'ದಿ ವ್ಯಾಕ್ಸಿನ್ ವಾರ್': ಬಿಡುಗಡೆಯಾಗಿ ಮೂರೇ ದಿನಕ್ಕೆ ಉಚಿತ ಟಿಕೆಟ್ ಘೋಷಿಸಿದ ವಿವೇಕ್ ಅಗ್ನಿಹೋತ್ರಿ!
ದಿ ಕಾಶ್ಮೀರಿ ಫೈಲ್ಸ್ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಇತ್ತೀಚಿನ ಚಿತ್ರ 'ದಿ ವ್ಯಾಕ್ಸಿನ್ ವಾರ್' ಸೆಪ್ಟೆಂಬರ್ 28 ರಂದು ಚಿತ್ರಮಂದಿರಗಳಿಗೆ ಬಿಡುಗಡೆಯಾಗಿದೆ. ಮೂರು ದಿನಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಕೇವಲ 3.25 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ನಡುವೆ, ನಿರ್ದೇಶಕರು ತಮ್ಮ ಅಭಿಮಾನಿಗಳಿಗೆ ವಿಶೇಷ ಘೋಷಣೆಯನ್ನು ಘೋಷಿಸಿದ್ದಾರೆ.
ಸೂಪರ್ ಹಿಟ್ ಸಿನಿಮಾ ನೀಡಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿತ್ತು. ಆದರೆ, ಈದ್ ಮಿಲಾದ್ ಸೇರಿ ಸಾಲು ಸಾಲು ರಜೆಯಿದ್ದರೂ ಕೂಡ ಸಿನಿಮಾದ ಕಲೆಕ್ಷನ್‌ನಲ್ಲಿ ಏನು ಉಪಯೋಗವಾಗಿಲ್ಲ. ಸೆಪ್ಟೆಂಬರ್ 28 ರಂದು ಬಿಡುಗಡೆಯಾದ ಸಿನಿಮಾ ಗಳಿಸಿರುವುದು ಕೇವಲ 3.25 ಕೋಟಿ ರೂಪಾಯಿ ಮಾತ್ರ.

ದಿ ವ್ಯಾಕ್ಸಿನ್ ವಾರ್ 1 ಟಿಕೆಟ್ ಖರೀದಿಸಿ 1 ಟಿಕೆಟ್ ಉಚಿತ ಪಡೆಯಿರಿ
ಇಂದಿನಿಂದ, 'ದಿ ವ್ಯಾಕ್ಸಿನ್ ವಾರ್' ಚಿತ್ರವು ಥಿಯೇಟರ್‌ಗಳಲ್ಲಿ ಇರುವವರೆಗೆ '1 ಖರೀದಿಸಿ 1 ಟಿಕೆಟ್ ಉಚಿತ' ಆಫರ್ ಅನ್ನು ಹೊಂದಿರುತ್ತದೆ. ಈ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ನಟ ಶಾರುಖ್ ಖಾನ್ ಅವರ ಜವಾನ್ ಸಿನಿಮಾ ಸಾವಿರ ಕೋಟಿ (1,000 ಕೋಟಿ) ಕಲೆಕ್ಷನ್ ಮಾಡಿದ ಕಾರಣ ಮೂರು ದಿನ ಸಿನಿಮಾ ನೋಡಲು ಬರುವವರಿಗೆ ಒಂದು ಟಿಕೆಟ್ ಕೊಂಡರೆ ಒಂದು ಉಚಿತ ಎಂದು ನಟ ಘೋಷಿಸಿದ್ದರು.
ಬ್ಲಾಕ್ಬಸ್ಟರ್ ಹಿಟ್ ಚಿತ್ರ, 'ದಿ ಕಾಶ್ಮೀರ್ ಫೈಲ್ಸ್' ನಂತರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ 'ದಿ ವ್ಯಾಕ್ಸಿನ್ ವಾರ್' ಸಿನಿಮಾದಲ್ಲಿ ನಾನಾ ಪಾಟೇಕರ್ ಪ್ರಮುಖ ಪಾತ್ರ ಮಾಡಿದ್ದಾರೆ. ಟಿಕೆಟ್ ಉಚಿತದ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. "ಸ್ನೇಹಿತರೇ, ಇಂದು ಭಾನುವಾರ ಮತ್ತು ಗಾಂಧಿ ಜಯಂತಿ ರಜೆಯ ಸಂದರ್ಭದಲ್ಲಿ, ದಿ ವ್ಯಾಕ್ಸಿನ್ ವಾರ್ ಸಿನಿಮಾ ನೋಡಿ. ಉಚಿತ ಟಿಕೆಟ್ ಪಡೆಯಿರಿ. ಈ ಉಚಿತ ಟಿಕೆಟ್ ಅನ್ನು ನಿಮ್ಮ ಸೇವಕಿ, ಮನೆಗೆಲಸದಾಕೆ ಅಥವಾ ಮಹಿಳೆ/ಬಾಲಕಿಗೆ ನೀಡಿ. ದಯವಿಟ್ಟು ಸಿನಿಮಾವನ್ನು ಆನಂದಿಸಿ" ಎಂದು ಬರೆಸಿದ್ದಾರೆ.
ಇನ್ನು, 'ದಿ ವ್ಯಾಕ್ಸಿನ್ ವಾರ್' 2ನೇ ದಿನದಂದು ಕೇವಲ 0.90 ಕೋಟಿ ಗಳಿಸಿದೆ. 3 ನೇ ದಿನದ ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ಸ್ವಲ್ಪ ಬೆಳವಣಿಗೆಯನ್ನು ಕಂಡಿತ್ತು. ಆದರೆ, 1 ಕೋಟಿ ರೂಪಾಯಿ ಗಳಿಸಲು ಮಾತ್ರ ಸಾಧ್ಯವಾಗಿದೆ. ಸಿನಿಮಾದ ಒಟ್ಟು ಸಂಗ್ರಹವು 3.25 ಕೋಟಿ. ಆದರೆ, ಸಿನಿಮಾ ಕಡಿಮೆ ಬಜೆಟ್ ಆಗಿರುವ ಕಾರಣ ಹೆಚ್ಚು ನಷ್ಟವಿಲ್ಲ ಎನ್ನಬಹುದು.

ದಿ ವ್ಯಾಕ್ಸಿನ್ ವಾರ್
'ದಿ ವ್ಯಾಕ್ಸಿನ್ ವಾರ್' ಚಿತ್ರದಲ್ಲಿ ನಾನಾ ಪಾಟೇಕರ್, ಕಾಂತಾರ ಬೆಡಗಿ ಸಪ್ತಮಿ ಗೌಡ, ಪಲ್ಲವಿ ಜೋಶಿ, ರೈಮಾ ಸೇನ್ ಮತ್ತು ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ (ಐಸಿಎಂಆರ್) ಮಾಜಿ ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರ 'ಗೋಯಿಂಗ್ ವೈರಲ್: ಮೇಕಿಂಗ್ ಆಫ್ ಕೋವಾಕ್ಸಿನ್' ಆಧಾರಿತ ಚಲನಚಿತ್ರವು ಸೆಪ್ಟೆಂಬರ್ 28 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.


Click it and Unblock the Notifications











