ಪ್ರೇಕ್ಷಕರ ಕಣ್ಣಿಗೆ ಮಣ್ಣೆರಚುತ್ತಿದ್ದಾರಾ ಆಲಿಯಾ ಭಟ್ ? ಸಾಕ್ಷಿ ಸಮೇತ 'ಜಿಗ್ರಾ' ಕಲೆಕ್ಷನ್ ಎಲ್ಲ ಫೇಕ್ ಎಂದ ನಿರ್ಮಾಪಕಿ...!
ಚಿತ್ರವೊಂದು ಬಿಡುಗಡೆಯಾಗಿ ಇನ್ನೂ 24 ಘಂಟೆ ಕೂಡ ಆಗಿರಲ್ಲ, ಅಷ್ಟರಲ್ಲಿಯೇ ಚಿತ್ರತಂಡ ನಮ್ಮ ಚಿತ್ರ ಜನ ಮನ ಗೆದ್ದಿದೆ ಎಂದು ತಮಟೆ ಹೊಡೆಯಲು ಶುರು ಮಾಡುತ್ತೆ. ಸಾಲದಕ್ಕೆ ಸಕ್ಸಸ್ ಮೀಟ್ ಏರ್ಪಡಿಸಿ ಮೊದಲನೇ ದಿನದ ಗಳಿಕೆಯ ಲೆಕ್ಕವನ್ನು ಮುಂದಿಡುತ್ತೆ. ತಮ್ಮ ಬೆನ್ನನ್ನೂ ತಾವೇ ತಟ್ಟಿಕೊಳ್ಳುತ್ತೆ. ಹೀಗೆ ತಟ್ಟಿಕೊಳ್ಳುವರಲ್ಲಿ ಮುಂದೆ ಬಹುತೇಕರು ಮರಳಿ ಚಿತ್ರರಂಗದಲ್ಲಿ ಕಾಣಿಸುವುದಿಲ್ಲ ಅನ್ನುವುದು ಬೇರೆ ವಿಚಾರ.
ಅದರಲ್ಲಿಯೂ ಬಾಲಿವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ಚಿತ್ರ ಬಿಡುಗಡೆಯಾದ 48ಘಂಟೆಯಲ್ಲಿಯೇ ಚಿತ್ರದ ಗಳಿಕೆ 100 ಕೋಟಿಯ ಗಡಿಯನ್ನೂ ದಾಟಿರುತ್ತೆ. ಇದು ಹೇಗೆ ಸಾಧ್ಯ..? ಎನ್ನುವ ಯಕ್ಷ ಪ್ರಶ್ನೆ ಇವತ್ತು ಕೂಡ ಅನೇಕರಲ್ಲಿದೆ. ಕಾಲ ಕಾಲಕ್ಕೆ ಈ ಕುರಿತು ಚರ್ಚೆ ನಡೆಯುತ್ತಲೇ ಇದೆ. ಸದ್ಯದ ಸಮಾಚಾರ ಏನೆಂದರೆ ಈ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪ್ರೇಕ್ಷಕರನ್ನು ಯಾಮಾರಿಸಲು, ತಮ್ಮ ಚಿತ್ರಗಳತ್ತ ಸೆಳೆಯಲು, ಚಿತ್ರತಂಡಗಳೇ ಷಡ್ಯಂತ್ರವನ್ನು ರಚಿಸುತ್ತಾವಾ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಜಿಗ್ರಾ ಎಂಬ ಸಿನಿಮಾ.

