ತಿರುಪತಿಯಲ್ಲಿ ಕಿಸ್, ಹಗ್: ಕೃತಿಗೆ ಸ್ವಲ್ಪವೂ ಪರಿಜ್ಞಾನ ಇಲ್ಲ ಎಂದು ರಾಮಾಯಣ ಧಾರಾವಾಹಿ ನಟಿ ಆಕ್ರೋಶ
ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದೆ. ಇತ್ತೀಚೆಗೆ ತಿರುಪತಿ ದೇವಸ್ಥಾನದ ಆವರಣದಲ್ಲಿ ನಿರ್ದೇಶಕ ಓಂ ರಾವುತ್ ಚಿತ್ರದ ನಾಯಕಿ ಕೃತಿ ಸನೂನ್‌ರನ್ನು ತಬ್ಬಿ ಮುತ್ತು ಕೊಟ್ಟಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕರೂ ಸೇರಿದಂತೆ ಹಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ರಾಮಾಯಣ ಕಾವ್ಯ ಆಧರಿಸಿ 'ಆದಿಪುರುಷ್' ಸಿನಿಮಾ ಕಟ್ಟಿಕೊಡಲಾಗಿದೆ. ಜೂನ್ 16ಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದರೆ ಸೀತೆಯಾಗಿ ಕೃತಿ ಸನೂನ್ ಮಿಂಚಿದ್ದಾರೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಈ ಪೌರಾಣಿಕ ಸಿನಿಮಾ ಸಿದ್ಧವಾಗಿದೆ. ಮಂಗಳವಾರ ತಿರುಪತಿಯಲ್ಲಿ ಚಿತ್ರದ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಬುಧವಾರ ಚಿತ್ರತಂಡ ತಿರುಮಲ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದಿದ್ದರು. ಇದೇ ವೇಳೆ ನಟಿ ಕೃತಿಗೆ ಬೀಳ್ಕೊಡುವ ಮುನ್ನ ಓಂ ರಾವುತ್ ವರ್ತನ್ ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು.

ದೇವಸ್ಥಾನದ ಆವರಣದಲ್ಲಿ ಈ ರೀತಿಯ ವರ್ತನೆ ಎಷ್ಟು ಸರಿ ಎಂದು ಕೆಲವರು ಕಿಡಿಕಾರುತ್ತಿದ್ದಾರೆ. 90ರ ದಶಕದಲ್ಲಿ ರಮಾನಂದ ಸಾಗರ್ ನಿರ್ದೇಶನದ ರಾಮಾಯಣ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗಿ ವೀಕ್ಷಕರ ಗಮನ ಸೆಳೆದಿತ್ತು. ಈ ಧಾರಾವಾಹಿಯಲ್ಲಿ ಸೀತೆಯಾಗಿ ದೀಪಿಕಾ ಚಿಖಾಲಿಯಾ ನಟಿಸಿದ್ದರು. ದೇವಸ್ಥಾನದ ಆವರಣದಲ್ಲಿ ಕೃತಿ ಹಾಗೂ ಓಂ ರಾವುತ್ ವರ್ತನೆ ಬಗ್ಗೆ ದೀಪಿಕಾ ಈಗ ಪ್ರತಿಕ್ರಿಯಿಸಿದ್ದಾರೆ.
ಕನಿಷ್ಠ ಪರಿಜ್ಞಾನ ಕೂಡ ಇಲ್ಲ
"ಈ ಜನರೇಷನ್ ನಟಿಯರಲ್ಲಿ ಇದೇ ದೊಡ್ಡ ಸಮಸ್ಯೆ. ಯಾವ ರೀತಿಯ ಪಾತ್ರದಲ್ಲಿ ನಾವು ನಟಿಸಿದ್ದೇವೆ ಎನ್ನುವ ಕನಿಷ್ಠ ಪರಿಜ್ಞಾನ ಕೂಡ ಅವರಿಗೆ ಇರುವುದಿಲ್ಲ. ಸೀತಾ ತರಹದ ಪಾತ್ರ ಮಾಡುವಾಗ ಎಷ್ಟು ಲೀನ ಆಗಬೇಕು ಎಂಬುದು ಗೊತ್ತಿಲ್ಲ. ಇಂತಹವರು ಸೀತಾ ಪಾತ್ರದಲ್ಲಿ ನಟಿಸಿದರೆ ಅದನ್ನು ಅವರು ಜಸ್ಟ್ ಒಂದು ಪಾತ್ರವಾಗಿ ರಾಮಾಯಣವನ್ನು ಕೇವಲ ಸಿನಿಮಾವಾಗಿ ನೋಡುತ್ತಾರೆ. ಆ ಪಾತ್ರದಲ್ಲಿ ಅವರಿಗೆ ಯಾವ ರೀತಿಯ ಎಮೋಷನ್ ಇರುವುದಿಲ್ಲ"

