₹65 ಕೋಟಿ ಹಗರಣದಲ್ಲಿ ಸಿಲುಕಿದ,ರಮ್ಯಾ ಜೊತೆ ಅಭಿನಯಿಸಿದ್ದ ಖ್ಯಾತ ನಟ ; ಪೊಲೀಸರಿಂದ ವಿಚಾರಣೆ..!
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಚಿತ್ರರಂಗದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಹೇಗಾದರೂ ಮಾಡಿ ಬೇಗ ದುಡ್ಡು ಮಾಡಿಬಿಡಬೇಕೆನ್ನುವ ಹಪಾಹಪಿ ಇಲ್ಲಿ ಅನೇಕರದ್ದು. ಹೀಗಾಗಿಯೇ ಹಣದಾಸೆಗೆ ಹಲವರು ಇಲ್ಲಿ ಅಡ್ಡದಾರಿಯನ್ನು ಹಿಡಿಯುತ್ತಾರೆ. ಮಾಡಬಾರದ ಕೆಲಸ ಮಾಡುತ್ತಾರೆ.
ಸದ್ಯ ಈ ಸಾಲಿಗೆ ಕನ್ನಡದಲ್ಲಿ ಮೋಹಕ ತಾರೆ ರಮ್ಯಾ ಎದುರು ನಾಯಕನಾಗಿ ಜ್ಯೂಲಿ ಚಿತ್ರದಲ್ಲಿ ಅಭಿನಯಿಸಿದ್ದ ಬಾಲಿವುಡ್‌ನ ಚೆಲುವ ಡಿನೋ ಮೋರಿಯಾ ಕೂಡ ಸೇರಿಕೊಂಡಿದ್ದಾರೆ ಎನ್ನುವ ಅನುಮಾನ ಮುಂಬೈ ಪೊಲೀಸರಿಗೆ ಬಂದಿದೆ.

ಹೌದು, ಮುಂಬೈ ಪೊಲೀಸರ್ ಆರ್ಥಿಕ ಅಪರಾಧ ವಿಭಾಗ (EOW) ಮಿಥಿ ನದಿಯ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದಂತೆ ಡಿನೋ ಮೋರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿದೆ. 65 ಕೋಟಿಗೂ ಅಧಿಕ ಹಗರಣದ ವಾಸನೆ ಈ ಮಿಥಿ ನದಿ ಸುತ್ತ ಮುತ್ತ ಬಂದಿದ್ದು ಡಿನೋ ಮೋರಿಯಾ ಅವರದ್ದು ಕೂಡ ಈ ಹಗರಣದಲ್ಲಿ ಕೈವಾಡ ಇದೆ ಎನ್ನುವ ಶಂಕೆ ಮುಂಬೈ ಪೊಲೀಸ್ ಆರ್ಥಿಕ ವಿಭಾಗಕ್ಕೆ ಇದೆ.
ಹೀಗಾಗಿಯೇ ಡಿನೋ ಮೋರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿರುವ ಆರ್ಥಿಕ ವಿಭಾಗದ ಅಧಿಕಾರಿಗಳು ಡಿನೋ ಮೋರಿಯಾ ಸಹೋದರ ಸಂಟಿನೋ ಮೋರಿಯಾ ಅವರನ್ನು ಕೂಡ ಪ್ರಶ್ನೆ ಮಾಡಿದ್ದಾರೆ. ಅಂದ್ಹಾಗೇ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ( BMC ) ಕೊಚ್ಚಿ ಮೂಲದ ಮ್ಯಾಟ್‌ಪ್ರಾಪ್ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ದಿಂದ ಯಂತ್ರೋಪಕರಣಗಳನ್ನು ಖರೀದಿ ಮಾಡಿದ್ದರು.
ಈ ಸಮಯದಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ನ ಅಧಿಕಾರಿಗಳು ಮ್ಯಾಟ್ ಪ್ರಾಪ್ ಟೆಕ್ನಿಕಲ್ ಸರ್ವೀಸ್‌ನ ಕದಮ್ ಮತ್ತು ಜಯ್ ಜೋಶಿ ಅವರ ಜೊತೆ ಸೇರಿ ಹೆಚ್ಚಿನ ಬಿಲ್ ಮಾಡಿದ್ಧಾರೆ ಎಂದು ಆರೋಪವನ್ನು ಮಾಡಲಾಗಿದೆ. ಇವರ ಜೊತೆ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್‌ನ ಸ್ಟಾರ್ಮ್ ವಾಟರ್ ಡ್ರೈನ್ಸ್ ಇಲಾಖೆಯ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಮುಂಬೈ ಆರ್ಥಿಕ ವಿಭಾಗಕ್ಕೆ ಇದೆ.
ಮುಂಬೈ ಆರ್ಥಿಕ ವಿಭಾಗದ ಅಧಿಕಾರಿಗಳ ಈ ಅನುಮಾನದಿಂದ ಮುಂಬೈ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುತ್ತಿಗೆದಾರರ ಮನೆ ಮತ್ತು ಕಛೇರಿಗಳ ಮೇಲೆ ದಾಳಿ ಮಾಡಿತ್ತು. ಐದು ಗುತ್ತಿಗೆದಾರರು, ಮೂವರು ಮಧ್ಯವರ್ತಿಗಳು ಮತ್ತು ಇಬ್ಬರು ಕಂಪನಿಯ ಅಧಿಕಾರಿಗಳು ಸೇರಿ 13ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿತ್ತು.
ಈ ಸಮಯದಲ್ಲಿ ಈ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯೊಬ್ಬನ ಜೊತೆ ಡಿನೋ ಮೋರಿಯಾ ಆತ್ಮೀಯವಾದ ಸಂಬಂಧವನ್ನು ಹೊಂದಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಸದ್ಯ ಡಿನೋ ಮೋರಿಯಾ ಅವರನ್ನು ಮುಂಬೈ ಪೊಲೀಸರ ಆರ್ಥಿಕ ವಿಭಾಗದ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.


Click it and Unblock the Notifications











