ಎಲ್ಲಿಗೆ ಬಂತು ಟೈಗರ್ ಶ್ರಾಫ್ 'ಬಾಘಿ- 4'? ಬಾಲಿವುಡ್ ಎಂಟ್ರಿ ಬಗ್ಗೆ ಎ. ಹರ್ಷ ಮಾತು
ಕನ್ನಡ ಕಲಾವಿದರು, ತಂತ್ರಜ್ಞರು ಬಹಳ ಹಿಂದಿನಿಂದಲೂ ಪರಭಾಷೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಆ ಪ್ರಮಾಣ ಹೆಚ್ಚಾಗುತ್ತಿದೆ. ಬೇರೆ ಭಾಷೆಯ ಕಲಾವಿದರು ಕನ್ನಡಕ್ಕೆ ಬರುವುದು ಅದೇ ರೀತಿ ಕನ್ನಡದ ಪ್ರತಿಭೆಗಳು ಕಾಲಿವುಡ್, ಟಾಲಿವುಡ್, ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ.
ಸ್ಯಾಂಡಲ್‌ವುಡ್ ನಿರ್ದೇಶಕರು ಒಬ್ಬೊಬ್ಬರಾಗಿ ಬೇರೆ ಭಾಷೆಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ಈಗಾಗಲೇ 'ಸಲಾರ್' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದಾರೆ. ಜ್ಯೂ. ಎನ್‌ಟಿಆರ್ ಜೊತೆ ಹೊಸ ಸಿನಿಮಾ ಆರಂಭಿಸಿದ್ದಾರೆ. ಎ. ಹರ್ಷ ಕಳೆದ ವರ್ಷ ತೆಲುಗಿನ 'ಭೀಮ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅಲ್ಲಿಂದ ನೇರವಾಗಿ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದರು.

ಸದ್ಯ ಟೈಗರ್ ಶ್ರಾಫ್ ನಟನೆಯ 'ಬಾಘಿ- 4' ಚಿತ್ರವನ್ನು ನಿರ್ದೇಶಕ ಎ. ಹರ್ಷ ಕಟ್ಟಿಕೊಡುತ್ತಿದ್ದಾರೆ. ಅದಕ್ಕಾಗಿ ಮುಂಬೈನಲ್ಲೇ ಬೀಡು ಬಿಟ್ಟಿದ್ದಾರೆ. ಬಾಲಿವುಡ್ ಸಿನಿಮಾ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ 'ಬಾಘಿ- 4' ಸಿನಿಮಾ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಮತ್ತೆ ಕನ್ನಡ ಸಿನಿಮಾ ನಿರ್ದೇಶನಕ್ಕೆ ಪ್ಲ್ಯಾನ್ ಮಾಡುತ್ತಿರುವುದಾಗಿ ಹೇಳಿದ್ದಾರೆ.
'ಬಾಘಿ' ಸರಣಿ ಸಿನಿಮಾಗಳಲ್ಲಿ ಟೈಗರ್ ಶ್ರಾಫ್ ಅಬ್ಬರಿಸುತ್ತಾ ಬರ್ತಿದ್ದಾರೆ. ದಕ್ಷಿಣದ ಸಿನಿಮಾಗಳಿಂದ ಪ್ರೇರಣೆಗೊಂಡು ಈ ಸರಣಿ ಚಿತ್ರಗಳನ್ನು ಕಟ್ಟಿಕೊಡಲಾಗುತ್ತಿದೆ. 2016ರಲ್ಲಿ ಬಂದಿದ್ದ 'ಬಾಘಿ' ಚಿತ್ರಕ್ಕೆ ಶಬ್ಬಿರ್ ಖಾನ್ ಆಕ್ಷನ್ ಕಟ್ ಹೇಳಿದ್ದರು. ಬಳಿಕ ಇನ್ನೆರಡು ಚಿತ್ರಗಳನ್ನು ಅಹಮದ್ ಖಾನ್ ಕಟ್ಟಿಕೊಟ್ಟಿದ್ದರು. 4 ಸಿನಿಮಾ ಜವಾಬ್ದಾರಿ ಕನ್ನಡ ನಿರ್ದೇಶಕನ ಹೆಗಲೇರಿದೆ.
