ಸಿನಿಮಾ ಮಾಡೋದು ಬಿಟ್ಟು ಪಾಠ ಮಾಡಲು ಹೋಗ್ತಾರಾ ಬಾಲಿವುಡ್ ಖ್ಯಾತ ನಿರ್ದೇಶಕ!?
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಸಿನಿಮಾಗಳ ಗಟ್ಟಿ ಕತೆ, ನಿರೂಪಣೆಗೆ ಹೆಸರಾದವರು. ಇದಲ್ಲದೆ ಸಿನಿಮಾ ನಟರಾಗಿಯೂ ಪರಿಚಿತರು. ಚಿತ್ರ ಮತ್ತು ಚಿತ್ರೋದ್ಯಮದ ಬಗ್ಗೆ ತಮ್ಮದೇ ವಿಭಿನ್ನ ನೆಲೆಗಟ್ಟಿನಲ್ಲಿ ಯೋಚಿಸುವ ಮತ್ತು ಮಾತನಾಡುವ ಅವರು ಈಗ ಹೊಸ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ.
ಅನುರಾಗ್ ಕಶ್ಯಪ್ ಚಲನಚಿತ್ರಗಳು ಮತ್ತು ಶೋಗಳಿಗೆ ನಿರ್ದೇಶನ ಮತ್ತು ಚಿತ್ರಕಥೆ ಬರೆಯುವ ಜೊತೆಗೆ, ಚಲನಚಿತ್ರ ನಿರ್ಮಾಣದ ಬಗ್ಗೆ ಕಲಿಸಲು ಉತ್ಸಾಹ ತೋರಿಸುತ್ತಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು ಶೀಘ್ರದಲ್ಲೇ ಯಾವು 'ಪಾಠ' ಮಾಡಲಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.

ಕೇರಳದಲ್ಲಿ ಪಾಠ ಮಾಡಲಿದ್ದಾರೆ ಅನುರಾಗ್ ಕಶ್ಯಪ್!
'ಫ್ಲಿಪ್ ದಿ ಸ್ಕ್ರಿಪ್ಟ್ ವಿತ್ ಶುಭಾ' ಪಾಡ್‌ಕಾಸ್ಟ್ ಸಂದರ್ಶನಲ್ಲಿ ಶುಭ್ರ ಅಯ್ಯಪ್ಪ ಅವರೊಂದಿಗೆ ಮಾತನಾಡಿರುವ ಅನುರಾಗ್ ಕಶ್ಯಪ್ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ತಮಗೆ ಯಾವ ವೈಯಕ್ತಿಕ ಗುರಿ ಅಥವಾ ಆಕಾಂಕ್ಷೆಯಿದೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಬಕೆಟ್ ಲಿಸ್ಟ್‌ನಲ್ಲಿ ಬಹಳಷ್ಟು ಸಂಗತಿಗಳಿವೆ ಎಂದಿದ್ದಾರೆ.
ಅದರಲ್ಲೂ ಸಿನಿಮಾರಂಗದ ಬಗ್ಗೆ ಆಸಕ್ತಿಯಿರುವ ಯುವಕರಿಗೆ ಚಿತ್ರ ನಿರ್ಮಾಣದ ಬಗ್ಗೆ ಓದಿಸಲು ಮತ್ತು ಕಲಿಸಲು ಸಾಕಷ್ಟು ಸಮಯವನ್ನು ಮೀಸಲಿಡುವುದಾಗಿ ತಿಳಿಸಿದ್ದಾರೆ. "ಇದು ಈಗ ಕಾರ್ಯರೂಪಕ್ಕೆ ಬರಲಿದೆ. ನಾನು ಕೇರಳದ ಕೊಟ್ಟಾಯಂನಲ್ಲಿ ಕಲಿಸಲು ಹೋಗುತ್ತಿದ್ದೇನೆ. ಯುವ ಚಲನಚಿತ್ರ ನಿರ್ದೇಶಕರಿಗೆ ಮಾರ್ಗದರ್ಶನ ನೀಡಲು ನಾನು ಇಷ್ಟಪಡುತ್ತೇನೆ" ಎಂದು ಮಹತ್ವದ ಸಂಗತಿಯನ್ನು ಹೇಳಿದ್ದಾರೆ.
ಚಾಲಕನ ಮಗನ ಭವಿಷ್ಯಕ್ಕೆ ಅನುರಾಗ್ ಕಶ್ಯಪ್ ಮಾಡಿದ್ದೇನು?