ಕೃತಿ ತನ್ನನ್ನು ಸೀತೆ ಎಂದು ಭಾವಿಸಿಲ್ಲ
"ಶೂಟಿಂಗ್ ಮುಗಿದರೆ ಒಂದು ಪ್ರಾಜೆಕ್ಟ್ ಮುಗೀತು ಎಂದುಕೊಳ್ಳುತ್ತಾರೆ. ಕೃತಿ ಸನೂನ್ ಕೂಡ ಈ ಜನರೇಶನ್ ನಟಿ ಆದ್ದರಿಂದ ಹಾಗೆಯೇ ವರ್ತಿಸಿದ್ದಾಳೆ. ಮುತ್ತು ಕೊಡುವುದು, ಹಗ್ ಮಾಡುವುದು ಮಾತ್ರ ಈಗ ಒಳ್ಳೆಯ ಸಂಸ್ಕೃತಿ ಎಂದು ಈ ಕಾಲದ ನಟಿ, ನಟಿಯರು ಅಂದುಕೊಂಡಿದ್ದಾರೆ. 'ಆದಿಪುರುಷ್' ಚಿತ್ರದಲ್ಲಿ ಸೀತಾಯಾಗಿ ಕೃತಿ ನಟಿಸಿದ್ದಾಳೆ. ಆದರೆ ಆಕೆ ತನ್ನನ್ನು ಸೀತೆ ಎಂದು ಭಾವಿಸಿಲ್ಲ" ಅಂತ ದೀಪಿಕಾ ಹೇಳಿದ್ದಾರೆ.
ನಮ್ಮನ್ನು ದೇವರಂತೆ ನೋಡ್ತಿದ್ರು
"ನಮ್ಮ ಕಾಲದಲ್ಲಿ ಆ ರೀತಿ ಇರಲಿಲ್ಲ. ನಾನು ಕೂಡ ಸೀತಾಮಾತೆ ಪಾತ್ರದಲ್ಲಿ ನಟಿಸಿದ್ದೀನಿ ಅಲ್ಲವೇ, ನಾನು ಆ ಪಾತ್ರದಲ್ಲಿ ಸಂಪೂರ್ಣವಾಗಿ ಜೀವಿಸಿದ್ದೆ. ಆ ಪಾತ್ರವೇ ನಾನಾಗಿ ಹೋಗಿದ್ದೆ. ಕೊನೆಪಕ್ಷ ಸೆಟ್‌ನಲ್ಲಿ ಕೂಡ ನಮ್ಮನ್ನು ಹೆಸರೇಳಿ ಕರೆಯುತ್ತಿರಲಿಲ್ಲ. ನಮ್ಮನ್ನು ನಿಜವಾದ ದೇವರು ಎಂದೇ ಭಾವಿಸಿದ್ದರು. ಆ ಪಾತ್ರ ಮಾಡುವಾಗ ಬಹಳ ಮಂದಿ ನಮ್ಮ ಪಾದಗಳಿಗೆ ಸಮಸ್ಕಾರ ಮಾಡುತ್ತಿದ್ದರು. ದೇವರೇ ಸ್ವತಃ ಬಂದರು ಎಂಬಂತೆ ಭಕ್ತಿಭಾವದಿಂದ ಗೌರವಿಸುತ್ತಿದ್ದರು. ಆದ್ದರಿಂದ ನಾವು ಕೂಡ ಜನರನ್ನು ನೋಯುಸುವಂತೆ ಎಂದು ನಡೆದುಕೊಳ್ಳಲಿಲ್ಲ" ಎಂದು ದೀಪಿಕಾ ಟಾಂಗ್ ಕೊಟ್ಟಿದ್ದಾರೆ.
ನಿರೀಕ್ಷೆ ಹುಟ್ಟುಹಾಕಿದ 'ಆದಿಪುರುಷ್'
ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ 'ಆದಿಪುರುಷ್' ಚಿತ್ರವನ್ನು ತ್ರಿಡಿಯಲ್ಲಿ ಪ್ರೇಕ್ಷಕರ ಮುಂದೆ ತರಲಾಗ್ತಿದೆ. ಕಳೆದ ವರ್ಷ ಬಿಡುಗಡೆಯಾದ ಟೀಸರ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ತಪ್ಪಿನ ಅರಿವಾಗಿ ಚಿತ್ರತಂಡ ಮತ್ತಷ್ಟು ಸಮಯ ತಗೆದುಕೊಂಡು ರೀವರ್ಕ್ ಮಾಡಿ ಚಿತ್ರವನ್ನು ಚೆಂದಗಾಣಿಸುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ಬಂದ ಚಿತ್ರದ 2 ಟ್ರೈಲರ್ ಹಾಗೂ ಸಾಂಗ್ಸ್ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದೆ.


Click it and Unblock the Notifications