"ಈಗಾಗಲೇ ಶೇ. 75ರಷ್ಟು ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಸೆಪ್ಟೆಂಬರ್ 5ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಘೋಷಿಸಿದ ದಿನವೇ ರಿಲೀಸ್ ಡೇಟ್ ಹೇಳಿದ್ದೆವು. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ದಿನ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಬಹಳ ಚೆನ್ನಾಗಿ ಸಿನಿಮಾ ಮೂಡಿ ಬರುತ್ತಿದೆ" ಎಂದು ನಿರ್ದೇಶಕ ಎ. ಹರ್ಷ ಹೇಳಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲೇ ಬಹಳ ದೊಡ್ಡ ಚಿತ್ರವನ್ನು ಎ. ಹರ್ಷ ಕೈಗೆತ್ತಿಕೊಂಡಿದ್ಧಾರೆ. ದೊಡ್ಡ ಜವಾಬ್ದಾರಿ ಅವರ ಮೇಲಿದೆ. "ತೆಲುಗು ಚಿತ್ರ ಮಾಡುತ್ತಿದ್ದಾಗಲೇ 'ಬಾಘಿ- 4' ಅವಕಾಶ ಸಿಕ್ಕಿತ್ತು. ಇದು ಒಳ್ಳೆಯ ಬೆಳವಣಿಗೆ ಅಲ್ಲವೇ? ನಾಡಿಯಾಡ್ವಾಲಾ ಗ್ರಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ದೊಡ್ಡ ಕಂಪನಿ. ಟೈಗರ್ ಶ್ರಾಫ್, ಸಂಜಯ್ ದತ್ ನಟಿಸುತ್ತಿರುವ ಸಿನಿಮಾ. ಒಳ್ಳೆಯ ಅವಕಾಶ, ಒಳ್ಳೆ ಕಥೆ ಇತ್ತು. ಹಾಗಾಗಿ ಒಪ್ಪಿ ಮಾಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
"ಕಥೆ ನನ್ನದಲ್ಲ. ಆದರೆ ಚಿತ್ರಕಥೆ ಕೊಂಚ ಮಾಡಿ ನಿರ್ದೇಶನದ ಜವಾಬ್ದಾರಿ ಮಾತ್ರ ವಹಿಸಿಕೊಂಡಿದ್ದೇನೆ. ಮುಖ್ಯವಾಗಿ ಹಾಡುಗಳ ಚಿತ್ರೀಕರಣ ಬಾಕಿಯಿದೆ. ಇನ್ನುಳಿದಂತೆ ಬಹುತೇಕ ಸಿನಿಮಾ ಮುಗಿಯುತ್ತಾ ಬರುತ್ತಿದೆ. ಇದೊಂದು ಎಮೋಷನಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಆದಷ್ಟು ಬೇಗ ಕನ್ನಡ ಸಿನಿಮಾ ಶುರು ಮಾಡಬೇಕು. ಅದಕ್ಕಾಗಿ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ" ಎಂದು ಎ. ಹರ್ಷ ವಿವರಿಸಿದ್ದಾರೆ.
ಡ್ಯಾನ್ಸರ್ ಆಗಿದ್ದ ಎ. ಹರ್ಷ ಬಳಿಕ ಕೊರಿಯೋಗ್ರಫರ್ ಆಗಿದ್ದರು. ಕನ್ನಡದ ಇತ್ತೀಚಿನ ಬಹುತೇಕ ಎಲ್ಲಾ ಸ್ಟಾರ್ ನಟ, ನಟಿಯರನ್ನು ಹರ್ಷ ಕುಣಿಸಿದ್ದಾರೆ. 2007ರಲ್ಲಿ 'ಗೆಳೆಯಾ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಬಳಿಕ 'ಬಿರುಗಾಳಿ', 'ಚಿಂಗಾರಿ' ರೀತಿಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಶಿವಣ್ಣ ನಟಿಸಿದ್ದ 'ಭಜರಂಗಿ' ದೊಡ್ಡ ಬ್ರೇಕ್ ಕೊಟ್ಟಿತ್ತು. 'ಅಂಜನಿಪುತ್ರ', 'ಭಜರಂಗಿ- 2' ಹಾಗೂ 'ವೇದ' ಚಿತ್ರಗಳ ಬಳಿಕ ತೆಲುಗು ಸಿನಿಮಾ ಅವಕಾಶ ಅರಸಿ ಬಂದಿತ್ತು. ಹೈದರಾಬಾದ್‌ನಿಂದ ನೇರವಾಗಿ ಮುಂಬೈ ಫ್ಲೈಟ್ ಹತ್ತಿದ್ದರು.
