ಅಲ್ಲು ಅರ್ಜುನ್ ಬಾಲಿವುಡ್ ಎಂಟ್ರಿ; ಶಾರುಖ್ ಸಿನಿಮಾದಲ್ಲಿ ನಟನೆ!
ಅಲ್ಲು ಅರ್ಜುನ್.. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ಸ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೊಂದಿರುವ ನಟರು ಎಂದ ಕೂಡಲೇ ಕೇಳಿಬರುವ ಕೆಲವು ಹೆಸರುಗಳಲ್ಲಿ ಒಂದು. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ದೊಡ್ಡ ಮಟ್ಟದಲ್ಲಿ ಕ್ಲಿಕ್ ಆಗುವ ಮುನ್ನವೇ ದೇಶದಾದ್ಯಂತ ತನ್ನ ಅದ್ಭುತ ಡಾನ್ಸ್, ಉತ್ತಮ ನಟನೆ ಹಾಗೂ ಹಿಟ್ ಚಿತ್ರಗಳಿಂದ ಹೆಸರು ಮಾಡಿದ್ದ ನಟ.
ವಿಜೇತ ಹಾಗೂ ಸ್ವಾತಿ ಮುತ್ಯಂ ಚಿತ್ರಗಳಲ್ಲಿ ಬಾಲ ನಟನಾಗಿ ನಟಿಸಿದ್ದ ಅಲ್ಲು ಅರ್ಜುನ್ 2003ರಲ್ಲಿ ಬಿಡುಗಡೆಗೊಂಡ ಗಂಗೋತ್ರಿ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಹೀರೊ ಆಗಿ ಬಡ್ತಿ ಪಡೆದರು. ಇನ್ನು ಮೆಗಾ ಫ್ಯಾಮಿಲಿಯ ನಟ ಹಾಗೂ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ತನ್ನ ಪ್ರತಿಭೆಯಿಂದ ಸಿನಿ ರಸಿಕರ ಮನಗೆದ್ದು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿ ತೆಲುಗು ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಆಗಿ ನೆಲೆಯೂರಿದ್ದಾರೆ.
ಹೀಗೆ ತನ್ನ ಸ್ವಂತ ಶ್ರಮದಿಂದ ಎತ್ತರಕ್ಕೆ ಬೆಳೆದಿರುವ ಅಲ್ಲು ಅರ್ಜುನ್ ತೆಲುಗು ಹೊರತುಪಡಿಸಿ ಬೇರೆ ಯಾವುದೇ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿಲ್ಲ. ಪುಷ್ಪ ಚಿತ್ರದ ಮೂಲಕ ದೇಶದ ಎಲ್ಲಾ ಭಾಷೆಯ ಸಿನಿ ರಸಿಕರಿಗೂ ದೊಡ್ಡ ಮಟ್ಟದಲ್ಲಿ ರೀಚ್ ಆಗಿರುವ ಅಲ್ಲು ಅರ್ಜುನ್‌ಗೆ ಇದೀಗ ಬಾಲಿವುಡ್ ಸಿನಿಮಾವೊಂದರಲ್ಲಿ ನಟಿಸಲು ಆಹ್ವಾನ ಬಂದಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಶಾರುಖ್ ಸಿನಿಮಾದಲ್ಲಿ ಬನ್ನಿ ವಿಶೇಷ ಪಾತ್ರ
ಹೌದು, ಶಾರುಖ್ ಖಾನ್ ಹಾಗೂ ಸೌತ್ ನಿರ್ದೇಶಕ ಅಟ್ಲಿ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಜವಾನ್ ಚಿತ್ರದಲ್ಲಿ ಅಲ್ಲು ಅರ್ಜುನ್ ವಿಶೇಷ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಅಟ್ಲಿ ಪಾತ್ರದ ಬಗ್ಗೆ ಈಗಾಗಲೇ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದ್ದು, ಅಲ್ಲು ಅರ್ಜುನ್ ತಮ್ಮ ನಿರ್ಣಯವನ್ನು ತಿಳಿಸವುದು ಬಾಕಿ ಇದೆ. ಒಂದುವೇಳೆ ಅಲ್ಲು ಅರ್ಜುನ್ ಈ ವಿಶೇಷ ಪಾತ್ರ ಮಾಡಲು ಒಪ್ಪಿಗೆ ನೀಡಿದರೆ ಬಾಲಿವುಡ್ ಎಂಟ್ರಿ ಪಕ್ಕಾ ಆಗಲಿದೆ.

