ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳಲು ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ?
ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.
ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್.. ಟಾಲಿವುಡ್‌ನಿಂದ ಕಾಲಿವುಡ್.. ಕಾಲಿವುಡ್‌ನಿಂದ ಮರಳಿ ಟಾಲಿವುಡ್‌ಗೆ ಬಂದು ಆ ನಂತರ ಸೀದಾ ಬಾಲಿವುಡ್ ಗೆ ಹೋದ ರಶ್ಮಿಕಾ ಒಂದಾದ ಮೇಲೊಂದು ಅವಕಾಶ ಪಡೆಯುತ್ತಿದ್ದಾರೆ. ಸೂಪರ್ ಸ್ಟಾರ್‌ಗಳ ಜೊತೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಯಲ್ಲಿ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿದ್ದಾರೆ.

ಹೌದು, ಕಿರಿಕ್ ಪಾರ್ಟಿ ಚಿತ್ರದ ನಂತರ ತೆಲುಗು ಚಿತ್ರರಂಗಕ್ಕೆ ವಲಸೆ ಹೋದ ರಶ್ಮಿಕಾ, ಆಂಧ್ರದಲ್ಲಿ ಆರಂಭದಲ್ಲಿ ನಲವತ್ತು ಲಕ್ಷ ಸಂಭಾವನೆ ಪಡೆಯುತ್ತಿದ್ದರು. ಆ ನಂತರ ಈ ಸಂಭಾವನೆ ಮೊತ್ತ 80ಲಕ್ಷಕ್ಕೆ ಏರಿತ್ತು. ಇನ್ನೂ ತೆಲುಗು ಜೊತೆಯಲ್ಲಿ ಅದ್ಯಾವಾಗ ತಮಿಳಿನಲ್ಲಿಯೂ ಅವಕಾಶಗಳ ಹೆಬ್ಬಾಗಿಲು ತೆರೆಯಿತೋ ಆಗ ರಶ್ಮಿಕಾ ತಮ್ಮ ಸಂಭಾವನೆಯನ್ನು ಇನ್ನೂ ಹೆಚ್ಚಿಸಿಕೊಂಡರು. ಒಂದು ವರದಿಯ ಪ್ರಕಾರ ವಿಜಯ್ ಜೊತೆ ವಾರಿಸು ಚಿತ್ರದಲ್ಲಿ ತೆರೆ ಹಂಚಿಕೊಳ್ಳಲು ಒಂದು ಕೋಟಿ ಸಂಭಾವನೆಯನ್ನು ಪಡೆದಿದ್ದರು.
ಇಲ್ಲಿಂದಾಚೆ ಚಿತ್ರದಿಂದ ಚಿತ್ರಕ್ಕೆ ತಮ್ಮ ಸಂಭಾವನೆಯನ್ನು ಹೆಚ್ಚೆಚ್ಚು ಮಾಡುತ್ತಲೇ ಬಂದ ರಶ್ಮಿಕಾ ಆ ನಂತರ ಚಿತ್ರವೊಂದಕ್ಕೆ ಮೂರರಿಂದ ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಿದ್ದರು ಎನ್ನುವ ಸುದ್ದಿ ಇದೆ. ಇಂತಹ ರಶ್ಮಿಕಾ ಮಂದಣ್ಣ ಈಗ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳಲು ಒಂದಲ್ಲ.. ಐದಲ್ಲ.. ಹದಿಮೂರು ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ.
ಅಂದ್ಹಾಗೇ ರಶ್ಮಿಕಾ ಮಂದಣ್ಣ ಈಗಾಗಲೇ ಹಿಂದಿಯಲ್ಲಿ ಗುಡ್ ಬೈ, ಮಿಶನ್ ಮಜ್ನು, ಚಾವಾ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಆ ಪೈಕಿ ಗುಡ್ ಬೈ ಮತ್ತು ಮಿಶನ್ ಮಜ್ನು ತೆರೆಗೆ ಬಂದಿದ್ದು ಹೋಗಿದ್ದು ಗೊತ್ತಾಗಲಿಲ್ಲ. ಆದರೂ ಕೂಡ ರಶ್ಮಿಕಾ ಬೇಡಿಕೆ ಕಡಿಮೆಯಾಗಿಲ್ಲ. ಸಂಭಾವನೆ ಇಳಿಮುಖವಾಗಿಲ್ಲ. ಬದಲಿಗೆ ಹೆಚ್ಚಾಗುತ್ತಿದೆ. ಹೀಗಾಗಿಯೇ ಹುಬ್ಬೇರಿಸಿರುವ ಅನೇಕರು ಸಲ್ಮಾನ್ ಖಾನ್ ಬಾಲಿವುಡ್‌ನ ದೊಡ್ಡ ಸ್ಟಾರ್. ಇನ್ನೂ ಚಿತ್ರಕ್ಕೆ ಹಣ ಹೂಡುತ್ತಿರುವ ಸಾಜಿದ್ ನಾಡಿಯಾವಾಲ ಕೂಡ ಕೋಟಿ ಕುಳ. ಈ ಕಾರಣಕ್ಕೆ ಸಿಕ್ಕ ಅವಕಾಶವನ್ನು ಎನ್ ಕ್ಯಾಶ್ ಮಾಡಿಕೊಂಡು ರಶ್ಮಿಕಾ ಮಂದಣ್ಣ ಹದಿಮೂರು ಕೋಟಿ ಕ್ಯಾಶ್ ಎಣಿಸಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಈ ಗಜಕೇಸರಿ ಯೋಗ ಹೀಗೆ ಮುಂದುವರೆದರೆ ಮುಂದೊಂದು ದಿನ ರಶ್ಮಿಕಾ ಮಂದಣ್ಣ ಭಾರತದ ಅತ್ಯಂತ ದುಬಾರಿ ನಾಯಕಿಯಾಗಲಿದ್ದಾರೆ ಎಂಬ ಭವಿಷ್ಯವನ್ನು ಹೇಳುತ್ತಿದ್ದಾರೆ.