ಅಂದಹಾಗೆ 'ಬಾಘಿ- 4' ಚಿತ್ರಕ್ಕೆ ರಜತ್ ಅರೋರಾ ಹಾಗೂ ಸಾಜಿದ್ ನಾಡಿಯಾದ್ವಾಲಾ ಕಥೆ ಬರೆದಿದ್ದಾರೆ. ಅಂದಹಾಗೆ ಕೆಲ ವರ್ಷಗಳಿಂದ ಡ್ಯಾನ್ಸ್ ಕೊರಿಯೋಗ್ರಫಿ ಮಾಡುವುದನ್ನು ಹರ್ಷ ಕಮ್ಮಿ ಮಾಡಿದ್ಧಾರೆ. ಸಿನಿಮಾ ನಿರ್ದೇಶನಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಕೂಡ ಯಾವುದೇ ಸಾಂಗ್ ಕೊರಿಯೋಗ್ರಫಿ ಮಾಡುತ್ತಿಲ್ಲ. ನಿರ್ದೇಶಕರಾಗಿ ಹೆಚ್ಚು ಶ್ರಮ ಹಾಕುತ್ತಿದ್ದಾರೆ.
ಈ ಹಿಂದೆ ಬಂದಿದ್ದ 'ಬಾಘಿ' ಸರಣಿ ಸಿನಿಮಾಗಳಿಗಿಂತ ಬಹಳ ವಿಭಿನ್ನವಾಗಿ ಈ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಇದು ಯಾವುದೇ ಸಿನಿಮಾ ರೀಮೆಕ್ ಅಲ್ಲ. ಆಕ್ಷನ್ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. ಬಾಲಿವುಡ್ ಮಸಲ್‌ಮ್ಯಾನ್ ಟೈಗರ್ ಶ್ರಾಫ್ ರಿಸ್ಕಿ ಸ್ಟಂಟ್ಸ್ ಮಾಡುವುದರಲ್ಲಿ ಸಿದ್ಧಹಸ್ತರು. ಈ ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯುವ ಸಾಹಸ ಮಾಡಲಾಗುತ್ತಿದೆ.
ಟೈಗರ್ ಶ್ರಾಫ್, ಸಂಜಯ್ ದತ್ ಜೊತೆಗೆ ಸೋನಮ್ ಬಜ್ವಾ, ಹರ್ನಾಜ್ ಸಂದು, ಮಹೇಶ್ ಟಾಕೂರ್ ಚಿತ್ರದಲ್ಲಿ ನಟಿಸಿದ್ದಾರೆ. ಫಸ್ಟ್ ಲುಕ್ ಪೋಸ್ಟರ್‌ನಿಂದಲೇ 'ಬಾಘಿ'-4 ಸಿನಿಮಾ ಗಮನ ಸೆಳೆದಿತ್ತು. ಬಹಳ ರಗಡ್ ಲುಕ್‌ನಲ್ಲಿ ಟೈಗರ್ ಶ್ರಾಫ್ ದರ್ಶನ ಕೊಟ್ಟಿದ್ದರು. ಟಾಯ್ಲೆಟ್ ಕಮೋಡ್ ಮೇಲೆ ಕೂತು ಒಂದು ಕೈಯಲ್ಲಿ ಕತ್ತಿ ಹಿಡಿದು ಮತ್ತೊಂದು ಕೈಯಲ್ಲಿ ಮದ್ಯದ ಬಾಟಲಿ ಹಿಡಿದು, ಸಿಗರೇಟ್ ಸೇದುತ್ತಾ ಹುಬ್ಬೇರಿಸಿದ್ದರು. ರಕ್ತಸಿಕ್ತವಾದ ಟಾಯ್ಲೆಟ್ ಚಿತ್ರದಲ್ಲಿ ಎಷ್ಟು ವೈಲೆನ್ಸ್ ಇರುತ್ತದೆ ಎನ್ನುವುದನ್ನು ಸಾರಿ ಹೇಳುವಂತಿತ್ತು.


Click it and Unblock the Notifications