ಹೌದು, ಆಲಿಯಾ ಭಟ್ ನಿರ್ಮಿಸಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಜಿಗ್ರಾ ನಾನಾ ಕಾರಣಕ್ಕೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಸುತ್ತ ವಿವಾದದ ಹುತ್ತ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಚಿತ್ರದ ಗಳಿಕೆಯ ಮೇಲೂ ಪ್ರಶ್ನಾರ್ಥಕ ಚಿಹ್ನೆ ಸದ್ಯ ಮೂಡಿದೆ. ಬಾಲಿವುಡ್‌ನ ವಿಶ್ವಾಸಾರ್ಹತೆಯನ್ನೂ ಕೂಡ ಜಿಗ್ರಾ ಪ್ರಶ್ನೆ ಮಾಡಿದೆ. ವಿಶೇಷ ಅಂದರೆ ಈ ಎಲ್ಲದಕ್ಕೂ ಕಾರಣವಾಗಿದ್ದು ಹೊರಗೆ ಇರುವ ವ್ಯಕ್ತಿಯಲ್ಲ. ಬದಲಿಗೆ ಚಿತ್ರರಂಗದಲ್ಲಿರುವ ವ್ಯಕ್ತಿಯೇ ಈ ಎಲ್ಲ ಚರ್ಚೆಗೆ ನಾಂದಿಯನ್ನು ಹಾಡಿದ್ದಾರೆ.
ಹೌದು, ಅಸಲಿಗೆ ಜಿಗ್ರಾ ಮೊದಲ ದಿನ ಹತ್ ಹತ್ರ ನಾಲ್ಕು ಕೋಟಿ ಹಣ ಗಳಿಸಿದೆ ಎನ್ನುವ ಲೆಕ್ಕವನ್ನು ಪ್ರಸಿದ್ಧ ವಿಮರ್ಷಕ ಮತ್ತು ಬಾಲಿವುಡ್‌ನ ತಜ್ಞ ತರಣ್ ಆದರ್ಶ್ ನೀಡಿದ್ದಾರೆ. ಆದರೆ, ವಾಸ್ತವದಲ್ಲಿ ಚಿತ್ರಮಂದಿರದಲ್ಲಿ ಜನರೇ ಇಲ್ಲ. ಹೀಗಿದ್ದಾಗ ಇಷ್ಟೊಂದು ಹಣವನ್ನು ಚಿತ್ರ ಗಳಿಸಲು ಹೇಗೆ ಸಾಧ್ಯ..? ಈ ಪ್ರಶ್ನೆಯನ್ನು ಬಾಲಿವುಡ್‌ನ ನಿರ್ಮಾಪಕಿ-ನಿರ್ದೇಶಕಿ ಮತ್ತು ಟಿ ಸಿರೀಸ್‌ನ ಮಾಲೀಕ ಭೂಷಣ್ ಕುಮಾರ್ ಅವರ ಪತ್ನಿ ದಿವ್ಯಾ ಖೋಸ್ಲಾ ಕುಮಾರ್ ಎತ್ತಿದ್ದಾರೆ. ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.

ಜಿಗ್ರಾ ಚಿತ್ರ ನೋಡಲು ಇಂದು ಸಿಟಿ ಮಾಲ್ ಪಿವಿಆರ್‌ಗೆ ಹೋಗಿದ್ದೆ, ಆದರೆ ಚಿತ್ರಮಂದಿರ ಸಂಪೂರ್ಣ ಖಾಲಿಯಾಗಿತ್ತು ಎಂದಿರುವ ದಿವ್ಯಾ ಖೋಸ್ಲಾ ಕುಮಾರ್ ಆಲಿಯಾ ಭಟ್ ಅವರ ಧೈರ್ಯವನ್ನು ನಿಜಕ್ಕೂ ಮೆಚ್ಚಬೇಕು, ತಾವೇ ಎಲ್ಲ ಚಿತ್ರಮಂದಿರಗಳಲ್ಲಿ ಟಿಕೆಟ್ ಹರಿಸಿ, ತಮ್ಮ ಚಿತ್ರ ಹೌಸ್‌ಫುಲ್ ಆಗಿದೆ ಎಂಬಂತೆ ಬಿಂಬಿಸುವುದಲ್ಲದೇ ಗಳಿಕೆಯ ಲೆಕ್ಕವನ್ನು ಕೂಡ ಬಾಯಿಗೆ ಬಂದಂತೆ ಹೇಳುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಆಲಿಯಾ ಭಟ್ ಮೇಲೆ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಮಾಧ್ಯಮದವರು ಈ ವಿಚಾರದಲ್ಲಿ ಯಾಕೆ ಮೌನವಾಗಿದ್ಧಾರೆ ಎಂದು ಪ್ರಶ್ನೆಯನ್ನು ಕೂಡ ಮಾಡಿದ್ದಾರೆ.
ಆಲಿಯಾ ಭಟ್ ಮೇಲೆ ದಿವ್ಯಾ ಖೋಸ್ಲಾ ಕುಮಾರ್ ಎಸೆದ ಈ ಬಾಂಬು ಚಿತ್ರದ ಇನ್ನೊಬ್ಬ ನಿರ್ಮಾಪಕ ಕರಣ್ ಜೋಹರ್ ತಲೆ ಬಿಸಿಯನ್ನು ಹೆಚ್ಚಿಸಿದೆ. ಹೀಗಾಗಿಯೇ ಪರೋಕ್ಷವಾಗಿ ದಿವ್ಯಾ ಖೋಸ್ಲಾ ಕುಮಾರ್‌ಗೆ ತಿರುಗೇಟು ನೀಡಿರುವ ಕರಣ್ ಜೋಹರ್ ಮೂರ್ಖರ ಜೊತೆ ಯಾವತ್ತು ವಾದ ಮಾಡಲು ಹೋಗಬಾರದು ಎಂದು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ದಿವ್ಯಾ ಖೋಸ್ಲಾ ಕುಮಾರ್, ಆಲಿಯಾ ಭಟ್ ಮತ್ತು ಕರಣ್ ಜೋಹರ್ ನಡುವಿನ ಈ ವಾಗ್ಯುದ್ದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗಿದೆ. ಬಾಲಿವುಡ್ ಹಂಚಿಕೊಳ್ಳುವ ಲೆಕ್ಕಾಚಾರದ ಮೇಲಿನ ಅನುಮಾನ ಹೆಚ್ಚಿಸಿದೆ.


Click it and Unblock the Notifications