ಇನ್ನುಳಿದಂತೆ ರಶ್ಮಿಕಾ ಮಂದಣ್ಣ ಮತ್ತೊಂದು ಹಿಂದಿ ಚಿತ್ರಕ್ಕೆ ಗ್ನೀನ್ ಸಿಗ್ನಲ್ ನೀಡಿದ್ದಾರೆ, ಬಾಲಿವುಡ್‌ನ ಪ್ರತಿಭಾವಂತ ಹೀರೋ ಆಯುಷ್ಮಾನ್ ಖುರಾನಾಗೆ ನಾಯಕಿಯಾಗಿದ್ದಾರೆ. ಈಗಾಗಲೇ ಸ್ತ್ರೀ.. ಬೇಡಿಯಾ.. ಮುಂಜ್ಯಾನಂತಹ ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದು, ಹಾರರ್ ವಿಭಾಗದಲ್ಲಿ ತಮ್ಮದೇ ಯುನಿವರ್ಸ್‌ನ ಸೃಷ್ಟಿಸುತ್ತಿರುವ ದಿನೇಶ್ ವಿಜ್ಜನ್ ಆಯುಷ್ಮಾನ್ ಕುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇನ್ನೂ ಯಾವುದೇ ಸ್ಟಾರ್‌ಗಳ ಸಹಾಯ ಇಲ್ಲದೇ, ಕೇವಲ ಗಟ್ಟಿ ಕಥೆ ಆಧಾರದ ಮೇಲೆ ತಮ್ಮ ಮುಂಜ್ಯಾ ಚಿತ್ರದ ಮೂಲಕ ಗೆದ್ದ ಆದಿತ್ಯ ಸತ್ಪೋದರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆಯುಷ್ಮಾನ್ ಖುರಾನ ಮತ್ತು ರಶ್ಮಿಕಾ ಅಭಿನಯಿಸಲಿರುವ ಈ ಚಿತ್ರಕ್ಕೆ 'ಥಾಮಾ' ಎಂದು ಹೆಸರಿಡಲಾಗಿದೆ. ಇನ್ನೂ ರಶ್ಮಿಕಾ ಅಭಿನಯದ ಪುಷ್ಪಾ 2 ಬಿಡುಗಡೆಗೆ ಸಿದ್ಧವಾಗಿದೆ.


Click it and Unblock the Notifications