ಅಭಿಮಾನಿಗಳು ಫುಲ್ ಖುಷ್
ಇನ್ನು ಅಲ್ಲು ಅರ್ಜುನ್ ಜವಾನ್ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ ಎಂಬ ಸುದ್ದಿಯ ಕುರಿತು ಪ್ರತಿಕ್ರಿಯಿಸುತ್ತಿರುವ ಅಲ್ಲು ಅರ್ಜುನ್ ಹಾಗೂ ಶಾರುಖ್ ಖಾನ್ ಅಭಿಮಾನಿಗಳು ಮತ್ತು ಸಿನಿ ರಸಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಜೋಡಿಯನ್ನು ಒಟ್ಟಿಗೆ ತೆರೆ ಮೇಲೆ ನೋಡುವುದೇ ಹಬ್ಬ ಎಂದು ಕಾಮೆಂಟ್ ಮಾಡುತ್ತಿರುವ ಸಿನಿ ರಸಿಕರು ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಲಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರುವ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದಲ್ಲಿ ಸಹ ಸಲ್ಮಾನ್ ಖಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಸರ್‌ಪ್ರೈಸ್ ನೀಡಿದ್ರು.

ಬಾಯ್‌ಕಾಟ್ ತಣ್ಣಗಾಗೋ ಸಮಯ
ಕಳೆದೆರಡು ವರ್ಷಗಳಿಂದ ಬಾಲಿವುಡ್ ಚಿತ್ರರಂಗವನ್ನು ಕುಗ್ಗಿಸಿದ್ದ ಬಾಯ್‌ಕಾಟ್ ಟ್ರೆಂಡ್ ತಣ್ಣಗಾಗುವ ಸಮಯ ಬಂದಂತಿದೆ. ಸದ್ಯ ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರುವ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುವ ಸನಿಹದಲ್ಲಿದ್ದು, ಈ ಚಿತ್ರ ಬಾಯ್‌ಕಾಟ್ ವಿರೋಧದ ನಡುವೆಯೂ ಗೆದ್ದು ಬೀಗಿದೆ. ಇನ್ನು ಜವಾನ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ಕೂಡ ನಟಿಸಿದರೆ ಆ ಚಿತ್ರಕ್ಕೂ ಸಹ ಬಾಯ್‌ಕಾಟ್ ಬಿಸಿ ತಟ್ಟುವುದಿಲ್ಲ ಎನ್ನಬಹುದು. ಸೌತ್ ನಿರ್ದೇಶಕ ಅಟ್ಲಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ದಕ್ಷಿಣ ರಾಜ್ಯಗಳಲ್ಲಿ ಈ ಚಿತ್ರ ಯಾವುದೇ ವಿರೋಧವಿಲ್ಲದೇ ಒಳ್ಳೆಯ ಓಪನಿಂಗ್ ಪಡೆದುಕೊಳ್ಳಲಿದೆ ಎನ್ನಲಾಗುತ್ತಿತ್ತು. ಈಗ ಅಲ್ಲು ಅರ್ಜುನ್ ಸಹ ತಂಡ ಸೇರುವುದರಿಂದ ಬಾಯ್‌ಕಾಟ್ ಕಾಟ ಚಿತ್ರತಂಡಕ್ಕೆ ಬಹುತೇಕ ಇರುವುದಿಲ್ಲ ಎನ್ನಬಹುದು.


Click it and Unblock the Notifications