ಇದೇ ಸಂದರ್ಶನದಲ್ಲಿ ತಮ್ಮ ಚಾಲಕ ಮತ್ತು ಅವರ ಮಗನ ಬಗ್ಗೆ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಗೊತ್ತಿರುವುದನ್ನು ಹೇಗೆ ಹಂಚಿಕೊಳ್ಳಬೇಕು ಎಂಬುದನ್ನು ನಿರ್ದೇಶಕ ವಿವರಿಸಿದ್ದಾರೆ. "ನನ್ನ ಡ್ರೈವರ್ ನನ್ನ ಬಳಿಗೆ ಬಂದು, ನನ್ನ ಮಗನಿಗೆ ಏನಾದರು ಸಹಾಯ ಮಾಡಿ' ಎಂದು ಹೇಳಿದರು. ನನ್ನ ಚಾಲಕನ ಮಗ ಉನ್ನತ ಶಿಕ್ಷಣ ಪಡೆದಿದ್ದಾನೆ. ಅವರು BITS ಗೆ ಹೋಗಿದ್ದರು. ನಾನು ಅವನನ್ನು ಕರೆದು, ಏನು ಮಾಡಬೇಕು ಎಂದುಕೊಂಡಿದ್ದೀಯ' ಎಂದು ಕೇಳಿದೆ. ಅವರ ಆಸಕ್ತಿ ಕ್ರಿಯೆಟಿವ್ ಆಗಿತ್ತು, ಆದ್ದರಿಂದ ನಾನು ಅವರಿಗೆ ಗ್ರಾಫಿಕ್ ನಾವೆಲ್‌ಗಳನ್ನು ನೀಡಲು ಪ್ರಾರಂಭಿಸಿದೆ. ಬಳಿಕ ನನ್ನ ಡ್ರೈವರ್‌ಗೆ ಅವನ ಮಗನ ವಿಷಯ ನನಗೆ ಬಿಟ್ಟುಬಿಡಲು ಹೇಳಿದೆ" ಎಂದಿದ್ದಾರೆ.
ಮುಂದುವರಿದು, "ಈಗ ಅವರ ಮಗ ಗ್ರಾಫಿಕ್ ನಾವೆಲ್‌ಗಳಲ್ಲಿ ಮುಳುಗಿದ್ದಾನೆ. ಭಾರತದಲ್ಲಿ ನೀವು ನೋಡಲು ಆಗದಂತ ನಾವೆಲ್‌ಗಳನ್ನು ಅವನು ಓದುತ್ತಿದ್ದಾನೆ. ಅವನು ಬೇರೆ ದಿಕ್ಕಿನಲ್ಲಿ ಹೋಗುತ್ತಿದ್ದಾನೆ. ನಾನು ಅದನ್ನು ಇಷ್ಟಪಡುತ್ತೇನೆ" ಎಂದು ಅನುರಾಗ್ ಖುಷಿ ಹಂಚಿಕೊಂಡಿದ್ದಾರೆ.
ಅನುರಾಗ್ ಕಶ್ಯಪ್
ಅನುರಾಗ್ ಕಶ್ಯಪ್ ಬ್ಲ್ಯಾಕ್ ಫ್ರೈಡೇ, ದೇವ್.ಡಿ, ದಟ್ ಗರ್ಲ್ ಇನ್ ಯೆಲ್ಲೋ ಬೂಟ್ಸ್, ದಿ ಲಂಚ್‌ಬಾಕ್ಸ್, ಮಸಾನ್ ಮತ್ತು ಉಡ್ತಾ ಪಂಜಾಬ್ ಸೇರಿ ಅನೇಕ ಸಿನಿಮಾಗಳನ್ನು ನೀಡಿದ್ದಾರೆ. ಇದರ ಜೊತೆಗೆ ಗುಲಾಲ್, ಐ ಆಮ್, ಎಕೆ ವರ್ಸಸ್ ಎಕೆ, ಕುತ್ತೆ ಮತ್ತು ಹಡ್ಡಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಗ್ಯಾಂಗ್ಸ್ ಆಫ್ ವಾಸೇಪುರ್ ಅವರಿಗೆ ಸಕತ್ ಫೇಮ್ ತಂದುಕೊಟ್ಟಿತು.


Click it and Unblock the Notifications










