸಿದ್ದಾರೆ.
ಶಾರುಖ್ ಖಾನ್‌ಗೆ ಲತಾ ಮಂಗೇಶ್ಕರ್ ಅವರ ಬಳಿ ಆತ್ಮೀಯತೆ ಇತ್ತು. ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಪಾಲ್ಗೊಂಡಿದ್ದರು. ಶಾರುಖ್ ಖಾನ್ ಮಾತ್ರವೇ ಅಲ್ಲ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅಮಿರ್ ಖಾನ್, ನರೇಂದ್ರ ಮೋದಿ ಇನ್ನೂ ಹಲವರೊಟ್ಟಿಗೆ ಆತ್ಮೀಯ ಭಾವನ್ನು ಲತಾ ಮಂಗೇಶ್ಕರ್ ಹೊಂದಿದ್ದರು.
ಜನವರಿ 08 ರಂದು ಕೋವಿಡ್ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಲತಾ ಮಂಗೇಶ್ಕರ್ ದಾಖಲಾಗಿದ್ದು, ಸತತ 28 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ನಿನ್ನೆ ಲತಾ ಅವರು ಕೊನೆ ಉಸಿರೆಳೆದರು. ಲತಾ ಅವರ ನಿಧನದ ಕಾರಣ ದೇಶದಲ್ಲಿ ಎರಡು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.


Click it and Unblock the Notifications











